*BREAKING: ಪ್ರಜಾಸೇವೆ ಇಲಾಖೆಗೆ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆ: ಇಂದಿನಿಂದ ಮನೆ ಬಾಗಿಲಿಗೆ ಬರಲಿದೆ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಪ್ರಜಾಸೇವೆ ಇಲಾಖೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಗಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಪ್ರಜಾಸೇವೆ ಇಲಾಖೆ ಉದ್ಘಾಟಿಸಿದರು. ಈ ಮೂಲಕ ಇಂದಿನಿಂದ ಜನರ ಮನೆ ಬಾಗಿಲಿಗೆ ಸರ್ಕಾರವೇ ಬರಲಿದೆ ಎಂದು ಹೇಳಿದರು.
ಪ್ರಜಾಸೇವೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪ್ರಜಾಸೇವಾ ಇಲಾಖೆಗೆ ಚಾಲನೆ ನೀಡಲಾಗಿದೆ. . ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಲಿದೆ ಎಂದರು.
ಪ್ರತಿ ತಿಂಗಳು ಮೊದಲ ಹಾಗೂ ಮೂರನೇ ಶನಿವಾರ ಸಚಿವರು ಕಡ್ಡಾಯವಾಗಿ ಒಂದೊಂದು ತಾಲೂಕಿಗೆ ತೆರಳಿ ಜನರ ಸಮಸ್ಯೆ ಆಲಿಸಬೇಕು. ಮೊದಲ ಸುತ್ತಿನ ಬಳಿಕ ಹೋಬಳಿ ಮಟ್ಟಕ್ಕೂ ತೆರಳಬೇಕು. ಶಾಸಕರು ಪಂಚಾಯಿತಿ ಮಟ್ಟದಲ್ಲಿ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಲು ಸೂಚಿಸಲಾಗಿದೆ. ಎಲ್ಲ ಸಮಸ್ಯೆಗಳನ್ನೂ ತಕ್ಷಣವೇ ಪರಿಹರಿಸಲಾಗುತ್ತದೆ ಎಂದು ಹೇಳುವುದಿಲ್ಲ. ಆದರೆ ಜನರ ಬಳಿಗೆ ತೆರಳಿ ಅವರ ಸಮಸ್ಯೆ ಮತ್ತು ಭಾವನೆಗಳನ್ನು ನೇರವಾಗಿ ತಿಳಿದುಕೊಂಡರೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಅವಕಾಶ ದೊರೆಯಲಿದೆ ಎಂದು ಹೇಳಿದರು.
ಶಿಕ್ಷಕರ ದಿನಾಚರಣೆಯ ಹಿನ್ನೆಲೆ ಉನ್ನತ ಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರು ಸೇರಿದಂತೆ ಮೂವರು ಸಚಿವರಿಗೆ ವಿಶೇಷ ಜವಾಬ್ದಾರಿ ಇರುವುದರಿಂದ, ಅವರನ್ನು ಹೊರತುಪಡಿಸಿ ಉಳಿದ ಸಚಿವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಜಾಸೇವೆ ಅಭಿಯಾನದಲ್ಲಿ ತಾವು ಸ್ವತಃ ಬೆಳಿಗ್ಗೆಯಿಂದ ಸಾರ್ವಜನಿಕರು ನೀಡುವ ಅರ್ಜಿಗಳನ್ನು ಸ್ವೀಕರಿಸಿ, ಅಧಿಕಾರಿಗಳ ಜೊತೆಗೂಡಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಈ ಪ್ರಕ್ರಿಯೆ ಎಲ್ಲಾ ತಾಲೂಕುಗಳಲ್ಲೂ ಮುಂದುವರಿಯಲಿದೆ ಎಂದರು.


