Latest

ಕರಾಳ ದಿನಾಚರಣೆಗೆ ಮಹಾರಾಷ್ಟ್ರದ ಮುಖಂಡರ ಉಪಸ್ಥಿತಿ; ಎಂಇಎಸ್ ಗೆ ಭರವಸೆ ನೀಡಿದ ಮಹಾ ಸಿಎಂ ಏಕನಾಥ ಶಿಂದೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನ.1ರ ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಎಂಇಎಸ್ ಬೆಂಬಲಕ್ಕೆ ಮಹಾರಾಷ್ಟ್ರದ ಮುಖಂಡರನ್ನು ಕಳುಹಿಸುವುದಾಗಿ ಮಹಾರಾಷ್ಟ್ರ  ಮುಖ್ಯಮಂತ್ರಿ  ಏಕನಾಥ ಶಿಂದೆ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂಇಎಸ್) ಭರವಸೆ ನೀಡಿದ್ದಾರೆ.

ಭಾಷಾವಾರು ಪ್ರಾಂತ ವಿಂಗಡಣೆ ವೇಳೆ ಗಡಿ ಭಾಗದ ಮರಾಠಿಗರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಎಂಇಎಸ್  ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದ ದಿನವನ್ನು  ಕರಾಳ ದಿನವೆಂದು ಆಚರಿಸುತ್ತ ಬಂದಿದೆ. ಈ ಹಿಂದೆ ಜಯರಾಮ ಅವರು ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ ವೇಳೆ ಇದಕ್ಕೆ ಕಡಿವಾಣ ಹಾಕಿದ್ದರು.

ಈ ಮಧ್ಯೆಯೂ ಎಂಇಎಸ್ ಹಲವು ದಿನಗಳಿಂದ ಕರಾಳ ದಿನದ ಬಗ್ಗೆ ಜಾಗೃತಿ ಕಾರ್ಯ ಕೈಗೊಂಡು ಮರಾಠಿ ಭಾಷಿಕರನ್ನು ಪ್ರಚೋದಿಸುತ್ತ ಬಂದಿದೆ. ಎಂಇಎಸ್ ಮುಖಂಡ ಪ್ರಕಾಶ ಮರಗಾಳೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಕರಾಳ ದಿನ ಕುರಿತು ಪ್ರತಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಕರಾಳ ದಿನಾಚರಣೆ ವೇಳೆ ಮಹಾರಾಷ್ಟ್ರ ಸರಕಾರದ ಪ್ರತಿನಿಧಿಗಳನ್ನು ಬೆಳಗಾವಿಗೆ ಕಳುಹಿಸುವ ಬೇಡಿಕೆ ಇಟ್ಟಿದ್ದಾರೆ.

ಗಡಿ ಸಂಬಂಧದ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಕ್ಷಿಪ್ರ ಇತ್ಯರ್ಥಕ್ಕೆ ಪ್ರಯತ್ನಿಸಬೇಕು. ಈ ಸಂಬಂಧ ಉನ್ನತಾಧಿಕಾರಿಗಳ ಸಭೆ ಕರೆಯಬೇಕು. ಗಡಿ ಸಂಬಂಧದ ದಾವೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಮಹಾರಾಷ್ಟ್ರ ಸರಕಾರವನ್ನು ಪ್ರತಿನಿಧಿಸುತ್ತಿರುವ ಶಿವಾಜಿ ಜಾಧವ ಅವರು ಗಡಿ ಸಂಬಂಧ ದಾವೆಗೆ ಸಂಬಂಧಿಸಿದಂತೆ ಹಿರಿಯ ವಕೀಲರ ನಿಯೋಜನೆ ಸಂದರ್ಭದಲ್ಲಿ  ಕಳುಹಿಸಿದ ದಾಖಲೆಗಳನ್ನು ಪಡೆದು ಇತ್ಯರ್ಥ ಪ್ರಕ್ರಿಯೆ ಕ್ಷಿಪ್ರಗೊಳಿಸಲು ಪ್ರಯತ್ನಿಸ ಬೇಕು ಎಂದು ಪ್ರಕಾಶ ಮರಗಾಳೆ ಬೇಡಿಕೆ ಇರಿಸಿದ್ದಾರೆ.

ಇದಕ್ಕೆ ಸ್ಪಂದಿಸಿದ ಏಕನಾಥ ಶಿಂದೆ ಗಡಿ ಸಂಬಂಧದ ವಿಚಾರದಲ್ಲಿ ಮರಾಠಿಗರ ಹಿತ ಕಾಯಲು ಸರಕಾರ ಬದ್ಧವಾಗಿದ್ದು ಎಂಇಎಸ್ ನ ಎಲ್ಲ ಬೇಡಿಕೆಗಳನ್ನು ಆದಷ್ಟೂ ಶೀಘ್ರ ಈಡೇರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಗಡಿಯಲ್ಲಿನ ಎಲ್ಲ ಬೆಳವಣಿಗೆಗಳ ಬಗ್ಗೆ ಮಹಾರಾಷ್ಟ್ರ ಸರಕಾರದ ನಿಗಾ ಇದ್ದು ಮರಾಠಿ ಭಾಷಿಕರ ಸಮಸ್ಯೆಗಳ ವಿರುದ್ಧ ದನಿ ಎತ್ತಲು ಸರಕಾರ ಸದಾ ಸಿದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button