Belagavi NewsBelgaum NewsKannada NewsKarnataka News

*ಸಕಾರಾತ್ಮಕ ಬದಲಾವಣೆಗಳು ಅಗತ್ಯ: ಬುದ್ಧ ಜಯಂತಿಯಲ್ಲಿ ಶಾಸಕ ಆಸಿಫ್ ಸೇಠ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾನ್ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ದೇಶದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಆಸೀಫ್ (ರಾಜು) ಸೇಠ್ ಅವರು ತಿಳಿಸಿದರು. 

Home add -Advt

ನಗರದ ಸದಾಶಿವ ನಗರದಲ್ಲಿನ ಬುದ್ಧ ವಿಹಾರದಲ್ಲಿ ಮೇ.1 (ಶುಕ್ರವಾರ) ಶ್ರೀ ಭಗವಾನ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನುಷ್ಯನು ಸ್ವಾರ್ಥಕ್ಕೊಳಗಾಗುತ್ತಿದ್ದಾನೆ. ಮನುಷ್ಯ ತನ್ನ ಸ್ವಾರ್ಥವನ್ನು ಬಿಟ್ಟು ಅಶಕ್ತರಿಗೆ ಸಹಾಯ ಮಾಡುವುದೇ ಬುದ್ಧರಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ. 

ಗೌತಮ ಬುದ್ಧರ ಉದಾತ್ತ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶಾಂತಿಯುತ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. 

ಮಹಾಪುರುಷರ ಆಶಯಗಳು ಕೇವಲ ಭಾಷಣಕ್ಕೆ ಸೀಮಿತವಾಗದೆ, ನಮ್ಮ ದೈನಂದಿನ ಬದುಕಿನ ದಾರಿಯಾಗಬೇಕು. ಆಗ ಮಾತ್ರ ನಾವೆಲ್ಲರೂ ನಿಜವಾದ ಪರಿವರ್ತನೆಯ ಹಾದಿಯಲ್ಲಿ ಸಾಗಲು ಸಾಧ್ಯ ಎಂದು ಶಾಸಕರಾದ ಆಸೀಫ್(ರಾಜು) ಸೇಠ ಅವರು ತಿಳಿಸಿದರು.

ಮಹಾನಗರ ಪಾಲಿಕೆಯ ಉಪಮಹಾಪೌರರಾದ ಹನುಮಂತ ಕೊಂಗಾಲಿ ಅವರು ಮಾತನಾಡಿ ಭಗವಾನ್ ಬುದ್ಧರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಾತ್ರ ಜೀವನದಲ್ಲಿ ನೈಜ ಪರಿವರ್ತನೆ ತರಲು ಸಾಧ್ಯ ಎಂದು ತಿಳಿಸಿದರು. ಬುದ್ಧರು ಬೋಧಿಸಿದ ಸತ್ಯ ಮತ್ತು ನೀತಿಯ ಮಾರ್ಗಗಳು ಸಾರ್ವಕಾಲಿಕವಾಗಿವೆ ಎಂದರು.

ಬುದ್ಧನ ತತ್ವಗಳು ಕೇವಲ ಜಯಂತಿ ಆಚರಣೆಯಂತಹ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಅವರ ನೀತಿ ನಿಯಮಗಳನ್ನು ಮತ್ತು ಮೌಲ್ಯಗಳನ್ನು ನಾವು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ. ಪ್ರತಿಯೊಬ್ಬರೂ ಬುದ್ಧನ ವಿಚಾರಧಾರೆಗಳನ್ನು ಪಾಲಿಸುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು. 

ಕಾರ್ಯಕ್ರಮ‌ದ‌ ಸಂಪನ್ಮೂಲ ವ್ಯಕ್ತಿಗಳಾಗಿ ಆಗಿಮಿಸಿದ್ದ ಬೆಳಗಾವಿಯ ರಾಣಿ ಪಾರ್ವತಿದೇವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಬಿ. ಕೋಲ್ಕಾರ ಅವರು ಮಾತನಾಡಿ ಮುಕ್ತಿ ಎಂಬುದು ಇಡೀ ಮನುಕುಲದ ಆಸ್ತಿಯಾಗಿದ್ದು, ಏಕರೂಪದಲ್ಲಿದ್ದ ಮುಕ್ತಿಯ ಪರಿಕಲ್ಪನೆಯನ್ನು ‘ಬಹುಮುಖಿ ಮುಕ್ತಿ’ಯನ್ನಾಗಿ ಪರಿವರ್ತಿಸಿದ ಕೀರ್ತಿ ಭಗವಾನ್ ಬುದ್ಧನಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು. 

ಜಗತ್ತಿನಾದ್ಯಂತ ಅತಿ ಹೆಚ್ಚು ಸಂಖ್ಯೆಯಲ್ಲಿ ಬುದ್ಧನ ಪ್ರತಿಮೆಗಳಿರುವುದೇ ಆತನ ವಿಶ್ವವ್ಯಾಪಿ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಬುದ್ಧನು ಕೇವಲ ಒಬ್ಬ ವ್ಯಕ್ತಿಯಲ್ಲ, ಆತ ಜಗತ್ತಿನ ಮಹಾಗುರು. ಇಂದು ವಿಶ್ವದ ಸುಮಾರು 195 ರಾಷ್ಟ್ರಗಳು ಬುದ್ಧನ ಶಾಂತಿ ಮತ್ತು ಅಹಿಂಸೆಯ ತತ್ವಗಳನ್ನು ಅನುಸರಿಸುತ್ತಿವೆ. ಮನುಷ್ಯ ಕುಲದ ಮೇಲಿನ ಅಪಾರ ಪ್ರೀತಿ ಮತ್ತು ಕರುಣೆಯಿಂದಾಗಿಯೇ ಬುದ್ಧನು ತನ್ನೆಲ್ಲಾ ಸುಖ-ಭೋಗಗಳನ್ನು ತ್ಯಜಿಸಿ ಮಹಾಪರಿತ್ಯಾಗಿಯಾದರು ಎಂದು ಕೋಲ್ಕಾರ ಅವರು ವಿವರಿಸಿದರು.

ಮಾನವನ ಜೀವನವು ಒಂದು ರಥವಿದ್ದಂತೆ, ಅದು ಸದಾ ಆಲೋಚನೆ ಮತ್ತು ಚಿಂತನೆಗಳೆಂಬ ಹಾದಿಯಲ್ಲಿ ಸಾಗುವ ಯಾತ್ರೆಯಾಗಿದೆ. “ನಾನು ದೇವರೂ ಅಲ್ಲ, ದೇವದೂತನೂ ಅಲ್ಲ” ಎಂದು ಸಾರಿದ ಬುದ್ಧನು, ಮನುಷ್ಯನ ಮನಸ್ಸೇ ನಿಜವಾದ ದೇವಸ್ಥಾನ ಎಂದು ಬೋಧಿಸಿದ್ದಾನೆ. ಸಾಮಾಜಿಕ ಪ್ರಜ್ಞೆಯೇ ಸಮಾಜದ ಮೂಲ ಗುಣವಾಗಿದ್ದು, ಬುದ್ಧನ ತತ್ವಗಳು ಮತ್ತು ವಿಚಾರಧಾರೆಗಳಿಗೆ ಸಾವಿಲ್ಲ. ಅವು ಇಂದಿಗೂ ಪ್ರಸ್ತುತವಾಗಿದ್ದು, ಸಮಾಜಕ್ಕೆ ದಾರಿದೀಪವಾಗಿವೆ ಎಂದು ಡಾ . ಎಚ್. ಬಿ. ಕೋಲ್ಕಾರ ಅವರು ನುಡಿದರು.

ಕಾರ್ಯಕ್ರಮದಲ್ಲಿ ನಗರ ಸೇವಕ ಸಂದೀಪ ಜೀರಗ್ಯಾ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬೆಳಗಾವಿ ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ ಚನ್ನಣ್ಣವರ್, ಬೆಳಗಾವಿ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ನಾಮದೇವ ಬಿಲ್ಕರ್, 

ಸಮಾಜದ ಮುಖಂಡರಾದ ಮಲ್ಲೇಶ್ ಚೌಗಲೆ, ಶಾಂತಪ್ಪ ಹಾದಿಮನಿ, ದುರ್ಗೇಶ್ ಮೇತ್ರಿ, ಭಾರತೀಯ ಬೌದ್ಧ ಮಹಾಸಭಾ ಬೆಳಗಾವಿ ಅಧ್ಯಕ್ಷರಾದ ಯಮನಪ್ಪ ಗಡಿನಾಯಕ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪನ್ಯಾಸಕ ಪ್ರೊ. ಮಹಾಂತೇಶ್ ಚಲವಾದಿ, ಮಾರ್ಕೆಟ್ ಪೊಲೀಸ್ ಠಾಣೆಯ ಸಿ ಪಿ ಐ ಜೆ. ಎಂ. ಕಾಲಿಮಿರ್ಚಿ, ಭಾರತೀಯ ಬೌದ್ಧ ಮಹಾಸಭಾ ಸಮತಾ ಸೈನಿಕ ದಳದ ಮೇಜರ್ ಜನರಲ್ ಯಶ್ವಂತ್ ಸಾಮ್ರಾಟ್ ಸೇರಿದಂತೆ‌ ಸಮಾಜದ ಗಣ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Back to top button