Belagavi NewsBelgaum NewsKarnataka NewsPolitics

*ಭೀಮಗಢ ವನ್ಯಜೀವಿ ವಲಯದ ತಾಳೇವಾಡಿ ನಿವಾಸಿಗಳ ಸ್ಥಳಾಂತರ: ನಾಳೆ 27 ಕುಟುಂಬಗಳಿಗೆ ಚೆಕ್ ವಿತರಿಸಲಿರುವ ಈಶ್ವರ ಖಂಡ್ರೆ*

ಪ್ರಗತಿವಾಹಿನಿ ಸುದ್ದಿ: ಕಾಡುಪ್ರಾಣಿಗಳ ದಾಳಿಯ ಭೀತಿಯೊಂದಿಗೆ ನಿತ್ಯ ಬದುಕು ಸಾಗಿಸುತ್ತಿದ್ದ ಬೆಳಗಾವಿ ಜಿಲ್ಲೆ ಭೀಮಗಢ ವನ್ಯಜೀವಿ ಧಾಮದ ಒಳಗೇ ವಾಸಿಸುತ್ತಿರುವ ತಾಳೇವಾಡಿಯ ಗವಾಳಿ ಗ್ರಾಮದ 27 ಕುಟುಂಬಗಳು ಸ್ವ ಇಚ್ಛೆಯಿಂದ ಸ್ಥಳಾಂತರಕ್ಕೆ ಸಮ್ಮತಿಸಿದ್ದು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ನಾಳೆ ಚೆಕ್ ವಿತರಿಸಲಿದ್ದಾರೆ.

ಸ್ವಯಂಪ್ರೇರಿತರಾಗಿ ಅರಣ್ಯದೊಳಗಿನಿಂದ ಸಮಾಜದ ಮುಖ್ಯ ವಾಹಿನಿ ಸೇರಲು ಬಯಸಿರುವ 27 ಕುಟುಂಬ ಘಟಕಗಳಿಗೆ ನಾಳೆ ಮೊದಲ ಹಂತದಲ್ಲಿ ತಲಾ 10 ಲಕ್ಷ ರೂ. ಚೆಕ್ ವಿತರಿಸಲಾಗುತ್ತಿದೆ. 

Home add -Advt

ಈ ಕುಟುಂಬ ಘಟಕಗಳು ಕಾಡಿನೊಳಗಿರುವ ಮನೆಗಳನ್ನು ತೊರೆದು ಸ್ಥಳಾಂತರಗೊಂಡ ಬಳಿಕ, ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದ ತರುವಾಯ ಪ್ರತಿ ಕುಟುಂಬದ ಘಟಕಕ್ಕೆ ಉಳಿದ 5 ಲಕ್ಷ ರೂ. ಚೆಕ್ ವಿತರಿಸಲಾಗುವುದು.

ಬೆಳಗಾವಿಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಅಧಿವೇಶನ ನಡೆಯುತ್ತಿದ್ದ ವೇಳೆ, ಈಶ್ವರ ಖಂಡ್ರೆ ಅವರು ಖುದ್ದು ತಾಳೇವಾಡಿ ಪ್ರದೇಶಕ್ಕೆ ಭೇಟಿ ನೀಡಿ ಅರಣ್ಯವಾಸಿಗಳೊಂದಿಗೆ ಸಂವಾದ ನಡೆಸಿದ್ದರು. ಆ ಸಂದರ್ಭದಲ್ಲಿ ಅರಣ್ಯ ನಿವಾಸಿಗಳು ಸ್ವಯಂ ಪ್ರೇರಿತವಾಗಿ ಕಾಡಿನಿಂದ ಹೊರಬರುವ ಇಂಗಿತ ವ್ಯಕ್ತಪಡಿಸಿದ್ದರು. ಆ ನಂತರ ಅವರ ಸ್ಥಳಾಂತರಕ್ಕೆ ಅವಶ್ಯಕವಾದ ಗ್ರಾಮಸಭೆ ಇತ್ಯಾದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಸ್ವಯಂ ಪ್ರೇರಿತವಾಗಿ ಸ್ಥಳಾಂತರಕ್ಕೆ ಸಮ್ಮತಿಸುವ ಕುಟುಂಬದವರಿಗೆ ಪರಿಹಾರ ನೀಡಲು ಈಶ್ವರ ಖಂಡ್ರೆ ಸೂಚಿಸಿದ್ದರು.

ಎಲ್ಲರೂ ಆಧುನಿಕ ಜಗತ್ತಿನಲ್ಲಿ ಜೀವಿಸುತ್ತಿರುವಾಗ ಅನಿವಾರ್ಯತೆ ಮತ್ತು ಕಷ್ಟ ಕಾರ್ಪಣ್ಯಗಳ ನಡುವೆ ಅರಣ್ಯದಲ್ಲಿ ವಾಸಿಸುತ್ತಿರುವವರು ವೈದ್ಯಕೀಯ ಸೇವೆ, ರಸ್ತೆ, ನೀರು, ವಿದ್ಯುತ್ ಈ ಎಲ್ಲ ಸೌಕರ್ಯಗಳಿಂದ ವಂಚಿತರಾಗಿರುತ್ತಾರೆ. ಅನಾರೋಗ್ಯದ ಸಂದರ್ಭದಲ್ಲಿ ರಾತ್ರಿಯ ವೇಳೆ ಕಾಡಿನಿಂದ ಊರಿಗೆ ರೋಗಿಗಳನ್ನು ಕರೆದುಕೊಂಡು ಹೋಗುವುದು ಕಷ್ಟ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ವಯಂ ಪ್ರೇರಿತವಾಗಿ ಮುಂದೆ ಬಂದ ತಾಳೇವಾಡಿಯ  ಗೌವಳಿ ಗ್ರಾಮದ ಸ್ಥಳಾಂತರ ಮೊದಲ ಹಂತದಲ್ಲಿ ನಡೆಯುತ್ತಿದ್ದು, ಉಳಿದ ಜನವಸತಿಗಳ ಸ್ಥಳಾಂತರಕ್ಕೆ ಶೀಘ್ರ ಕ್ರಮ ವಹಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಖಂಡ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button