*ಹಣಕಾಸು ನಿರ್ವಹಣೆ ಸರಿ ಮಾಡದೆ ಕೇಂದ್ರದ ಮೇಲೆ ಗೂಬೆ: ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ*
ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಸರಿಯಾಗಿ ಹಣಕಾಸು ನಿರ್ವಹಣೆ ಮಾಡಲಾಗದೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ರಾಜ್ಯಕ್ಕೆ ಯುಪಿಎ ಅವಧಿಗಿಂತ ದುಪ್ಪಟ್ಟು ಅನುದಾನವನ್ನು NDA ಸರ್ಕಾರ ನೀಡಿದೆ ಎಂದು ಸಮರ್ಥಿಸಿಕೊಂಡರು.
ರಾಜ್ಯಗಳಿಗೆ ಅನುದಾನ ಹಂಚಿಕೆ ನಿರ್ಧರಿಸುವುದು ಕೇಂದ್ರ ಸರ್ಕಾರವಲ್ಲ. ಹಣಕಾಸು ಆಯೋಗ. ಅದು ನಿಗದಿಪಡಿಸಿದಷ್ಟು ಹಣವನ್ನು ಕೇಂದ್ರ ನೀಡಿದೆ ಎಂದು ಜೋಶಿ ಸಮಜಾಯಿಷಿ ನೀಡಿದರು.
2016-17ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಇದ್ದ ಹಣಕಾಸು ಆಯೋಗ ಅನುದಾನ ಹಂಚಿಕೆ ನಿಗದಿಪಡಿಸಿದೆ. ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎನಿಸಿದ್ದರೆ ಆಯೋಗದ ಮುಂದೆ ಆಗಲೇ ಸಮರ್ಪಕ ವಾದ ಮಂಡಿಸಬೇಕಿತ್ತು. ಆಗ ಧ್ವನಿ ಎತ್ತದೆ, ಈಗ ತಗಾದೆ ತೆಗೆಯುತ್ತಿದೆ ಎಂದು ತಿರುಗೇಟು ನೀಡಿದರು.
ತಮ್ಮ ಸರ್ಕಾರದಲ್ಲಿನ ಅಧಿಕಾರಿಗಳೇ ತಪ್ಪು ಮಾಡಿದ್ದಾರೆ ಎಂಬುದನ್ನು ಸಿಎಂ ಒಪ್ಪಿಕೊಂಡಿದ್ದಾರೆ ಎಂದ ಜೋಶಿ, ಈಗಲಾದರೂ ಹಣಕಾಸು ಆಯೋಗದ ಮುಂದೆ ಸರಿಯಾದ ವಾದ ಮಂಡಿಸಿ ಎಂದು ಸಲಹೆ ನೀಡಿದರು.
ಮತ್ತೆ ಆಯೋಗ ರಚನೆ; ಬೇಡಿಕೆ ಮುಂದಿಡಿ: ಪ್ರತಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚಿಸುತ್ತಿದ್ದು, ಈಗ ಮತ್ತೊಮ್ಮೆ ರಚನೆ ನಡೆದಿದೆ. ಹೊಸ ಹಣಕಾಸು ಆಯೋಗದ ಮುಂದಾದರೂ ರಾಜ್ಯಕ್ಕೆ ಏನು ಬೇಕೆಂಬುದನ್ನು ಸರಿಯಾಗಿ ಮಂಡಿಸಿ ಎಂದು ಹೇಳಿದರು.
NDA ಸರ್ಕಾರವೇ ಹೆಚ್ಚು ಕೊಟ್ಟಿದೆ: ಹಾಗೆ ನೋಡಿದರೆ ರಾಜ್ಯಕ್ಕೆ ಯುಪಿಎಗಿಂತ NDA ಸರ್ಕಾರವೇ ಹೆಚ್ಚು ಹಣಕಾಸು ಒದಗಿಸಿದೆ ಎಂದು ಹೇಳಿದರು.
ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ 49000 ಕೋಟಿ ಗ್ರ್ಯಾಂಟೆಡ್ ಅನುದಾನ ಬಂದಿದ್ದರೆ, NDA ಸರ್ಕಾರ 3 ಲಕ್ಷ ಕೋಟಿ ಕೊಟ್ಟಿದೆ. ಇನ್ನೂ ರಾಜ್ಯದ ಪಾಲಿನ ತೆರಿಗೆ ಬಾಬ್ತು ಯುಪಿಎ ಬರೀ 63000 ಕೋಟಿ ಕೊಟ್ಟಿದ್ದರೆ, ತಮ್ಮ ಸರ್ಕಾರ. 3.25 ಲಕ್ಷ ಕೋಟಿ ತೆರಿಗೆ ಹಂಚಿಕೆ ಬಿಡುಗಡೆ ಮಾಡಿದೆ ಎಂದರು ಪ್ರಲ್ಹಾದ ಜೋಶಿ.
ಮಳೆ ಜಾಸ್ತಿ ಆದ್ರೂ ಬಿಜೆಪಿ ಮಾಡಿಸಿದೆ ಅಂದಿಲ್ಲ ಅದೇ ಪುಣ್ಯ: ರಾಜ್ಯಕ್ಕೆ ಏನಾದರೂ ಒಳ್ಳೆಯದಾದರೆ ತಮ್ಮಿಂದ ಆಯಿತು, ಕೆಟ್ಟದ್ದಾದರೆ ಬಿಜೆಪಿ ಮಾಡಿತು ಎಂಬ ವಾಕ್ಚಾಳಿ ಕಾಂಗ್ರೆಸ್ ಗೆ ರೂಢಿಗತವಾಗಿದೆ. ಸದ್ಯ ಮಳೆ ಹೆಚ್ಚಾದರೂ ಬಿಜೆಪಿಯೇ ಮಾಡಿಸಿದೆ ಎಂದಿಲ್ಲ ಅದೇ ನಮ್ಮ ಪುಣ್ಯ! ಎಂದು ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ