*ಪೊಲೀಸರ ಭರ್ಜರಿ ಕಾರ್ಯಾಚರಣೆ: 15.45 ಲಕ್ಷ ರೂ. ಮೌಲ್ಯದ ವಸ್ತು ವಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಕ್ಕೇರಿ ಪೊಲೀಸರ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
9 ಬೈಕ್ ವಶ

ಹುಕ್ಕೇರಿ ಪಟ್ಟಣದ ಬೆಲ್ಲದ ಬಾಗೇವಾಡಿ ಕ್ರಾಸ್ ಬಳಿ ನಂಬರ್ ಪೋಟ್ ಇಲ್ಲದ ಬೈಕ್ ಸವಾರಿ ಮಾಡುತ್ತಿದ್ದ ಸಂಶಯಾಸ್ಪದ ವ್ಯಕ್ತಿ ಉಮೇಶ ಹನುಮಂತ ಗಾಡಿವಡ್ಡರ @ ಬಾಗೇವಾಡಿ (32), ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅಂತರರಾಜ್ಯ ಬೈಕ್ ಕಳ್ಳತನದ ಜಾಲ ಬೆಳಕಿಗೆ ಬಂದಿದೆ. ಈತನಿಂದ ಗೋಕಾಕ, ಸಂಕೇಶ್ವರ, ಹುಕ್ಕೇರಿ, ಬೆಳಗಾವಿ ಕೆ.ಎಲ್.ಇ ಆಸ್ಪತ್ರೆ ಬಳಿ, ನಿಪ್ಪಾಣಿ ಶಹರದಲ್ಲಿ ಹಾಗೂ ಮಹಾರಾಷ್ಟ್ರದ ಕಾಗಲ್, ಮೀರಜ್ ಹಾಗೂ ಬಲಗೌಡ ಕ್ರಾಸ್ ತಾಸಗಾಂವ ಭಾಗಗಳಲ್ಲಿ ಕಳವು ಮಾಡಲಾಗಿದ್ದ ಸುಮಾರು 6,00,000 ರೂ. ಮೌಲ್ಯದ ಒಟ್ಟು 9 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸರಗಳ ಕಳ್ಳತನ

ಹುಕ್ಕೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 56/2026 ಹಾಗೂ 57/2026 ಕ್ಕೆ ಸಂಬಂಧಿಸಿದಂತೆ, ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಶಾಸ್ತ್ರಿ ನಗರದ ನಿವಾಸಿ ದೀಪಕ ಮಚ್ಚೇಂದ್ರ ಜಾಧವ (32) ಎಂಬಾತನನ್ನು ಬಂಧಿಸಿ, ಆತನಿಂದ 4,50,000 ರೂ. ಮೌಲ್ಯದ 30 ಗ್ರಾಂ ತೂಕದ 2 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಟ್ರ್ಯಾಕ್ಟರ್ ಟ್ರೈಲರ್ ವಶ

ಅಪರಾಧ ಸಂಖ್ಯೆ 46/2026 ರ ಪ್ರಕರಣದಲ್ಲಿ ಬೆಳಗಾವಿ ಹೊನಗಾ ನಿವಾಸಿ ಅರ್ಜುನ ಬಸವಂತ ಶೇಂದಿ (44) ಎಂಬಾತನನ್ನು ಬಂಧಿಸಿ, ಆತನಿಂದ 3,50,000 ರೂ. ಮೌಲ್ಯದ ಒಂದು ಟ್ರಾಕ್ಟರ್ ಟ್ರೈಲರ್ ವಶಪಡಿಸಿಕೊಳ್ಳಲಾಗಿದೆ.
ಕೆ.ಎಸ್.ಆರ್.ಟಿ.ಸಿ ಬಸ್ ಪ್ರಾಯಾಣಿಕರ ಕಳ್ಳತನ
ಬಸ್ಸುಗಳಲ್ಲಿ ಪ್ರಯಾಣಿಕರ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದ ನಿಪ್ಪಾಣಿ ಮೂಲದ ಆರತಿ ರವಿ ಲೊಂಡೆ (24) ಹಾಗೂ ಪೂಜಾ ಅಭಿಜಿತ್ ಚೌಗಲೆ (26) ಎಂಬುವವರನ್ನು ಬಂಧಿಸಿ, ಅವರು ಕಳವು ಮಾಡಿದ ಆಭರಣಗಳನ್ನು ಮಾರಾಟ ಮಾಡಿ ಇಟ್ಟುಕೊಂಡಿದ್ದ 95,000 ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಕುರಿ/ಆಡುಗಳ ಕಳ್ಳತನ

ಅಪರಾಧ ಸಂಖ್ಯೆ 03/2026 ರ ಪ್ರಕರಣದಲ್ಲಿ ಹುಕ್ಕೇರಿ ತಾಲೂಕಿನ ಕೋಟಬಾಗಿ ನಿವಾಸಿ ಮುತ್ತಪ್ಪ ಮಾರುತಿ ಕಾಮಶೆಟ್ಟಿ (28) ಎಂಬಾತನನ್ನು ಬಂಧಿಸಿ, ಆತನಿಂದ 50,000 ರೂ. ಮೌಲ್ಯದ 5 ಆಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯ ಮೂಲಕ ಹುಕ್ಕೇರಿ ಠಾಣೆಯ 6 ಪ್ರಕರಣಗಳು ಹಾಗೂ ಇತರ ಠಾಣಾ ವ್ಯಾಪ್ತಿಯ 9 ಪ್ರಕರಣಗಳು ಸೇರಿ ಒಟ್ಟು 15 ಕಳ್ಳತನದ ಪ್ರಕರಣಗಳನ್ನು ಭೇದಿಸಲಾಗಿದ್ದು. ಒಟ್ಟು 15,45,000 ರೂ. (ಹದಿನೈದು ಲಕ್ಷದ ನಲವತ್ತೈದು ಸಾವಿರ ರೂಪಾಯಿ) ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಂಡಕ್ಕೆ ಶ್ಲಾಘನೆ
ಕಾರ್ಯಾಚರಣೆ ನಡೆಸಿ ಕಳ್ಳರನ್ನು ಪತ್ತೆ ಹಚ್ಚಿದ ಹುಕ್ಕೇರಿ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳಾದ ಅಜಿತ ನಾಯಕ, ಮಂಜುನಾಥ ಕಲ್ಕೂರ, ಕುಮಾರ ಕರೆನ್ನವರ, ಅರ್ಜುನ ಮಸರಗುಪ್ಪಿ ಮತ್ತು ತಾಂತ್ರಿಕ ಸಹಾಯಕರಾದ ವಿನೋದ ಟಕ್ಕನ್ನವರ, ಸಚೀನ ಪಾಟೀಲ ಮತ್ತು ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.



