ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ PSI ನೇಮಕ ಅಕ್ರಮದಲ್ಲಿ ಬೆಳಗಾವಿ ಕೂಡ ಶಾಮೀಲಾಗಿದೆ ಎನ್ನುವ ಸಂಗತಿ ಬಯಲಾಗಿದೆ.
ರಾಜ್ಯ ಹೆಚ್ಚುವರಿ ಎಡಿಜಿಪಿ ಅಲೋಕ್ ಕುಮಾರ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬೆಳಗಾವಿ ವಲಯ (ಉತ್ತರ ವಲಯ)ದಲ್ಲೂ ಈ ಅಕ್ರಮದಲ್ಲಿ ಭಾಗಿಯಾದವರಿದ್ದಾರೆ ಎನ್ನುವ ಅಂಶವನ್ನು ಅವರು ಹೊರಹಾಕಿದ್ದಾರೆ. ಪೊಲೀಸರು ಈ ಕುರಿತು ಕಣ್ಣಿಟ್ಟಿದ್ದಾರೆ ಎಂದು ಅಲೋಕ್ ಕುಮಾರ ಹೇಳಿದ್ದಾರೆ.
ಬೆಳಗಾವಿಯ ಗೋಕಾಕದಲ್ಲಿ ಒಂದು ಗ್ಯಾಂಗ್ ಇದೆ. ಜೊತೆಗೆ ವಿಜಯಪುರ, ಬಾಗಲಕೋಟೆಯಲ್ಲೂ ಪಾಲುದಾರರಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ಈ ಎಲ್ಲರ ಚಲನವಲನದ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ ಎಂದೂ ಅಲೋಕ್ ಕುಮಾರ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ನೇಮಕಾತಿಯಲ್ಲಿ ಗೋಕಾಕ ಒಂದೇ ತಾಲೂಕಿನಿಂದ 7 ಜನರು ಆಯ್ಕೆಯಾಗಿದ್ದರು. ಆಗಲೇ ಅನುಮಾನ ಮೂಡಿತ್ತಾದರೂ ತನಿಖೆಯಾಗಿರಲಿಲ್ಲ. ನಂತರ ನಡೆದ ಪರೀಕ್ಷೆಯಲ್ಲಿ ಬ್ಲೂ ಟೂಥ್ ಬಳಸಿ ಪರಿಕ್ಷೆ ಬರೆಯುತ್ತಿದ್ದವರನ್ನು ಬೆಳಗಾವಿ ಪೊಲೀಸರೇ ಹಿಡಿದು ಜೈಲಿಗೆ ತಳ್ಳಿದ್ದರು.
ಇದೀಗ ಈ ವಿಷಯ ರಾಜ್ಯದಲ್ಲಿ ಗಂಭೀರ ಸ್ವರೂಪ ಪಡೆದಿರುವುದರಿಂದ ಬೆಳಗಾವಿ ವಲಯದಲ್ಲೂ ತೀವ್ರ ಕಣ್ಣಿಡಲಾಗಿದೆ. ಪ್ರಕರಣ ಇನ್ನಷ್ಟು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ.
ಕೇವಲ ಪಿಎಸ್ಐ ನೇಮಕಾತಿಯಲ್ಲಷ್ಟೇ ಅಲ್ಲದೆ, ಬೇರೆ ಬೇರೆ ನೇಮಕಾತಿಗಳಲ್ಲೂ ಅಕ್ರಮ ನಡೆದಿರುವ ಅನುಮಾನ ಈಗ ದಟ್ಟವಾಗಿದೆ. ತನಿಖೆ ಸರಿಯಾಗಿ ನಡೆದಲ್ಲಿ ಸಂಪೂರ್ಣ ಅಸಲಿಯತ್ತು ಬಯಲಾಗಲಿದೆ.
PSI ನೇಮಕಾತಿ ಅಕ್ರಮ; ಬಿಜೆಪಿ ನಾಯಕಿ, ಕಿಂಗ್ ಪಿನ್ ದಿವ್ಯಾ ಹಗರಗಿ ಕೊನೆಗೂ ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ