ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣ ಕ್ಷಣಕ್ಕೂ ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ಸಿಡಿ ಲೇಡಿ ವಿಡಿಯೋ ಬಹಿರಂಗವಾದ ದಿನ ತನ್ನ ಮನೆಯವರ ಜೊತೆಗೆ ಮಾತನಾಡಿದ್ದಾಳೆ ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದ್ದು, ಅದರಲ್ಲಿ ನಾಯಕರೊಬ್ಬರ ಹೆಸರು ಪ್ರಸ್ತಾಪ ಮಾಡಲಾಗಿದೆ.
ಮಾರ್ಚ್ 2ರಂದು ಸಿಡಿ ಬಹಿರಂಗವಾದ ದಿನ ಸಿಡಿಯಲ್ಲಿರುವ ಯುವತಿ ತನ್ನ ಸಹೋದರನ ಜೊತೆ ಮಾತನಾಡಿದ್ದು, ವಿಡಿಯೋದಲ್ಲಿರುವುದು ನಾನಲ್ಲ. ಇದೆಲ್ಲವೂ ನಕಲಿ. ನನ್ನ ಧ್ವನಿಯಂತೆಯೇ ಆಡಿಯೋ ಮಾಡ್ಯುಲೇಟ್ ಮಾಡಲಾಗಿದೆ. ನನ್ನನ್ನು ನಂಬು ಎಂದು ಹೇಳುತ್ತಾಳೆ. ಇದನ್ನು ನಂಬಲು ಸಾಧ್ಯವೇ? ಎಲ್ಲಾ ವಿಡಿಯೋಗಳು ಭಾರಿ ವೈರಲ್ ಆಗುತ್ತಿದೆ ನೀನೆ ಎಂಬುದು ಗೊತ್ತಾಗುತ್ತಿದೆ ಎಂದು ಸಹೋದರ ಹೇಳಿದಾಗ. ಅದು ನಾನಲ್ಲ ಈ ವಿಡಿಯೋ ನಕಲಿ. ನಿಜವಾದ ವಿಡಿಯೋ ಬೇರೆ. ಇದರಲ್ಲಿ ಗ್ರಾಫಿಕ್ಸ್ ಮಾಡಿ ನಾನೆಂದು ಬಿಂಬಿಸಲಾಗುತ್ತಿದೆ. ಆ ವಿಡಿಯೋವನ್ನು ನಾಯಕರೊಬ್ಬರ ಕಡೆಯವರ ಮೂಲಕ ನಿನಗೆ ಕಳಿಸುತ್ತೇನೆ. ಆಗಲಾದರೂ ಅದು ನಾನಲ್ಲ ಎಂಬುದನ್ನು ನಂಬು ಎಂದು ಯುವತಿ ಕೇಳಿಕೊಳ್ಳುತ್ತಾಳೆ. ಆ ಸಂದರ್ಭದಲ್ಲಿ ನಾಯಕರೊಬ್ಬರ ಹೆಸರು ಉಲ್ಲೇಖಿಸುತ್ತಾಳೆ.
ಅಷ್ಟೇ ಅಲ್ಲ, ಯುವತಿ ಆಡಿಯೋದಲ್ಲಿ ತನ್ನ ತಾಯಿ ಜೊತೆಯೂ ಮಾತನಾಡಿದ್ದು, ನಾನು ನಂಬುವ ಕೃಷ್ಣನ ಆಣೆಯಾಗಿ, ನಿನ್ನ ಆಣೆ ಆಗಿ ಹೇಳುತ್ತಿದ್ದೇನೆ. ವಿಡಿಯೋದಲ್ಲಿರುವುದು ನಾನಲ್ಲ. ಮನೆಯವರೇ ನನಗೆ ಸಪೋರ್ಟ್ ಮಾಡಿಲ್ಲ ಎಂದರೆ ಹೇಗೆ ಎಂದು ಅಲವತ್ತುಕೊಳ್ಳುತ್ತಾಳೆ. ಯುವತಿಯ ತಾಯಿ ನಿನ್ನ ಕೆಲಸವನ್ನು ಬಿಟ್ಟು ಸ್ವಲ್ಪ ದಿನ ಊರಿಗೆ ಬಂದುಬಿಡು ಎಂದು ಹೇಳಿದಾಗ ಇದೆಲ್ಲವೂ ಕ್ಲೀಯರ್ ಆದ ಮೇಲೆ ಬರುವುದಾಗಿ ಯುವತಿ ಹೇಳುತ್ತಾಳೆ. ಮತ್ತೆ ಸಹೋದರನ ಬಳಿ ಮಾತನಾಡಿದ ಯುವತಿ ತಂದೆ-ತಾಯಿಯನ್ನು ಹ್ಯಾಂಡಲ್ ಮಾಡುವಂತೆ ಹೇಳಿದ್ದಾಳೆ.
ವಿಡಿಯೋ ತುಂಬಾ ವೈರಲ್ ಆಗಿದೆ ಗ್ರಾಫಿಕ್ಸ್ ಅಂದರೆ ಯಾರೂ ಕೂಡ ನಂಬುವಂತಿಲ್ಲ. ಏನೇ ನಿರ್ಧಾರ ಮಾಡುವ ಮೊದಲು ನೂರು ಸಾರಿ ಯೋಚನೆ ಮಾಡು. ಯಾರ ವಿರುದ್ಧ ಏನು ಹೇಳಿಕೆ ಕೊಟ್ಟರೆ ಏನಾಗುತ್ತೆ ಎಂಬುದನ್ನು ಯೋಚಿಸು. ಅವರು ಯಾರೂ ನಮ್ಮ ರೀತಿ ಕಾಮನ್ ಪೀಪಲ್ ಅಲ್ಲ ಎಂಬುದು ನೆನಪಿರಲಿ. ನಾಳೆ ಆ ಶಾಸಕ ರಾಜೀನಾಮೆ ಕೊಡುತ್ತಾನೆ. ಇದು ತುಂಬಾ ದೊಡ್ಡ ರಾಜಕೀಯ ವಿಷಯ ತುಂಬಾ ಡೇಂಜರ್ ಆಗುತ್ತೆ ಎಂದು ಸಹೋದರ ಎಚ್ಚರಿಸಿದ್ದಾನೆ. ಆದರೆ ಅದು ನಾನಲ್ಲ ಎಂಬುದನ್ನು ನಿನಗೆ ಪ್ರೂವ್ ಮಾಡ್ತೀನಿ ನೀನಾದ್ರೂ ನಂಬ್ತೀಯಾ ಎಂದು ಸಹೋದರನಿಗೆ ಯುವತಿ ಹೇಳಿದ್ದು, ತಾನು ಈಗ ನಾಯಕರೊಬ್ಬರ ಮನೆ ಬಳಿ ಇದ್ದೇನೆ. ನನ್ನ ಜೊತೆ ಗೆಳೆಯ ಆಕಾಶ್ ಕೂಡ ಇರುವುದಾಗಿ ಹೇಳಿದ್ದಾಳೆ.
6 ನಿಮಿಷ 59 ಸೆಕೆಂಡುಗಳ ಕಾಲ ಇರುವ ಆಡಿಯೋದಲ್ಲಿ 2 ಬಾರಿ ಯುವತಿ ನಾಯಕರೊಬ್ಬರ ಹೆಸರು ಪ್ರಸ್ತಾಪಿಸಿದ್ದು, ಯುವತಿಯ ಆಡಿಯೋ ಕೇಳಿದರೆ ಹಲವು ಅನುಮಾನಗಳು ಮೂಡುತ್ತಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ತಲ್ಲಣಕ್ಕೆ ಕಾರಣವಾಗಿದೆ. ಯಾವುದು ನಕಲಿ, ಯಾವುದು ಅಸಲಿ ಎನ್ನುವ ಅನುಮಾನ ಮೂಡುವಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ