Kannada NewsKarnataka NewsLatest
ಬೆಂಗಳೂರು-ಬೆಳಗಾವಿ ರೈಲಿಗೆ ಸುರೇಶ ಅಂಗಡಿ ನಾಮಕರಣಕ್ಕೆ ಶಿಫಾರಸ್ಸು; ಬೊಮ್ಮಾಯಿ – ಪ್ರಗತಿವಾಹಿನಿ ಮೊಟ್ಟಮೊದಲು ಹಕ್ಕೊತ್ತಾಯ ಮಾಡಿತ್ತು
ಸುರೇಶ ಅಂಗಡಿ ನಿಧನರಾದ ಮರುದಿನವೇ ಬೆಂಗಳೂರು – ಬೆಳಗಾವಿ ರೈಲಿಗೆ ಸುರೇಶ ಅಂಗಡಿ ಹೆಸರಿಡಲಿ ಎಂದು ಮೊಟ್ಟಮೊದಲು ಹಕ್ಕೊತ್ತಾಯ ಮಾಡಿದ್ದೇ ಪ್ರತಿವಾಹಿನಿ – ಇಲ್ಲಿದೆ 2020ರ ಸೆಪ್ಟಂಬರ್ 24ರಂದು ಪ್ರಕಟವಾದ ವರದಿ –
ಬೆಂಗಳೂರು – ಬೆಳಗಾವಿ ರೈಲಿಗೆ ಸುರೇಶ ಅಂಗಡಿ ಹೆಸರಿಡಲಿ – ಪ್ರಗತಿ ಮೀಡಿಯಾ ಹೌಸ್ ಉದ್ಘಾಟಿಸಿದ್ದ ಅಂಗಡಿ
*ದಿ.ಸುರೇಶ ಅಂಗಡಿ ಪ್ರಥಮ ಪುಣ್ಯ ಸ್ಮರಣೆ*
*ಕಂಚಿನ ಪುತ್ಥಳಿ ಅನಾವರಣ*
*ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ನಿರ್ಮಾಣಕ್ಕೆ ನೆರವು*
*ಬೆಂಗಳೂರು-ಬೆಳಗಾವಿ ರೈಲಿಗೆ ಸುರೇಶ ಅಂಗಡಿಯವರ ನಾಮಕರಣಕ್ಕೆ ರಾಜ್ಯದಿಂದ ಶಿಫಾರಸ್ಸು*
*-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಅಗತ್ಯ ಸಹಕಾರ ನೀಡಲಾಗುವುದು.ಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಸುರೇಶ ಅಂಗಡಿಯವರ ಹೆಸರು ಇಡಲು ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡಲಾಗುವುದು
ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆಯ ಆವರಣದಲ್ಲಿ ಸುರೇಶ ಅಂಗಡಿ ಎಜುಕೇಷನಲ್ ಫೌಂಡೇಷನ್ ಏರ್ಪಡಿಸಿದ್ದ ಕೇಂದ್ರ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಪ್ರಥಮ ಪುಣ್ಯಸ್ಮರಣೆ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುರೇಶ ಅಂಗಡಿ ಅವರು ಸುದೀರ್ಘ ರಾಜಕೀಯ ಜೀವನದಲ್ಲಿ ಎಲ್ಲರ ಪ್ರೀತಿ ಗಳಿಸಿ ಅಜಾತಶತ್ರುವೆನಿಸಿದ್ದರು.ಅವರ ಬೆಳವಣಿಗೆಯ ಹಿಂದೆ ಅವರ ತಾಯಿ ಕೊಟ್ರಮ್ಮ ಹಾಗೂ ಧರ್ಮಪತ್ನಿ ಮಂಗಲಾ ಅವರ ಸಹಕಾರವೂ ಮಹತ್ವದ್ದಾಗಿತ್ತು. ಪಕ್ಷದ ವಿಚಾರ,ಸಿದ್ಧಾಂತಗಳಿಗೆ ಅವರು ಬದ್ಧರಾಗಿದ್ದರು.ಕೇಂದ್ರ ರೇಲ್ವೆ ರಾಜ್ಯ ಸಚಿವರಾಗಿ ಅಧಿಕಾರವಹಿಸಿಕೊಂಡ ಕೆಲವೇ ದಿನಗಳಲ್ಲಿ ಅವರು ಬಹಳ ಮುತುವರ್ಜಿಯಿಂದ ಕಾರ್ಯ ಮಾಡಿ ನೆನೆಗುದಿಗೆ ಬಿದ್ದ ಹಲವು ಯೋಜನೆಗಳಿಗೆ ಮರು ಚಾಲನೆ ನೀಡಿದರು.ರೇಲ್ವೆ ಮಂಡಳಿಯಿಂದ ಹಣಕಾಸಿನ ಮಂಜೂರಾತಿ ತರುವುದು ಸುಲಭ ಕೆಲಸವಲ್ಲ ,ಅಂತಹ ಕಾರ್ಯಗಳನ್ನು ದಿ.ಸುರೇಶ ಅಂಗಡಿಯವರು ತಮ್ಮ ಪ್ರಭಾವದಿಂದ ಸರಳಗೊಳಿಸಿದ್ದರು.ರಾಜ್ಯದ ಎಲ್ಲ ಭಾಗಗಳೂ ಸೇರಿದಂತೆ ರಾಜಸ್ಥಾನ,ಮಹಾರಾಷ್ಟ್ರ ಇನ್ನಿತರ ರಾಜ್ಯಗಳಲ್ಲಿಯೂ ರೇಲ್ವೆ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಬೆಂಗಳೂರು ನಗರ ರೇಲ್ವೆ ,ತುಮಕೂರು-ಬೆಂಗಳೂರು ಹಾಗೂ ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗಗಳಿಗೆ ರೇಲ್ವೆ ಮಂಡಳಿಯ ಅನುಮೋದನೆ ಸಿಗಲು ಕಾರಣರಾಗಿದ್ದಾರೆ. ಅವರ ಕನಸಿನ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡಲಿದೆ. ಅವರೇ ಪ್ರಾರಂಭಿಸಿರುವ ಬೆಳಗಾವಿ-ಬೆಂಗಳೂರು ರೈಲಿಗೆ ಸುರೇಶ ಅಂಗಡಿಯವರ ನಾಮಕರಣ ಮಾಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಪತ್ರ ಬರೆಯಲಿದೆ.ಶಿಕ್ಷಣ ಪ್ರೇಮಿಗಳಾಗಿ,ಔದ್ಯೋಗಿಕ ಕ್ಷೇತ್ರದಲ್ಲಿಯೂ ಸಾಕಷ್ಟು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ ಎಂದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ,ದಿ.ಸುರೇಶ ಅಂಗಡಿ ಅಪರೂಪದ ,ಸರಳ ರಾಜಕಾರಣಿಯಾಗಿದ್ದರು. ಜನನಾಯಕರಾಗಿ,ಸಮಾಜಸೇವಕರಾಗಿ ಅವರು ಮಾಡಿರುವ ಕಾರ್ಯಗಳು ಮುಂದಿನ ನೂರಾರು ವರ್ಷಗಳ ಕಾಲ ಉಳಿಯಲಿವೆ .ಅವರು ಹಾಕಿಕೊಂಡ ಕಾರ್ಯಕ್ರಮಗಳನ್ನು ಕುಟುಂಬದ ಸದಸ್ಯರು,ಅಭಿಮಾನಿಗಳು ಮುಂದುವರೆಸಿಕೊಂಡು ಹೋಗಬೇಕು ಎಂದರು.
ಅರಣ್ಯ, ಆಹಾರ,ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ ಕತ್ತಿ ಮಾತನಾಡಿ,ಸುರೇಶ ಅಂಗಡಿಯವರು ರಾಜಕಾರಣದ ಜೊತೆಗೆ ಶಿಕ್ಷಣ ಮತ್ತು ಔದ್ಯೋಗಿಕ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಅವರ ಸಂಸ್ಥೆಗಳ ಬೆಳವಣಿಗೆಗೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ತಮ್ಮ ಸಂಘಟನಾ ಚತುರತೆಯಿಂದ ಸುರೇಶ ಅಂಗಡಿಯವರು ಬೆರಳೆಣಿಕೆಯ ಕಾರ್ಯಕರ್ತರೊಂದಿಗೆ ಜಿಲ್ಲೆಯಲ್ಲಿ ಪಕ್ಷವನ್ನು ಬಲವಾಗಿ ಕಟ್ಟಿ,ಬೆಳೆಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.ಬೆಳಗಾವಿ ಸ್ಮಾರ್ಟ್ ಸಿಟಿ,ವಿಮಾನ ,ರೈಲು ಸೌಕರ್ಯ, ರಿಂಗ್ ರಸ್ತೆ ನಿರ್ಮಾಣ ಮತ್ತಿತರ ಮಹತ್ವದ ಕಾರ್ಯಗಳ ಅನುಷ್ಠಾನದಲ್ಲಿ ಸುರೇಶ ಅಂಗಡಿ ಹಾಗೂ ತಾವಿಬ್ಬರೂ ಜೊತೆಯಾಗಿ ಸಂಸತ್ತು , ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾಡಿದ ಪ್ರಯತ್ನಗಳನ್ನು ಸ್ಮರಿಸಿದರು.
ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ಆದ್ಯತೆ ನೀಡಿ ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ನಿರ್ಮಾಣ ಕಾರ್ಯ ಕೈಗೊಳ್ಳಬೇಕು ಎಂದರು.
ಸಂಸದೆ ಮಂಗಲಾ ಸುರೇಶ ಅಂಗಡಿ ಮಾತನಾಡಿ, ಬೆಳಗಾವಿ ನಗರಕ್ಕೆ ಬೈಪಾಸ್ ರಿಂಗ್ ರಸ್ತೆ ನಿರ್ಮಾಣ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಪೂರ್ಣ ಕಟ್ಟಡ ನಿರ್ಮಿಸಲು ಮುಖ್ಯಮಂತ್ರಿಗಳು ಅಗತ್ಯ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ಸುರೇಶ ಅಂಗಡಿಯವರು ಹಾಗೂ ಈರಣ್ಣ ಕಡಾಡಿಯವರು ಬಿಜೆಪಿಯ ಜಿಲ್ಲಾಧ್ಯಕ್ಷರಾಗಿ ಅಹರ್ನಿಶಿ ದುಡಿದ ಪರಿಣಾಮವಾಗಿ ಇಂದು ಪಕ್ಷ ಬೆಳಗಾವಿ ಜಿಲ್ಲೆಯಲ್ಲಿ ಬಲವಾಗಿದೆ. ಕೇಂದ್ರದಲ್ಲಿ ರೇಲ್ವೆ ಖಾತೆ ರಾಜ್ಯ ಸಚಿವರಾಗಿ ಕೇವಲ ಒಂದು ವರ್ಷದ ಅವಧಿಯಲ್ಲಿ ಅವರು ಮಾಡಿದ ಕಾರ್ಯಗಳು ಅವರಲ್ಲಿನ ಕರ್ತೃತ್ವ ಶಕ್ತಿಗೆ ಸಾಕ್ಷಿಯಾಗಿವೆ. ಸ್ಮಾರ್ಟ್ ಸಿಟಿ ಯೋಜನೆಯಿಂದಾಗಿ ಬೆಳಗಾವಿಯ ಎಲ್ಲಾ ರಸ್ತೆಗಳು ಇಂದು ಸುಧಾರಣೆಯಾಗಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಉಡಾನ್ ಯೋಜನೆಯಿಂದಾಗಿ ಜನಸಾಮಾನ್ಯರು ವಿಮಾನ ಸಂಚಾರ ಮಾಡಲು ಸಾಧ್ಯವಾಗಿದೆ. ಬೆಳಗಾವಿ – ಧಾರವಾಡ ನೇರ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ 900 ಕೋಟಿ ರೂ.ಹಣ ಒದಗಿಸಿದೆ. ಈ ಕಾರ್ಯವನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಬೇಕು . ಈ ಯೋಜನೆ ಪೂರ್ಣಗೊಂಡರೆ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ತ್ರಿವಳಿ ನಗರಗಳಾಗಿ ಅಭಿವೃದ್ಧಿ ಹೊಂದಲಿವೆ ಎಂದರು.
ನಾಡಿನ ವಿವಿಧ ಮಠಾಧೀಶರು ಸಮಾರಂಭದ ಸಾನಿಧ್ಯವಹಿಸಿದ್ದರು. ಕೈಮಗ್ಗ ,ಜವಳಿ ,ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ,ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಮಾಜಿ ಉಪಮುಖ್ಯಮಂತ್ರಿ,ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮತ್ತಿತರರು ವೇದಿಕೆಯಲ್ಲಿದ್ದರು.
ಡಾ.ಸ್ಫೂರ್ತಿ ಅಂಗಡಿ(ಪಾಟೀಲ) ಪ್ರಾಸ್ತಾವಿಕವಾಗಿ ಮಾತನಾಡಿದರು.
————————————
ಸುರೇಶ ಅಂಗಡಿ ನಿಧನರಾದ ಮರುದಿನವೇ ಬೆಂಗಳೂರು – ಬೆಳಗಾವಿ ರೈಲಿಗೆ ಸುರೇಶ ಅಂಗಡಿ ಹೆಸರಿಡಲಿ ಎಂದು ಮೊಟ್ಟಮೊದಲು ಹಕ್ಕೊತ್ತಾಯ ಮಾಡಿದ್ದೇ ಪ್ರತಿವಾಹಿನಿ – ಇಲ್ಲಿದೆ 2020ರ ಸೆಪ್ಟಂಬರ್ 24ರಂದು ಪ್ರಕಟವಾದ ವರದಿ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ