
ಜಾತಿಗಣತಿ ಬಹಿರಂಗ ಚರ್ಚೆಯಾಗಲಿ: ಲಕ್ಷ್ಮಣರಾವ್ ಚಿಂಗಳೆ
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ-ರಾಜ್ಯದಲ್ಲಿ ಬಹುಸಂಖ್ಯಾತರೆಂದು ಹೇಳಿಕೊಳ್ಳುತ್ತಿರುವ ಲಿಂಗಾಯತ, ಒಕ್ಕಲಿಗರ ಪೊಳ್ಳು ಬೆದರಿಕೆಗಳಿಗೆ ಸರ್ಕಾರ ಹೆದರುವ ಅವಶ್ಯಕತೆ ಇಲ್ಲ. ಸರ್ಕಾರವು ಕೂಡಲೇ ಎಚ್.ಕಾಂತರಾಜು, ಜಯಪ್ರಕಾಶ ಹೆಗಡೆ ವರದಿಯನ್ನು ಯಥವತ್ತಾಗಿ ಒಪ್ಪಿ ಅಂಗೀಕರಿಸಬೇಕೆಂದು ಎಂದು ರಾಜ್ಯ ಹಿಂದುಳಿದ ಜಾತಿಗಳ ಮತ್ತು ಶೋಷಿತ ಸಮುದಾಯದ ಒಕ್ಕೂಟದ ಮುಖಂಡ ಡಾ.ರಾಜೇಂದ್ರ ಸಣ್ಣಕ್ಕಿ ಆಗ್ರಹಿಸಿದರು.
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಕಾಂತರಾಜು, ಜಯಪ್ರಕಾಶ ಹೆಗಡೆ ವರದಿಯನ್ನು ವಿರೋಧಿಸುತ್ತಿರುವ ವೀರಶೈವ ಲಿಂಗಾಯತರು, ಒಕ್ಕಲಿಗರು ಮೀಸಲಾತಿಗಾಗಿ ಬೇರೆ ಜಾತಿ, ಧಾರ್ಮಿಕ, ರಾಜಕೀಯ ಲಾಭಕ್ಕಾಗಿ ಇನ್ನೊಂದು ಜಾತಿ ಹೆಸರು ಹೇಳಿಕೊಳ್ಳುವುದನ್ನು ಮೊದಲು ನಿಲ್ಲಿಸಿ. 70 ವರ್ಷಗಳಿಂದ ನಿಮ್ಮ ದರ್ಪವನ್ನು ಸಹಿಸಿಕೊಂಡು ಬಂದಿದ್ದು, ಇನ್ನೂ ಮುಂದೆ ಗೊಡ್ಡು ಬೆದರಿಕೆಗಳಿಗೆ ನಾವು ಹೆರದುವುದಿಲ್ಲ. ನಿಮ್ಮನ್ನು ಹೊರಗಿಟ್ಟು ಚುನಾವಣೆಯಲ್ಲಿ ಗೆಲ್ಲುವಷ್ಟು ಜನಸಂಖ್ಯೆ ಹೊಂದಿದ್ದೇವೆ ಎಚ್ಚರಿಸಿದರು.
ಎಚ್.ಕಾಂತರಾಜು, ಜಯಪ್ರಕಾಶ ಹೆಗಡೆ ಸಮೀಕ್ಷೆಯ ವರದಿಯಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಲು ಅವಕಾಶವಿದೆ. ಹೀಗಾಗಿ ಮೊದಲು ಎಲ್ಲ ಜಾತಿ, ಜನಾಂಗದವರು ವರದಿಯನ್ನು ಒಪ್ಪಿಕೊಳ್ಳಬೇಕು. ವರದಿಯಲ್ಲಿ ಸತ್ಯಾಂಶ ತಿಳಿದುಕೊಳ್ಳದೆ ನಾವು ಬಹುಸಂಖ್ಯಾತರು ಎಂದು ಹೇಳಿಕೊಳ್ಳುವುದನ್ನು ನಿಲ್ಲಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಅಂಗೀಕರಿಸಿ ಬಹಿರಂಗಪಡಿಸಬೇಕು. ಲಿಂಗಾಯತ, ಒಕ್ಕಲಿಗರ ಬೆದರಿಕೆಗಳಿಗೆ ಹೆದರಬೇಡಿ. ಶೋಷಿತ ಸಮುದಾಯಗಳಿಗೆ ನ್ಯಾಯ ಕಲ್ಪಿಸಿಕೊಡಲು ಸರ್ಕಾರ ವರದಿ ಅನುಷ್ಠಾನಗೊಳಿಸಬೇಕು. ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವ ರಾಜ್ಯ ಹಿಂದುಳಿದ ಜಾತಿಗಳ ಮತ್ತು ಶೋಷಿತ ಸಮುದಾಯದ ಒಕ್ಕೂಟ ನಿಮ್ಮ ಬೆನ್ನಿಗೆ ನಿಂತುಕೊಂಡಿದೆ ಎಂದು ಹೇಳಿದರು.
ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮಾತನಾಡಿ, ಎಚ್.ಕಾಂತರಾಜು, ಜಯಪ್ರಕಾಶ ಹೆಗಡೆ ಸಮೀಕ್ಷೆಯ ವರದಿಯನ್ನು ಸರ್ಕಾರ ಬಹಿರಂಗ ಪಡಿಸಬೇಕು. 160 ಕೋಟಿ ರೂ. ಖರ್ಚು ಮಾಡಿ ವರದಿ ಅನುಷ್ಠಾನಗೋಳಿಸದೆ ಹಾಗೆ ಬಿಡುವುದು ತಪ್ಪು. ಕೂಡಲೇ ವರದಿ ಒಪ್ಪಿಕೊಳ್ಳಬೇಕು. ಸುಪ್ರೀಂ ಕೋರ್ಟ್ ಕೂಡ ಸಮೀಕ್ಷಾ ವರದಿಗಳನ್ನು ಅನುಷ್ಠಾನಗೊಳಿಸಲು ನಿರ್ದೇಶನ ನೀಡಿಕೊಂಡು ಬರುತ್ತಿವೆ. ವರದಿಯಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ನೀಡಿ. ಯಾವುದೇ ಕಾರಣಕ್ಕೂ ಮರು ಸಮೀಕ್ಷೆ ನಡೆಸಲು ಅವಕಾಶ ನೀಡಬೇಡಿ ಎಂದು ವಿನಂತಿಸಿದರು.
ರಾಜಶೇಖರ ತಳವಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್.ಕಾಂತರಾಜು, ಜಯಪ್ರಕಾಶ ಹೆಗಡೆ ಸಮೀಕ್ಷೆಯ ವರದಿ ಅನುಷ್ಠಾನಕ್ಕೆ ವಿಶೇಷ ಅಧಿವೇಶನ ಕರೆಯಬೇಕು. ಬಳಿಕ ಸಾರ್ವಜನಿಕ ಚರ್ಚೆಗೆ ಮುಕ್ತ ಅವಕಾಶ ನೀಡಿದ ಬಳಿಕ ಲೋಪದೋಷಗಳನ್ನು ಸರಿಪಡಿಸಿ ವರದಿ ಅಂಗೀಕರಿಸಬೇಕು. ಈ ವಿಷಯದಲ್ಲಿ ಸರ್ಕಾರವು ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ ಎಂದರು.
ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಮಲ್ಲೇಶ ಚೌಗುಲೆ ಮಾತನಾಡಿ, ರಾಜ್ಯ ಹಿಂದುಳಿದ ಜಾತಿಗಳ ಮತ್ತು ಶೋಷಿತ ಸಮುದಾಯದ ಒಕ್ಕೂಟದಲ್ಲಿ ನಾವೆಲ್ಲಾ ಒಗ್ಗಟ್ಟನಿಂದಲೇ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಎಚ್.ಕಾಂತರಾಜು, ಜಯಪ್ರಕಾಶ ಹೆಗಡೆ ಸಮೀಕ್ಷೆ ವರದಿ ಅನುಷ್ಠಾನಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ ಎಂದು ಹೇಳಿದರು.
ರಾಜಶೇಖರ್ ತಳವಾರ, ರಮೇಶ್ ಮಾದರ,ಸೈಯದ್ ಮನ್ಸೂರ್, ಆಕಾಶ್ ಬೇವಿನಕಟ್ಟಿ , ಮಹದೇವ ಫೋಳ , ಸಂತೋಷ್ ಹೊಂಗಲ್ ಕರೆಪ್ಪ ಅರ್ಜುನ್ ಗುಡೆನ್ನವರ್ , ವಿನಾಯಕ್ ಬನಹಟ್ಟಿ , ಬಸವರಾಜ ಬಸಲಿಗುಂದಿ, ಭಗವಂತ ಬಂಡಿ, ಎಚ್ಎಸ್ ನಸಲಾಪುರಿ ಎಸ್ ಎಫ್ ಪೂಜಾರಿ ಮಡೇಪ್ಪ ತೋಳಿನವರ, ಕೆಂಪನ ಕುರುಗುಂದ , ಸಿದ್ದಪ್ಪ ಉಳಗದವರ, ಮಲ್ಲಪ್ಪ ಸಣ್ಣಕ್ಕಿ ಶ್ರೀಕಾಂತ್ ಹಾದಿಮನಿ ಶಂಕರ್ ರಾವ್ ಹೆಗಡೆ ಅಶೋಕ್ ಮೆಟ್ ಗುಡ್ ಇನ್ನು ಮುಂತಾದವರು ಉಪಸ್ಥಿತರಿದ್ದರು.