ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಡಿ.ಸುಧಾಕರ್, ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕಿರುವುದು ನನಗೇ ಆಶ್ಚರ್ಯವಾಗುತ್ತಿದೆ. ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ನಾನೊಬ್ಬ ಮಾಜಿ ಸಚಿವ ಹಾಗಾಗಿ ದಿನಕ್ಕೆ ನೂರಾರು ಜನರು ಕರೆ ಮಾಡುತ್ತಾರೆ. ಆದರೆ ನನಗೆ ಸಿಡಿ ಯುವತಿ ಯಾರೆಂದು ಗೊತ್ತಿಲ್ಲ. ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದರು.
ನನಗೆ ಯಾವ ನರೇಶ್ ಆಗಲಿ, ಅವರ ಗ್ಯಾಂಗ್ ಆಗಲಿ ಯಾವುದೂ ಗೊತ್ತಿಲ್ಲ. ನನಗೆ ಯಾವ ಹನಿಟ್ರ್ಯಾಪ್, ಬ್ಲಾಕ್ ಮೇಲ್ ಕೂಡ ಮಾಡಿಲ್ಲ. ಸಿಡಿ ಯುವತಿ, ಈ ಪ್ರಕರಣ ಇದಾವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಅಂದಮೇಲೆ ಹಣದ ವ್ಯವಹಾರ ಎಲ್ಲಿಂದ ಬಂತು. ನಾನು ಯಾವುದೇ ರೀತಿಯ ಹಣವನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಡಿ ಪ್ರಕರಣ ಬೆಳಕಿಗೆ ಬಂದಾಗಿನಿಂದ ಮಾಜಿ ಸಚಿವರೊಬ್ಬರಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈಗ ನನ್ನ ಹೆಸರನ್ನೇ ಪ್ರಕರಣದಲ್ಲಿ ತಳುಕು ಹಾಕಲಾಗುತ್ತಿರುವುದು ಅಚ್ಚರಿ ತಂದಿದೆ. ನನಗೆ ಅಂತಹ ಭಯವಿದ್ದಿದ್ದರೆ ಮೊದಲೇ ನಾನು ಇಂಜಂಕ್ಷನ್ ಆರ್ಡರ್ ಪಡೆಯುತ್ತಿದ್ದೆ. ಒಂದು ವೇಳೆ ಎಸ್ ಐಟಿ ಹೇಳಿದರೆ ಹೋಗಿ ಉತ್ತರಿಸುತ್ತೇನೆ ಎಂದು ತಿಳಿಸಿದರು.
ಸಿಡಿ ಯುವತಿ ಜೊತೆ ಮಾಜಿ ಸಚಿವ ಸುಧಾಕರ್ ನಂಟು; ಸ್ಫೋಟಕ ಮಾಹಿತಿ ಬಹಿರಂಗ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ