
ಪ್ರಗತಿವಾಹಿನಿ ಸುದ್ದಿ: ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮಗ ಕೊಂದು ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಜಕ್ಕೇರುಮಡು ತಾಂಡದಲ್ಲಿ ಘಟನೆ ನಡೆದಿದೆ. ಚಂದವ್ವ (55) ಕೊಲೆಯಾದ ಮಹಿಳೆ. ಕುಮಾರ ತಾಯಿಯನ್ನೇ ಕೊಲೆ ಮಾಡಿ ಪರಾರಿಯಾದ ಮಗ.
ಮದ್ಯದ ನಶೆಯಲ್ಲಿ ತಾಯಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕುಮಾರ ಗ್ರಾಮಕ್ಕೆ ಬಂದಿದ್ದ. ಪಿತ್ರಾರ್ಜಿತ ಮೂರು ಎಕರೆ ಜಮೀನನ್ನು ಅಣ್ಣ ತಮ್ಮಂದಿರಬ್ಬರಿಗೆ ಪಾಲು ಮಾಡುವಂತೆ ಕುಮಾರ ತಾಯಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ.
ತಾಯಿ ಆಸ್ತಿ ಭಾಗಮಾಡಲು ಒಪ್ಪಿರಲಿಲ್ಲ, ಇದರಿಂದ ಮಾತಿನ ಚಕಮಕಿ ನಡೆದು ಶುರುವಾದ ಜಗಳದಿಂದಾಗಿ ಹೆತ್ತ ತಾಯಿಯ ಕೊಲೆ ಮಾಡಿ ಮಗ ಪರಾರಿಯಾಗಿದ್ದಾನೆ.
ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನ ಶವಾಗಾರಕ್ಕೆ ರವಾನಿಸಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

