ಪ್ರಗತಿವಾಹಿನಿ ಸುದ್ದಿ, ಪುಣೆ – ಪೂಜೆ ಫಲ ನೀಡದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಪೂಜೆ ಮಾಡಿಸಿದ ಅರ್ಚಕರ ಮೇಲೆಯೇ ದೂರು ನೀಡಿದ ಘಟನೆ ಪುಣೆಯಲ್ಲಿ ನಡೆದಿದೆ. ಮಹಿಳೆ ಹಣ ವಂಚನೆಯಾಗಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ವಧುವಿಗಾಗಿ ಪೂಜೆ
56 ವರ್ಷದ ಮಹಿಳೆಯೊಬ್ಬರು ತಮ್ಮ ಮಗನಿಗೆ ಸೂಕ್ತ ವಧುವಿನ ಹುಡುಕಾಟದಲ್ಲಿದ್ದರು. ಈ ನಡುವೆ ಸಂಜಯ್ ಪವಾರ್ (55) ಮತ್ತು ಸಂಜಯ್ ಚೌದರಿ ಎಂಬುವ ಮದುವೆ ದಲ್ಲಾಳಿಗಳನ್ನು ಮಹಿಳೆ ಭೇಟಿಯಾಗಿದ್ದರು.
ದಲ್ಲಾಳಿಗಳು ಪೂಜೆ ಮಾಡಿಸಿದರೆ ಸೂಕ್ತ ವಧು ಲಭ್ಯವಾಗುತ್ತಾಳೆ ಎಂದು ಹೇಳಿದ್ದರು. ಅದಕ್ಕೆ ಮಹಿಳೆ ಒಪ್ಪಿದ ಹಿನ್ನೆಲೆಯಲ್ಲಿ ಸ್ವಘೋಷಿತ ದೇವಮಾನವನೊಬ್ಬನನ್ನು ಕರೆ ತಂದು 2021 ರ ನವೆಂಬರ್ ನಲ್ಲಿ ಪೂಜೆ ಮಾಡಿಸಿದ್ದರು. ಪೂಜೆಯ ಖರ್ಚಿಗೆಂದು ಮಹಿಳೆಯಿಂದ 50 ಸಾವಿರ ರೂ. ಹಣ ಪಡೆದಿದ್ದರು.
ಆದರೆ ಮಧ್ಯವರ್ತಿಗಳು ನೀಡಿದ ಭರವಸೆ ಈಡೇರಿಲ್ಲ. ಮಹಿಳೆಯ ಮಗನಿಗೆ ಸೂಕ್ತ ವಧು ಸಿಕ್ಕಿರಲಿಲ್ಲ. ಹೀಗಾಗಿ ಮಹಿಳೆ 50 ಸಾವಿರ ರೂ.ವನ್ನು ವಾಪಸ್ ಕೇಳಿದ್ದಳು. ಆದರೆ ಆರೋಪಿಗಳಿಬ್ಬರು ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದು ಮಹಿಳೆಯ ಹಣ ವಾಪಸ್ ಕೊಡದೇ ಸತಾಯಿಸುತ್ತಿದ್ದರು.
ಕೊನೆಗೆ ಮಹಿಳೆ ಪೊಲೀಸ್ ದೂರು ನೀಡಿದ್ದಾಳೆ. ದೂರಿನ ಆಧಾರದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ. ಪುಣೆಯ ಚಂದಾನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುನೀಲ್ ಥೋಪ್ಟೆ ತನಿಖೆ ನಡೆಸಿದ್ದಾರೆ.
ಬಜೆಟ್ ಬೆನ್ನಲ್ಲೇ ಆಭರಣ ಪ್ರಿಯರಿಗೆ ಶಾಕ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ