ಮಂಗಳವಾರ ಬೆಳಗಾವಿಗೆ ರಾಹುಲ್ ಗಾಂಧಿ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಮಂಗಳವಾರ ಬೆಳಗಾವಿಗೆ ಆಗಮಿಸಲಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿಯ ಅವಲೋಕನಕ್ಕಾಗಿ ರಾಹುಲ್ ಗಾಂಧಿ ಆಗಮಿಸುವರು. ಜಿಲ್ಲೆಯ ಕೆಲವೆಡೆ ರಸ್ತೆ ಮೂಲಕ ಸಂಚರಿಸಿ ಪ್ರವಾಹ ಪರಿಸ್ಥಿತಿ ಅವಲೋಕನ ನಡೆಸಲು ರಾಹುಲ್ ಗಾಂಧಿ ಆಸಕ್ತಿ ತೋರಿಸಿದ್ದಾರೆ ಎಂದು ಗೊತ್ತಾಗಿದೆ.
ಆದರೆ ಅವರು ಎಲ್ಲಿಗೆ ಭೇಟಿ ನೀಡಲಿದ್ದಾರೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಸೋಮವಾರ ಮಧ್ಯಾಹ್ನದ ಹೊತ್ತಿಗೆ ರಾಹುಲ್ ಪ್ರವಾಸ ಪಟ್ಟಿ ಅಂತಿಮವಾಗಬಹುದು.
ಬೆಳಗಾವಿ ಜಿಲ್ಲೆಯ ಪ್ರವಾಹ ವೀಕ್ಷಣಗೆ ಈಗಾಗಲೆ ಕೇಂದ್ರದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಅಮಿತ್ ಶಾ ಬಂದು ಹೋಗಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹಲ್ಲಾದ ಜೋಶಿ ಕೂಡ ಅಮಿತ್ ಶಾ ಜೊತೆಗೆ ವೈಮಾನಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಬೆಳಗಾವಿಯಲ್ಲೇ ವಾಸ್ತವ್ಯ ಮಾಡಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.
ಆದರೆ ಇವರೆಲ್ಲ ಆಡಳಿತ ಪಕ್ಷದ ನಾಯಕರು. ರಾಹುಲ್ ಗಾಂಧಿ ವಿರೋಧ ಪಕ್ಷದ ಮುಖಂಡರಾಗಿರುವುದರಿಂದ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿ ಎಷ್ಟು ಪರಿಹಾರ ನೀಡಲು ಕೇಂದ್ರದ ಮೇಲೆ ಒತ್ತಡ ಹೇರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಪ್ರವಾಹದಿಂದಾಗಿ ರಾಜ್ಯದಲ್ಲಿ 6 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಆದರೆ ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಅನಾರೋಗ್ಯದ ಕಾರಣದಿಂದ ಪ್ರವಾಹಪೀಡಿತ ಪ್ರದೇಶಗಳಿಗೆ ಬರಲಿಲ್ಲ. ಆದರೂ ಅವರು ನಷ್ಟವನ್ನು ಅಂದಾಜಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಆಗಿರುವ ನಷ್ಟದ ಕುರಿತು ಈವರೆಗೆ ಯಾವುದೇ ಅಂಕೆ ಸಂಖ್ಯೆ ಲಭ್ಯವಾಗಿಲ್ಲ. ಪ್ರವಾಹ ಇಳಿದ ನಂತರವಷ್ಟೆ ನಷ್ಟದ ಅಂದಾಜು ಲೆಕ್ಕ ಹಾಕಲು ಸಾಧ್ಯ. ಈಗಾಗಲೆ ಸಾವಿರಾರು ಮನೆಗಳು ನೆಲಸಮವಾಗಿವೆ. ಪ್ರವಾಹ ಇಳಿದ ನಂತರವೂ ನೆನೆದ ಸ್ಥಿತಿಯಲ್ಲಿರುವ ಮನೆಗಳು ಬೀಳುವ ಅಪಾಯವಿದೆ. ಬೆಳೆಗಳ ಸ್ಥಿತಿಗತಿ ಇನ್ನೂ ಗೊತ್ತಾಗಿಲ್ಲ. ಸಂತ್ರಸ್ತರು ಮನೆಯಲ್ಲಿ ಬಿಟ್ಟುಬಂದಿರುವ ಸಾಮಗ್ರಿಗಳ ನಷ್ಟವನ್ನೂ ಲೆಕ್ಕಹಾಕಬೇಕಿದೆ.
ರಾಹುಲ್ ಗಾಂಧಿ ಆಗಮನ ಹೆಚ್ಚಿನ ಪರಿಹಾರ ಬರಲು ನೆರವಾಗುವುದೇ ಎನ್ನುವುದನ್ನು ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ