Kannada NewsLatest

ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಯೋಚನೆ ಹಿಂದೆ ದೊಡ್ಡ ಪ್ಲ್ಯಾನ್?

ಮಗನನ್ನು ಮಂತ್ರಿ ಮಾಡುವಂತೆ ರಮೇಶ್ ಬೇಡಿಕೆ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಸಿಡಿ ಪ್ರಕರಣದಲ್ಲಿ ಸಿಲುಕಿ ರಾಜಿನಾಮೆ ನೀಡಿ 4 ತಿಂಗಳಾದರೂ ತಮಗೆ ಕ್ಲೀನ್ ಚಿಟ್ ಸಿಗದಿರುವ ಹಿನ್ನೆಲೆಯಲ್ಲಿ ತೀವ್ರ ಸಿಡಿಮಿಡಿಗೊಂಡಿರುವ ಶಾಸಕ ರಮೇಶ ಜಾರಕಿಹೊಳಿ, ಶಾಸಕಸ್ಥಾನಕ್ಕೂ ರಾಜಿನಾಮೆ ನೀಡಲು ಮುಂದಾಗಿದ್ದಾರೆ.

ಈ ನಿರ್ಧಾರಕ್ಕೆ ಬರುವುದರ ಹಿಂದೆ ರಮೇಶ ಜಾರಕಿಹೊಳಿ ದೊಡ್ಡದೊಂದು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿಯೇ, ತಮ್ಮನ್ನು ತಕ್ಷಣಕ್ಕೆ ಮಂತ್ರಿ ಮಂಡಳಕ್ಕೆ ಸೇರಿಸಿಕೊಳ್ಳಲು ಅಸಾಧ್ಯವೆಂದಾದರೆ ಮಗನನ್ನಾದರೂ ಸಚಿವಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ.

ರಾಜಿನಾಮೆ ನೀಡಿ ಕೆಲವೇ ದಿನದಲ್ಲಿ ಎಸ್ಐಟಿ ತನಿಖೆ ಮೂಲಕ ಕ್ಲೀನ್ ಚಿಟ್ ಪಡೆದು ಮರಳಿ ಸಂಪುಟ ಸೇರಬಹುದು ಎನ್ನುವ ರಮೇಶ ಜಾರಕಿಹೊಳಿ ಲೆಕ್ಕಾಚಾರ ಈಡೇರಲಿಲ್ಲ. ಬಿಜೆಪಿಯಲ್ಲೇ ಕೆಲವರ ಹುನ್ನಾರದಿಂದಾಗಿ ತಮಗೆ ಪ್ರಕರಣದಿಂದ ಮುಕ್ತಿ ಸಿಗುತ್ತಿಲ್ಲ ಎನ್ನುವುದು ಅವರ ಆಕ್ರೋಶ.

ಜೊತೆಗೆ ತಾವು ಮರಳಿ ಸಚಿವರಾಗುವ ಮುನ್ನವೇ ಜಲಸಂಪನ್ಮೂಲ ಖಾತೆಯಲ್ಲಿರುವ ಹಣವನ್ನೆಲ್ಲ ಖರ್ಚು ಮಾಡಲು ಕೆಲವರು ಸಂಚು ರೂಪಿಸಿದ್ದಾರೆ ಎನ್ನುವುದು ಅವರ ಅಸಮಾಧಾನ.

ತಮಗೆ ತಕ್ಷಣಕ್ಕೆ ಕ್ಲೀನ್ ಚಿಟ್ ಸಿಗುವುದಿಲ್ಲ ಎನ್ನುವ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ ಅವರು ಮಗನನ್ನು ಮಂತ್ರಿ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ನಾನು ಏನೆಲ್ಲ ಕಷ್ಟಪಟ್ಟು ಬಿಜೆಪಿ ಸರಕಾರ ತಂದಿದ್ದೇನೆ. ಮಗನನ್ನು ಮಂತ್ರಿ ಮಾಡುವ ಮೂಲಕ ಅದರ ಋಣವನ್ನು ಬಿಜೆಪಿ ತೀರಿಸಬೇಕು ಎನ್ನುವುದು ಅವರ ಬೇಡಿಕೆ.

ಮಗನನ್ನು ಮಂತ್ರಿ ಮಾಡುವ ಭರವಸೆ ನೀಡಿದರೆ ನಾನು ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡುತ್ತೇನೆ. ಗೋಕಾಕ ಕ್ಷೇತ್ರದಿಂದಲೇ ಮಗನನ್ನು ನಿಲ್ಲಿಸಿ ಆರಿಸಿ ತರುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ ಈ ಬಗ್ಗೆ ಮುಖ್ಯಮಂತ್ರಿಗಳಾಗಲಿ, ಹೈಕಮಾಂಡ್ ಆಗಲಿ ಇನ್ನೂ ಒಪ್ಪಿಲ್ಲ. ಹಾಗಂತ ತಕ್ಷಣಕ್ಕೆ ತಿರಸ್ಕರಿಸಿಯೂ ಇಲ್ಲ. ತಮಗೆ ಕ್ಲೀನ್ ಚಿಟ್ ಕೊಡಿಸುವುದಕ್ಕೆ ಮತ್ತು ತಮ್ಮ ಪ್ರಸ್ತಾವನೆ ಕುರಿತು  ತೀರ್ಮಾನ ತೆಗೆದುಕೊಳ್ಳುವುದಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವುದೇ ರಮೇಶ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವಾಗಿದೆ.

ಬಿಜೆಪಿಯ ಮೂವರಿಂದಾಗಿ ತಮಗೆ ಅನ್ಯಾಯವಾಗಿದೆ ಎಂದು ಕುದಿಯುತ್ತಿರುವ ರಮೇಶ ಜಾರಕಿಹೊಳಿ, ಅವರನ್ನು ಮನೆಗೆ ಕಳಿಸದೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ಇನ್ನು 2 -3 ದಿನದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸಬೇಕು. ಅದಿಲ್ಲವಾದರೆ ದೆಹಲಿಗೆ ತೆರಳಿ ಹೈಕಮಾಂಡ್ ಬಳಿ ಮಾತನಾಡುವುದು. ಅದ್ಯಾವುದರಿಂದಲೂ ಪ್ರಯೋಜನವಾಗದಿದ್ದಲ್ಲಿ ಕಠಿಣವಾದ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದು ರಮೇಶ ಜಾರಕಿಹೊಳಿ ನಿರ್ಧಾರ ಎನ್ನಲಾಗುತ್ತಿದೆ.

ಇಬ್ಬರನ್ನು ಭೇಟಿಯಾದ ಬಳಿಕ ರಮೇಶ್ ಜಾರಕಿಹೊಳಿ ಮಹತ್ವದ ನಿರ್ಧಾರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button