
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಸಚಿವರಿಗೆ ಹನಿಟ್ರಾಪ್ ಮಾಡಲಾಗುತ್ತಿದೆ ಎಂದು ನಿನ್ನೆ ಸದನದಲ್ಲಿ ಚರ್ಚೆಯಾದ ಬೆನ್ನಲ್ಲೆ ಗೃಹ ಸಚಿವ ಜಿ. ಪರಮೇಶ್ವರ ಅವರು ಉನ್ನತ ತನಿಖೆಗೆ ಆದೇಶ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ದಲಿತ ಶಾಸಕರ, ಸಚಿವರ ಹನಿಟ್ರಾಪ್ ಯತ್ನ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ
ಇಂದು ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಣ್ಣ ಸಾಮಾನ್ಯ ವ್ಯಕ್ತಿ ಅಲ್ಲ ಅವರು ಸರ್ಕಾರದ ಮಂತ್ರಿಯಾಗಿದ್ದುಕೊಂಡೇ ಸದನದಲ್ಲಿ ಇಂತಹ ಗಂಭೀರ ಆರೋಪ ಮಾಡಿದ್ದಾರೆ. ಅವರೇ ಸದನದಲ್ಲಿ 48 ಜನರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದಿದ್ದಾರೆ. ಈ ಸರ್ಕಾರದಲ್ಲಿ ದಲಿತ ಮಂತ್ರಿಗಳಿಗೆ ರಕ್ಷಣೆ ಇಲ್ಲ ಎಂದರು.
ರಾಜಣ್ಣ ಅವರ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸರಿಯಾಗಿ ಉತ್ತರ ನೀಡಿಲ್ಲ. ಇದೊಂದು ಗಂಭೀರ ಪ್ರಕರಣ. ಇದು ಎಲ್ಲ ಶಾಸಕರ, ಸದನದ, ರಾಜ್ಯದ ಗೌರವದ ಪ್ರಶ್ನೆ. ಈ ಪ್ರಕರಣದ ಬಗ್ಗೆ ಸಿಬಿಐ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.