ಪ್ರಗತಿವಾಹಿನಿ ಸುದ್ದಿ, ಕಾಗವಾಡ – ಕಾಂಗ್ರೆಸ್, ಜೆಡಿಎಸ್ ಶಾಸಕರನ್ನೆಲ್ಲ ಬಳಸಿಕೊಂಡು ಅತ್ಯುತ್ಸಾಹದಲ್ಲಿ ಸರಕಾರ ರಚನೆ ಮಾಡಿರುವ ಭರಾತೀಯ ಜನತಾಪಾರ್ಟಿಗೆ ಈಗ ಉಪಚುನಾವಣೆಯ ಕಂಟಕ ಎದುರಾಗಿದೆ.
ಅಕ್ಟೋಬರ್ 21ರಂದು ನಡೆಯಲಿರುವ 15 ಕ್ಷೇತ್ರಗಳ ಉಪಚುನಾವಣೆ ಸಂದರ್ಭದಲ್ಲಿ ಅನರ್ಹರನ್ನು ಸಮಾಧಾನಪಡಿಸುವುದೋ, ಸ್ವಪಕ್ಷೀಯ ಅಸಮಾಧಾನಿತರನ್ನು ಸಮಾಧಾನಪಡಿಸುವೋ ಗೊಂದಲ, ಸಂಕಷ್ಟದಲ್ಲಿ ಬಿಜೆಪಿ ನಾಯಕರಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಮೂರರಲ್ಲೂ ಈಗ ಬಿಜೆಪಿಗೆ ಭಿನ್ನಮತದ ಸಮಸ್ಯೆ ಎದುರಾಗಿದೆ. ಗೋಕಾಕದಲ್ಲಿ ಅಶೋಕ ಪೂಜಾರಿ, ಅಥಣಿಯಲ್ಲಿ ಲಕ್ಷ್ಮಣ ಸವದಿ ಹಾಗೂ ಕಾಗವಾಡದಲ್ಲಿ ರಾಜು ಕಾಗೆ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತವರು. ಈಗ ಅವರಿಗೆ ಟಿಕೆಟ್ ಕೊಡುವುದೋ ಅನರ್ಹ ಶಾಸಕರಿಗೆ ಅಥವಾ ಅವರು ಹೇಳಿದವರಿಗೆ ಟಿಕೆಟ್ ಕೊಡುವುದೋ ಗೊಂದಲ ಬಿಜೆಪಿಯಲ್ಲಿದೆ.
ರಾಜು ಕಾಗೆ ನಾಳೆ ಅಭಿಮಾನಿಗಳ ಸಭೆ
ಗೋಕಾಕದಲ್ಲಿ ಅಶೋಕ ಪೂಜಾರಿ ಈಗಾಗಲೆ ಕ್ಷೇತ್ರ ಸುತ್ತಲು ಆರಂಭಿಸಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಕೇಳಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಅನ್ಯ ಪಕ್ಷಗಳಿಂದ ಚುನಾವಣೆ ಕಣಕ್ಕಳಿದರೂ ಆಶ್ಚರ್ಯವಿಲ್ಲ.
ಕಾಗವಾಡದಲ್ಲಿ ರಾಜು ಕಾಗೆ ಚುನಾವಣೆ ತಯಾರಿ ಆರಂಭಿಸಿದ್ದಾರೆ. ಕಾಗೆಗೇ ಟಿಕೆಟ್ ನೀಡಬೇಕೆಂದು ಅವರ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಅನರ್ಹ ಶಾಸಕ ಶ್ರೀಮಂತ ಪಾಟೀಲ ಅಥವಾ ಅವರ ಪುತ್ರ ಶ್ರೀನಿವಾಸ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ನೀಡುವುದು ಅನಿವಾರ್ಯವಾಗಿದೆ. ಹಾಗಾದಲ್ಲಿ ರಾಜುಕಾಗೆ ಬಂಡಾಯವೇಳುವ ಸಾಧ್ಯತೆ ಇದೆ.
ಸಭೆಯ ನೋಟೀಸ್
ರಾಜು ಕಾಗೆ ನಾಳೆ ಬೆಳಗ್ಗೆ ಅಭಿಮಾನಿಗಳ ಸಭೆ ಕರೆದಿದ್ದಾರೆ. ಈ ಸಂಬಂಧ ಅವರು ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ,
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ