ಪ್ರಗತಿವಾಹಿನಿ, ಖಾನಾಪುರ:
ಪಟ್ಟಣದ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯಲ್ಲಿ ಶುಕ್ರವಾರ ಕಾರಾಗೃಹ
ವೀಕ್ಷಕರ ಎರಡನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ಸಂಪನ್ನಗೊಂಡಿತು.
ಪಥ ಸಂಚಲನದಲ್ಲಿ ಭಾಗವಹಿಸಿದ್ದ ರಾಜ್ಯದ ವಿವಿಧ ಕಾರಾಗೃಹಗಳ 188 ವೀಕ್ಷಕ
ಪ್ರಶಿಕ್ಷಣಾರ್ಥಿಗಳಿಂದ ರಾಜ್ಯದ ಡಿಜಿ ಮತ್ತು ಕಾರಾಗೃಹ ಇಲಾಖೆಯ ಐಜಿಪಿ ಎನ್.ಎಸ್
ಮೇಘರಿಖ್ ಗೌರವ ವಂದನೆ ಸ್ವೀಕರಿಸಿದರು.
ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮೇಘರಿಖ್, ಕಾರಾಗೃಹ ಇಲಾಖೆಯ ಇತಿಹಾಸದಲ್ಲಿ
ಮೊದಲ ಬಾರಿ ಹೊಸದಾಗಿ ನೇಮಕಾತಿ ಹೊಂದಿದ ಕಾರಾಗೃಹ ವೀಕ್ಷಕರಿಗೆ ಪೊಲೀಸ್ ತರಬೇತಿ
ಶಾಲೆಯ ಮೂಲಕ 9 ತಿಂಗಳ ಬುನಾದಿ ತರಬೇತಿಯನ್ನು ನೀಡಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ತರಬೇತಿಯನ್ನು ಪೂರೈಸಿ ಕಾರಾಗೃಹಗಳಿಗೆ ತೆರಳಲಿರುವ ವೀಕ್ಷಕರು ನಾನಾಕಾರಣಗಳಿಂದ ಜೈಲು ಸೇರುವವರ ಮನಃಪರಿವರ್ತನೆಗೆ ಪ್ರಯತ್ನಿಸಬೇಕು. ಜೈಲುಗಳಲ್ಲಿ ವಿವಿಧ ಒತ್ತಡ, ಹುಚ್ಚಾಟ, ಮಾನಸಿಕ ವೇದನೆ, ಅನಾರೋಗ್ಯ ಮತ್ತಿತರ ಕಾರಣಗಳಿಂದ ನರಳುವ ಕೈದಿಗಳ ಮನಃಸ್ಥಿತಿ ಅರಿತು
ಭವಿಷ್ಯದಲ್ಲಿ ಕೈದಿಗಳು ಉತ್ತಮ ನಾಗರಿಕರಾಗಿ ಹೊರಹೊಮ್ಮುವಂತೆ ಮಾಡುವ
ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು.
ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿ ಜೈಲು ಸೇರುವ ಕೈದಿಗಳ ಮಾನಸಿಕ ಖಿನ್ನತೆ ಹೋಗಲಾಡಿಸಲು ಯತ್ನಿಸಿ ಕೈದಿಗಳನ್ನು ಮನುಷ್ಯರನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡುವಂತೆ ಕರೆ ನೀಡಿದರು.
ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಕಾರಾಗೃಹ ಇಲಾಖೆಗೆ ನಿರೀಕ್ಷಿತ ಅನುದಾನ ನೀಡಿದೆ.
ರಾಜ್ಯದಲ್ಲೇ ದೊಡ್ಡಣ್ಣ ಎನಿಸಿಕೊಂಡಿರುವ ಪೊಲೀಸ್ ಇಲಾಖೆ ಆನೆಯಿದ್ದಂತೆ. ಕಾರಾಗೃಹ
ಇಲಾಖೆ ಅದರ ಬಾಲಕ್ಕೆ ಸಮನಾಗಿದೆ.
ಹೀಗಾಗಿ ಆನೆಯ ಬಾಲ ಹಿಡಿದಾಗ ಮಾತ್ರ ಪೊಲೀಸ್ ಇಲಾಖೆಯವರಿಗೆ ಸಿಗುವಷ್ಟೇ ಸವಲತ್ತುಗಳು ಕಾರಾಗೃಹದವರಿಗೆ ಸಿಗಲಿವೆ. ಇದನ್ನು ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಸೇವೆ ಸಲ್ಲಿಸಲು ಸನ್ನದ್ಧರಾಗಿರುವ ವೀಕ್ಷಕರು ಮನಗಂಡು ಇಲಾಖೆಗೆ ಹೆಸರು ತರುವ ರೀತಿಯಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ಕಾರಾಗೃಹ ಇಲಾಖೆಯ ಐಜಿಪಿ ಎಚ್.ಎಸ್ ರೇವಣ್ಣ ಮಾತನಾಡಿ, ಸಿಬ್ಬಂದಿ ಮತ್ತು ಮೂಲಭೂತ
ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದ್ದ ಕಾರಾಗೃಹ ಇಲಾಖೆಗೆ ರಾಜ್ಯ ಸರ್ಕಾರ ಕಳೆದ
ವರ್ಷ ಸಾಕಷ್ಟು ಅನುದಾನ ನೀಡಿದೆ.
ಅಗತ್ಯವಿದ್ದಷ್ಟು ಸಿಬ್ಬಂದಿಯನ್ನು ನೇಮಕ ಮಾಡಿದೆ. ಕಾರಾಗೃಹಗಳಲ್ಲಿ ಸಿಸಿ ಟಿವಿ, ವಿಡಿಯೋ ಕಾನ್ಫರನ್ಸ್ ಉಪಕರಣಗಳು, ಆಧುನಿಕ ಅಡುಗೆ ಮತ್ತು ದೈನಂದಿನ ಬಳಕೆಯ ಉಪಕರಣಗಳನ್ನು ಒದಗಿಸಿದೆ. ದಕ್ಷಿಣ ಕೋರಿಯಾ ದೇಶದಲ್ಲಿರುವ ಆಧುನಿಕ ಕಾರಾಗೃಹದ ಮಾದರಿಯಲ್ಲಿ ರಾಜ್ಯದ ಶಿವಮೊಗ್ಗದಲ್ಲಿ ಹೊಸದಾಗಿ ಕಾರಾಗೃಹ ನಿರ್ಮಿಸಲು ಮತ್ತು ರಾಜ್ಯದ ಐದು ಜಿಲ್ಲೆಗಳಲ್ಲಿ ಹೊಸ ಬಂದಿಖಾನೆಗಳನ್ನು ನಿರ್ಮಿಸಲು
ಕಾರಾಗೃಹ ಇಲಾಖೆ ಯೋಜನೆ ರೂಪಿಸಿದೆ ಎಂದು ಹೇಳಿದರು.
ತರಬೇತಿ ಶಾಲೆಯ ಪ್ರಾಚಾರ್ಯ ಎಂ ಕುಮಾರ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ
ಮಾತನಾಡಿದರು. ಪರೇಡ್ ಕಮಾಂಡರ್ ಆನಂದಕುಮಾರ ಪಥ ಸಂಚಲನದ ನೇತೃತ್ವ ವಹಿಸಿದ್ದರು.
ತರಬೇತಿಯ ಅವಧಿಯಲ್ಲಿ ಉತ್ತಮ ಸಾಧನೆ ತೋರಿದ ಒಟ್ಟು 10 ಪ್ರಶಿಕ್ಷಣಾರ್ಥಿಗಳಿಗೆ
ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉತ್ತರ ವಲಯ ಐಜಿಪಿ ಎಚ್.ಜಿ ರಾಘವೇಂದ್ರ ಸುಹಾಸ, ಬೆಳಗಾವಿ ಪೊಲೀಸ್ ಕಮಿಷನರ್ ಬಿ.ಎನ್ ಲೋಕೇಶಕುಮಾರ್, ಸಿಆರ್ಪಿಎಫ್ ಐಜಿಪಿ ಟಿ ಶೇಖರ, ಕಾರಾಗೃಹ ಅಧೀಕ್ಷಕ ಟಿ.ಬಿ ಶೇಷ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳ ಪಾಲಕರು, ತರಬೇತಿ ಶಾಲೆಯ
ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಾಚಾರ್ಯ ಎಂ.ಕುಮಾರ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ತರಬೇತಿ ಶಾಲೆಯ ಉಪ
ಪ್ರಾಂಶುಪಾಲ ಶಿವಾನಂದ ಚನ್ನಬಸಪ್ಪನವರ ನಿರೂಪಿಸಿದರು. ಡಿಎಸ್ಪಿ ಸಿ.ಆರ್ ನೀಲಗಾರ
ವಂದಿಸಿದರು.
ಕಾರಾಗೃಹ ವೀಕ್ಷಕರಿಗೆ ಬುನಾದಿ ತರಬೇತಿಯನ್ನು ಉತ್ತಮ ರೀತಿಯಲ್ಲಿ ನೀಡಿದ ಪೊಲೀಸ್
ತರಬೇತಿ ಶಾಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಾರಾಗೃಹ ಇಲಾಖೆಯಿಂದ 1 ಲಕ್ಷ ನಗದು
ಬಹುಮಾನವನ್ನು ಕೊಡಲಾಗುತ್ತಿದೆ. ಜೊತೆಗೆ ನಿರ್ಗಮನ ಪಥ ಸಂಚಲನದಲ್ಲಿ ಉತ್ತಮವಾಗಿ
ಬ್ಯಾಂಡ್ ನುಡಿಸಿದ ಬೆಳಗಾವಿ ಕೆಎಸ್ಆರ್ಪಿ 2ನೇ ಬಟಾಲಿಯನ್ ತಂಡಕ್ಕೂ 10 ಸಾವಿರ ನಗದು
ಬಹುಮಾನ ನೀಡಲಾಗುತ್ತಿದೆ.-ಎನ್.ಎಸ್ ಮೇಘರಿಖ್, ಡಿಜಿ ಮತ್ತು ಐಜಿಪಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ