
ಯಾರ್ಯಾರು, ಎಷ್ಟೆಷ್ಟಕ್ಕೆ ಸೇಲ್ ಆಗಿದ್ದಾರೆ?
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ರಾಜಿನಾಮೆ ನೀಡಲು, ಪಕ್ಷ ಸೇರಲು ಯಾರ್ಯಾರಿಗೆ ಎಷ್ಟು ಆಫರ್ ಬಂದಿತ್ತು ಎನ್ನುವ ವಿಷಯ ಶುಕ್ರವಾರ ವಿಧಾನಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.
ಶ್ರೀನಿವಾಸ ಗೌಡ, ತಮಗೆ 30 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿತ್ತು. ಅದರಲ್ಲಿ 5 ಕೋಟಿ ರೂಪಾಯಿಯನ್ನು ಮನೆಗೇ ತಂದು ಇಟ್ಟಿದ್ದರು ಎಂದು ಹೇಳಿ ಬಿಜೆಪಿಯ ಮೂವರ ಹೆಸರು ಹೇಳಿದರು.
ಶಾಸಕರಾದ ಅಶ್ವತ್ಥ ನಾರಾಯಣ, ವಿಶ್ವನಾಥ್ ಮತ್ತು ಮಾಜಿ ಸಚಿವ ಯೋಗೀಶ್ವರ ಮನೆಗೆ ಹಣ ತಂದಿದ್ದರು ಎಂದರು.
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿರುದ್ಧ ನೇರ ಆರೋಪ ಮಾಡಿದರು.
ವಿಶ್ವನಾಥ್ 28 ಕೋಟಿ ರೂ ಸಾಲ ಮಾಡಿದ್ದರು. ಅದನ್ನು ತೀರಿಸಲು ಹಣ ಬೇಕೆಂದಿದ್ದರು. ಬಿಜೆಪಿಯವರು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದೂ ಹೇಳಿದ್ದರು.
ನಾನು ದುಡಿದ ಹಣದಲ್ಲೇ ಸ್ವಲ್ಪ ಸ್ವಲ್ಪ ಕೊಡುತ್ತೇನೆ ಎಂದಿದ್ದೆ. ಆದರೆ ಈಗ ನನ್ನ ವಿರುದ್ದವೇ ಪಕ್ಷ ಬಿಡಲು ಕಾರಣ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಮಹೇಶ್ ಹರಿಹಾಯ್ದರು.
ಇನ್ನೂ ಅನೇಕರು ಆಫರ್ ಬಗ್ಗೆ ಮಾತನಾಡಿದರು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಮಗೆ ಬೆದರಿಕೆ ಒಡ್ಡಲಾಗುತ್ತಿದೆ. ನೀವು ಹೇಗೆ ಕೆಲಸ ಮಾಡುತ್ತೀರಿ ನೋಡುತ್ತೇವೆ. ತನಿಖೆ ಮಾಡಿಸುತ್ತೇವೆ ಎಂದೆಲ್ಲ ಬೆದರಿಸಲಾಗುತ್ತಿದೆ. ಆದರೆ ಇದಕ್ಕೆಲ್ಲ ಹೆದರುವವಳು ನಾನಲ್ಲ ಎಂದರು.
ವಿಶೇಷವೆಂದರೆ ಯಾರು ಏನೇ ಹೇಳಿದರೂ ಬಿಜೆಪಿ ಸದಸ್ಯರು ಮಾತ್ರ ಒಂದೂ ಪ್ರತಿಕ್ರಿಯಿಸದೆ ಕುಳಿತಿದ್ದರು.
ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸಹ ಹಲವಾರು ರೀತಿಯಿಂದ ಪ್ರಚೋದಿಸಲು ಪ್ರಯತ್ನಿಸಿದರು.