
ಪ್ರಗತಿವಾಹಿನಿ ಸುದ್ದಿ: ಅನುಮತಿ ಪಡೆಯದೆ ಬಿಗ್ ಬಾಸ್ ಆರಂಭಿಸಿದ ಹಿನ್ನಲೆ ರಾಮನಗರ ಜಿಲ್ಲಾಡಳಿತ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದಿತ್ತು. ಆದರೆ ಇದೀಗ ಬಿಗ್ ಬಾಸ್ ಗೆ ಕೊಂಚ ಮಟ್ಟಿಗೆ ರಿಲೀಫ್ ನೀಡಲಾಗಿದೆ.
ನಿಯಮ ಉಲ್ಲಂಘನೆ, ಪೊಲೀಸರಿಂದ ಹಾಗೂ ಸ್ಥಳೀಯ ಪಂಚಾಯತ್ ನಿಂದ ಮಾಲಿನ್ಯ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಬಿಗ್ ಬಾಸ್ ಮನೆ ನಿರ್ಮಾಣ ಮಾಡಲಾಗಿದ್ದ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿತ್ತು. ಅದರಂತೆ ಸ್ಪರ್ಧಿಗಳನ್ನು ಬೇರೊಂದು ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿದೆ.
ಜಾಲಿವುಡ್ ಸ್ಟುಡಿಯೋಸ್‌ನ ಮಾತೃ ಸಂಸ್ಥೆ ವೇಲ್ಸ್ ಸ್ಟುಡಿಯೋಸ್‌ನವರು ತಾತ್ಕಾಲಿಕ ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ನಾವು ಪರವಾನಗಿ ಪಡೆದು ಸ್ಟುಡಿಯೋ ಕಾರ್ಯಾಚರಣೆ ನಡೆಸುತ್ತಿದ್ದೇವೆ. ನಮ್ಮಸ್ಟುಡಿಯೋದಲ್ಲಿ ನಡೆಯುವ ಎಲ್ಲ ಚಟುವಟಿಕೆಗಳು ಪರವಾನಗಿ ವ್ಯಾಪ್ತಿಯಲ್ಲೇ ಬರುತ್ತದೆ ಎಂದು ಮನವಿ ಸಲ್ಲಿಸಿದ್ರು.
ಹೀಗಾಗಿ, ನಮಗೆ 10 ದಿನಗಳ ಅವಧಿ ನೀಡುವಂತೆ ವಿನಂತಿಸುತ್ತೇವೆ. ಈ ಅವಧಿಯಲ್ಲಿ ಅಗತ್ಯ ತಿದ್ದುಪಡಿ ಕ್ರಮಗಳನ್ನು ಕೈಗೊಂಡು ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುತ್ತದೆ. ಸದ್ಯಕ್ಕೆ ತಾತ್ಕಾಲಿಕ ಅನುಮತಿ ನೀಡುವಂತೆ, ಬಳಿಕ ಪರಿಶೀಲನೆ ನಡೆಸಿ ಶಾಶ್ವತ ಅನುಮತಿಯನ್ನು ನವೀಕರಿಸುವಂತೆ ವೇಲ್ಸ್ ಸ್ಟುಡಿಯೋ ಜಿಲ್ಲಾಡಳಿತ ಕ್ಕೆ ಮನವಿ ಮಾಡಿದೆ.
ಇದೀಗ ಈ ಮನವಿಯನ್ನು ಒಪ್ಪಿಕೊಂಡಿದ್ದು ಬಿಗ್ ಬಾಸ್ ನಡೆಸಲು 10 ದಿನಗಳ ಕಾಲವಕಾಶ ನೀಡಿದೆ. ಅಲ್ಲದೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಆದೇಶಿಸಿದೆ.