National

*ಕರಾವಳಿಗೆ ಇಂದು ಅಪ್ಪಳಿಸಲಿದೆ ರೆಮಲ್ ಚಂಡಮಾರುತ; ವಿಮಾನ, ರೈಲು ಸಂಚಾರ ಸ್ಥಗಿತ*

ಪ್ರಗತಿವಾಹಿನಿ ಸುದ್ದಿ: ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದ್ದು, ಚಂಡಮಾರುತವಾಗಿ ಮಾರ್ಪಟ್ಟಿದೆ. ಈ ಚಂಡಮಾರುತವನ್ನು ‘ರೆಮಲ್’ ಎಂದು ಹೆಸರಿಸಲಾಗಿದೆ. ಇಂದು ರಾತ್ರಿ ಬಂಗಾಳದ ಕರಾವಳಿಗೆ ಈ ಚಂಡಮಾರುತ ಅಪ್ಪಳಿಸಲಿದ್ದು, ಬಿರುಗಾಳಿ ಸಹಿತ ಭಾರಿ ಮಳೆ, ಭೂಕುಸಿತದಂತಹ ಘಟನೆಗಳು ಸಂಭವಿಸಲಿವೆ ಎಂದು ಹವಾಮಾನ ಇಲಾಖೆ ಹೈ ಅಲರ್ಟ್ ಘೋಷಿಸಿದೆ.

ರೆಮಲ್ ಚಂಡಮಾರುತ ಬಾಂಗ್ಲಾ ಹಾಗೂ ಪಶ್ಚಿಮ ಬಂಗಾಳದ ಮಧ್ಯೆ ಹಾದು ಹೋಗಲಿದ್ದು, ಗಂಟೆಗೆ 110-120 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಚಂಡಮಾರುತ ಅಪ್ಪಳಿಸುವ ಮುನ್ನ ವರುಣಾರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಪಶ್ಚಿಮ ಬಂಗಾಳ, ಓಡಿಶಾ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ.

ಇಂದು ಹಾಗೂ ನಾಳೆ ಪಶ್ಚಿಮ ಬಂಗಾಳ, ಓಡಿಶಾ ಕರಾವಳಿಯಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಹಾಗೂ ನಾಳೆ ಹಾಗೂ ಮೇ 28ರಂದು ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ.

ಇನ್ನು ರೆಮಲ್ ಚಂಡಮಾರುತ ಹಿನ್ನೆಲೆಯಲ್ಲಿ ಕೋಲ್ಕತ್ತಾದಲ್ಲಿ ಬಿರುಗಾಳಿ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೋಲ್ಕತ್ತಾ ಏರ್ ಪೋರ್ಟ್ ಬಂದ್ ಮಾಡಲಾಗಿದೆ. ವಿಮಾನ ಹಾರಾಟ ಸಂಪೂರ್ಣ ಸ್ಥಗಿತಗೊಂಡಿದೆ. ಹಲವು ರೈಲು ಸಂಚಾರಗಳಲ್ಲಿಯೂ ವ್ಯತ್ಯಯವುಂಟಾಗಿದೆ.

ಕರಾವಳಿ ತೀರ ಪ್ರದೇಶದ ಜನರನ್ನು ಹಾಗೂ ಮೀನುಗಾರರನ್ನು ಸ್ಥಳಾಂತರಿಸಲಾಗಿದೆ. ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೋಸ್ಟ್ ಗಾರ್ಡ್, ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಸ್ಥಳೀಯ ತಂಡಗಳು ಸನ್ನದ್ಧವಾಗಿವೆ.

Related Articles

Back to top button