Kannada NewsKarnataka News
ಸಂಕಷ್ಟದ ವೇಳೆಯಲ್ಲಿ ಅಧಿಕಾರಕ್ಕಾಗಿ ಜಗಳ – ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್ ವಾಗ್ದಾಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಜ್ಯದಲ್ಲಿ ಕೋವಿಡ್, ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಖಾತೆಗೋಸ್ಕರ ಕಿತ್ತಾಡುತ್ತಿದ್ದಾರೆ. ಇದಕ್ಕೆ ಅಧಿಕಾರದ ದಾಹವೇ ಕಾರಣ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಆಂತರಿಕ ವಿಚಾರಗಳನ್ನು ನಾವು ಮಾತನಾಡಬಾರದು. ಆದರೆ, ಸಂಕಷ್ಟದ ವೇಳೆಯಲ್ಲಿ ಅಧಿಕಾರಕ್ಕಾಗಿ ಜಗಳ ಮಾಡುತ್ತಿದ್ದಾರೆ. ಇದಕ್ಕೆ ಬೇರೆ ಏನು ಅನ್ನಲು ಸಾಧ್ಯ ಎಂದು ಬೇಸರ ವ್ಯಕ್ತ ಪಡಿಸಿದರು.
ಕಳೆದ ಬಾರಿ ಪ್ರವಾಹದ ಅನುದಾನವೇ ಬಿಡುಗಡೆಯಾಗಿಲ್ಲ. ಈಗ 2000 ಕೋಟಿ ರೂ. ಹಾನಿಯಾಗಿದೆ ಎನ್ನುತ್ತಾರೆ. ಜನರಿಗೆ ಬಿಜೆಪಿ ಸರ್ಕಾರ ಎಂದರೆ ಜುಮಲಾ ಸರ್ಕಾರ ಎಂದು ಭಾಸವಾಗುತ್ತಿದೆ ಎಂದರು.
ಇಂದಿರಾ ಗಾಂಧಿಜೀಯವರ ರಕ್ತ ಈ ದೇಶದ ಭೂಮಿಯಲ್ಲಿ ಉಳಿದು ಹೋಗಿದೆ. ಅವರ ಹೆಸರನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಬೆಳಗಾವಿಗೆ ಭೇಟಿ ನೀಡದ ಸಿಎಂ ಬಸವರಾಜ ಬೊಮ್ಮಾಯಿ ವಿಚಾರದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೊಸ ಸಿಎಂ ಇದ್ದಾರೆ, ಈಗಲೇ ಅವರ ಬಗ್ಗೆ ಮಾತನಾಡಲೂ ಇಷ್ಟ ಪಡುವುದಿಲ್ಲ. ಬೆಳಗಾವಿಗೆ ಅವರು ಬರುತ್ತಾರೆ. ನೆರೆ ಪರಿಹಾರ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ನೇಮ್ ಚೆಂಜ್, ಪ್ಲೇಟ್ ಚೆಂಜ್ ಅಷ್ಟೇ ಸಾಧನೆ – ಸತೀಶ್
ಕೇಂದ್ರ ಹಾಗೂ ರಾಜ್ಯ ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಇದೇ ವೇಳೆ ಕಿಡಿಕಾರಿದರು. ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಾವಣೆ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಏಳು ವರ್ಷದಲ್ಲಿ ಮೋದಿ ಸರ್ಕಾರ ಯಾವುದೇ ಯೋಜನೆ ಮಾಡಿಲ್ಲ. ಅವರ ಸಾಧನೆ ಶೂನ್ಯವಾಗಿದೆ, ಆದ್ದರಿಂದಲೇ ನೇಮ್ ಚೆಂಜ್, ಪ್ಲೇಟ್ ಚೆಂಜ್ ಮಾಡುವ ಮೂಲಕ ಅದು ನನ್ನ ಸಾಧನೆ ಅಂತಾ ಪ್ರಧಾನಿಯವರು ಹೇಳುತ್ತಿದ್ದಾರೆ ಎಂದು ಖಾರವಾಗಿ ಉತ್ತರಿಸಿದರು.
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ, ಕಾಂಗ್ರೆಸ್ ಯೋಜನೆಗಳ ಹೆಸರಗಳನ್ನು ಬದಲಾವಣೆ ಮಾಡುವುದರಿಂದ ಸಾಧನೆಯನ್ನು ಬಚ್ಚಿಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್ ಗೆ ಸಿದ್ದರಾಮಯ್ಯ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರ ಅನುದಾನ ನೀಡುತ್ತಿತ್ತು. ಆದರೆ ಈಗ ಹೆಚ್ಚಿನ ಪ್ರಚಾರವಾಗುತ್ತಿರುವುದರಿಂದ ಬಿಜೆಪಿ ಸರ್ಕಾರ ಅನುದಾನ ಕಡಿತಗೊಳಿಸಿದೆ ಎಂದರು.
ಬಿಜೆಪಿ ಸರ್ಕಾರ ಇನ್ನೂ ಭದ್ರವಾಗಿಲ್ಲ : ಪ್ರವಾಹ ಸೆಟ್ಲ್ ಆಯ್ತು, ಆದರೆ ಸರ್ಕಾರವಿನ್ನೂ ಸೆಟ್ಲ್ ಆಗುತ್ತಿಲ್ಲ. ಸಿಎಂ ಬದಲಾವಣೆ ಆಗಿದೆ. ಸಂಪುಟ ರಚನೆಯಾಗಿ, ಖಾತೆ ಹಂಚಿಕೆಯೂ ಆಗಿದೆ. ಆದರೆ ಅಸಮಾಧಾನ ಮಾತ್ರ ಇನ್ನೂ ತಣ್ಣಗಾಗಿಲ್ಲ. ಇದರಿಂದ ಬಿಜೆಪಿ ಸರ್ಕಾರದಿಂದ ಯಾವುದೇ ಕೆಲಸ ಸರಿಯಾಗಿ ಆಗುತ್ತಿಲ್ಲ ಎನ್ನುವುದು ರಾಜ್ಯಕ್ಕೆ ಗೊತ್ತಿರುವ ವಿಚಾರ ಎಂದು ಸತೀಶ್ ಹೇಳಿದರು.
ಸಮಸ್ಯೆಯಲ್ಲಿಯೇ ಸರ್ಕಾರ ನಡೆಯುತ್ತಿದೆ. ಅವರಲ್ಲಿನ ಖಾತೆ ಹಂಚಿಕೆಯಲ್ಲಿ ಅಸಮಾಧಾನ ಜಗಳ ನಡೆಯುತ್ತಿದ್ದು, ಇದು ರಾಜ್ಯದ ಜನರ ಮೇಲೆ ಪರಿಣಾಮ ಬೀರಲಿದೆ. ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ನೀಡಿಲ್ಲ. ಈ ಬಗ್ಗೆ ಕಳೆದ ವರ್ಷ ಕಾಂಗ್ರೆಸ್ ಹೋರಾಟ ನಡೆಸಿದಾಗ, 5 ಲಕ್ಷ ರೂ. ಘೋಷಣೆ ಮಾಡಿದರು. ಆದರೆ ಎಲ್ಲರಿಗೂ ಹಣ ದೊರೆತಿಲ್ಲ. ಈ ಬಾರಿ ಮತ್ತೆ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕ ಅಶೋಕ ಪಟ್ಟಣ, ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚೀಂಗಳೆ, ಸುನೀಲ ಹನಮನ್ನವರ, ಮಲ್ಲಪ್ಪ ಮುರಗೋಡ, ಅರವಿಂದ ದಳವಾಯಿ, ವಿಶ್ವಾಸ್ ವೈದ್ಯ, ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ