Belagavi NewsBelgaum NewsKannada NewsKarnataka News

ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ವೈದ್ಯ ಡಾ.ಬಿ.ಎಸ್.ಕೊಡಕಣಿ ನಿಧನ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಖ್ಯಾತ ಪ್ರಸ್ತೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರಾಗಿದ್ದ ಡಾ.ಬಿ.ಎಸ್.ಕೊಡಕಣಿ ಅವರು ೨೨ ಫೆಬ್ರುವರಿ ೨೦೨೪ ರಂದು ತಮ್ಮ ೮೯ನೇ ವಯಸ್ಸಿನಲ್ಲಿ ಬೆಳಗಾವಿಯಲ್ಲಿ ನಿಧನ ಹೊಂದಿದರು.

೧೯೫೯ರಲ್ಲಿ ಬರೋಡಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪಡೆದ ಅವರು ೧೯೬೨ರಲ್ಲಿ ಸ್ತ್ರೀರೋಗ ಶಾಸ್ತ್ರದಲ್ಲಿ ಎಂ.ಡಿ.ಪದವೀಧರರಾಗಿ, ಮುಂಬೈ ಆಸ್ಪತ್ರೆಯಲ್ಲಿ ನಾಲ್ಕು ವರ್ಷಗಳ ರಿಜಿಸ್ಟ್ರರಾಗಿ ಸೇವೆಸಲ್ಲಿಸಿ ೧೯೬೬ರಲ್ಲಿ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು.

ಡಾ.ಬಿ.ಎಸ್.ಕೊಡಕಣಿಯವರು ಇಂಗ್ಲೆಂಡ್, ಯೂರೋಪ, ಕೆನಡಾ, ಅಮೇರಿಕಾಗಳಲ್ಲಿ ಉಪನ್ಯಾಸಕರಾಗಿ, ಸಂಶೋಧಕರಾಗಿ, ಪಿಎಚ್.ಡಿ ಮಾರ್ಗದರ್ಶಕರಾಗಿ ಸ್ತ್ರೀ ಮತ್ತು ಮಕ್ಕಳ ಆರೋಗ್ಯ ಕುರಿತಾದ ಸಂಶೋಧನೆಗಳಲ್ಲಿ ಆಳವಾದ ಅಭ್ಯಾಸ ಮಾಡಿ ಸಲ್ಲಿಸಿದ ಕೊಡುಗೆ ಜಾಗತಿಕವಾಗಿ ಅನುಪಮವೆನಿಸಿದೆ.


ಜೆಎನ್‌ಎಂಸಿಯ ಖ್ಯಾತ ವೈದ್ಯರು : ೧೯೬೬ ರಿಂದ ೧೯೯೭ರ ವರೆಗೂ ಜೆಎನ್‌ಎಂಸಿ ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಅವರು, ೨೦೧೦ರಿಂದ ೨೦೨೦ರ ವರೆಗೂ ಕೆಎಲ್‌ಇ ವಿಶ್ವವಿದ್ಯಾಲಯ(ಕಾಹೆರ್)ದ ಸಂಶೋಧನಾ ವಿಭಾಗದ ನಿರ್ದೇಶಕರಾಗಿ, ತಾಯಿ ಮತ್ತು ನವಜಾತ ಶಿಶುಗಳ ಸಂಶೋಧನಾ ವಿಭಾಗದ ಮಾರ್ಗದರ್ಶಕರಾಗಿ ಮೌಲಿಕ ಸೇವೆ ಸಲ್ಲಿಸಿದ್ದರು.

ಖ್ಯಾತ ಸಂಶೋಧಕರು : ಡಾ. ಬಿ. ಎಸ್. ಕೋಡಕಣಿಯವರು ಅಂದಿನ ಭಾರತದ ಶ್ರೇಷ್ಠ ವೈದ್ಯ ವಿಜ್ಞಾನಿಗಳಾದ ಡಾ. ಭಾನು ಕೊಯಾಜಿನ್(ಪುಣೆ) ಡಾ. ಅಮೇನಿಜಿಯರ್ (ಲಕ್ನೊ) ಡಾ. ರೋಹಿತ ಭಟ್ಟ (ಬರೋಡಾ) ಇನ್ನಿತರರ ಸಂಪರ್ಕದೊಂದಿಗೆ ಸಂಶೋಧನಾ ಕಾರ್ಯದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದರು.

೧೯೮೯-೯೦ ರಲ್ಲಿ ಭಾರತ ದೇಶದ ಎಲ್ಲೆಡೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಎಮ್.ಸಿ.ಎಚ್ (ಗರ್ಭಿಣಿ ಸ್ತ್ರೀ ಮತ್ತು ನವಜಾತ ಶಿಶು ಆರೋಗ್ಯ ಪಾಲನ ಕೇಂದ್ರ) ಸೇವೆಗಳನ್ನು ಈ ಮೇಲಿನ ತಂಡವು ಪರೀಕ್ಷಿಸಿತು. ಈ ತಂಡವು ಅನಿಯಮಿತವಾಗಿ ಆರು ಕೇಂದ್ರಗಳನ್ನು ಪ್ರತಿ ರಾಜ್ಯದಲ್ಲಿ ಆಯ್ಕೆ ಮಾಡಿ ಸಮೀಕ್ಷೆಗಳ ಮೂಲಕ ಕೊಟ್ಟ ವರದಿಯು ಬಹು ಉಪಯುಕ್ತವಾಯಿತು.

ಡಾ.ಬಿ.ಎಸ್.ಕೋಡಕಣಿಯವರು ಕರ್ನಾಟಕ ರಾಜ್ಯದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಬಹುಮುಖ್ಯವಾದ ನಿರ್ಣಯ ಕೈಗೊಂಡ ಫಲವಾಗಿ ೧೯೯೮ರಲ್ಲಿ ೩೬ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದ ಬೆಳಗಾವಿ ಜಿಲ್ಲೆಯಲ್ಲಿ ಮುಂದೆ ೭೨ ಕೇಂದ್ರಗಳು ಸ್ಥಾಪನೆಗೊಂಡಿದ್ದು ಒಂದು ದಾಖಲಾರ್ಹ ಕಾರ್ಯವೆನಿಸಿದೆ. ಬೆಳಗಾವಿಗೆ ಐಸಿಎಂಆರ್ ಬರುವಲ್ಲಿಯೂ ಶ್ರಮಿಸಿದರು.


ಅಂತೆಯೇ ಅವರು ಮಾಡಿದ ಮೊದಲನೆಯ ಮಹತ್ವದ ಕಾರ್ಯವೆಂದರೆ ಜವಾಹರಲಾಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೆಡಿಕಲ್ ಎಜುಕೇಶನ್ ಸೆಲ್ ಸ್ಥಾಪಿಸಿದ್ದು. ಈ ಘಟಕವು ವೈದ್ಯರ ಸೇವೆ ಕೇವಲ ಚಿಕಿತ್ಸೆಗಾಗಿ ಸೀಮಿತಗೊಳ್ಳದೆ ಮುಂದಿನ ಯುವ ಪೀಳಿಗೆಗೆ ವೈದ್ಯಕೀಯ ಉಪನ್ಯಾಸಕರನ್ನು ರೂಪಿಸುವ ಜವಾಬ್ದಾರಿಯನ್ನು ಹೊತ್ತಿದೆ ಜೆಎನ್‌ಎಂಸಿಯಲ್ಲಿ ಅವರು ಮಾಡಿದ ಸಂಶೋಧನೆಗಳು ಸಮುದಾಯದ ಬದುಕಿನಲ್ಲಿ ಹೊಸ ಬೆಳಕನ್ನು ನೀಡಿವೆ. ಅವರ ಸಂಶೋಧನೆಗಳು ಜೆ.ಎನ್.ಎಮ್.ಸಿ.ಯನ್ನು ಜಾಗತಿಕಮಟ್ಟದಲ್ಲಿ ಗುರುತಿಸುವಂತಾಗಲು ಕಾರಣವಾಗಿದ್ದನ್ನು ಮರೆಯುವಂತಿಲ್ಲ.
ಹಲವು ಪ್ರಥಮಗಳ ವೈದ್ಯರು :

ಡಾ.ಬಿ. ಎಸ್. ಕೋಡಕಣಿಯವರು ಮೊಟ್ಟಮೊದಲ ಬಾರಿಗೆ ಬೆಳಗಾವಿಯಲ್ಲಿ ೧೯೮೨-೮೩ರಲ್ಲಿ ಗರ್ಭಿಣಿ ಸ್ತ್ರೀಯರ ಆರೋಗ್ಯ ತಪಾಸಣೆಗೆ ಅಲ್ಟ್ರಾಸೌಂಡ ಮೆಶಿನ್ ಸೌಲಭ್ಯ ತಂದರು. ೧೯೯೦ರಲ್ಲಿ ಲ್ಯಾಪ್ರೋಸ್ಕೊಪಿ ಸರ್ಜರಿಯನ್ನು ಆರಂಭಿಸಿದರು. ಮುಂಬೈ ಆಸ್ಪತ್ರೆಗಳಲ್ಲಿ ಇದ್ದ ಈ ಲ್ಯಾಪ್ರೋಸ್ಕೊಪಿ ಸರ್ಜರಿ ಮತ್ತು ಅಲ್ಟ್ರಾಸೌಂಡ್ ಮೆಶಿನ್ ಸೌಲಭ್ಯಗಳನ್ನು ಇವರು ಬೆಳಗಾವಿಯಲ್ಲಿ ಯಶಸ್ವಿಯಾಗಿ ನೀಡಿದ ತಜ್ಞರು ಎಂಬುದನ್ನು ಗಮನಿಸಬೇಕು.
ಹಳ್ಳಿಗಳಿಗೆ ಹೋಗಿ ಅಲ್ಲಿಯ ಶಾಲೆ ಆಸ್ಪತ್ರೆಗಳ ಆವರಣದಲ್ಲಿ ಲ್ಯಾಪ್ರೋಸ್ಕೊಪಿ ಟೊಬ್ಯಾಕ್‌ಟೂಮಿ ಮಾಡುವ ಮೂಲಕ ಹೆಣ್ಣು ಮಕ್ಕಳ ಬದುಕಿನಲ್ಲಿ ಬೆಳಕು ತಂದರು ಡಾ.ಬಿ.ಎಸ್.ಕೊಡಕಣಯವರು. ಕರ್ನಾಟಕ ಸರಕಾರವು ಇವರ ಸೇವೆಯನ್ನು ಗಮನಿಸಿ ರಾಜ್ಯ ಕುಟುಂಬ ಯೋಜನಾ ಪ್ರಶಸ್ತಿಯನ್ನು ಎರಡು ಬಾರಿ ನೀಡಿತು. ಬೆಳಗಾವಿ ಹಾಗೂ ವಿಜಯಪೂರ ಜಿಲ್ಲೆಯ ಹತ್ತು ಸಾವಿರಕ್ಕೂ ಹೆಚ್ಚು ತಾಯಂದಿರಿಗೆ ಲ್ಯಾಪ್ರೋಸ್ಕೊಪಿ ಮತ್ತು ಟೊಬ್ಯಾಕ್‌ಟೂಮಿ ಮಾಡಿದ ಕೀರ್ತಿ ಇವರದ್ದಾಗಿದೆ.
೧೯೮೨ರಲ್ಲಿ ಐ.ಸಿ.ಎಮ್.ಆರ್ ಕೇಂದ್ರವು ಡಾ. ಬಿ. ಎಸ್. ಕೊಡಕಣಿಯವರನ್ನು ಮುಖ್ಯ ನಿರೀಕ್ಷಕರನ್ನಾಗಿ ಮಾಡಿ ಫಿಟಲ್ ಗ್ರೋಥ ಕರ್ವ ಪ್ಯಾರಾಮೀಟರ್ (ಈeಣಚಿಟ ಉಡಿoತಿಣh ಅuಡಿve Pಚಿಡಿಚಿmeಣeಡಿ) ಬಗ್ಗೆ ರಾಷ್ಟ್ರಮಟ್ಟದಲ್ಲಿ ಸಂಶೋಧನೆ ಮಾಡಲು ಅವಕಾಶ ಕೊಟ್ಟಿತು. ಐದು ವರ್ಷದ ಅಧ್ಯಯನ ಮತ್ತು ಕ್ಷೇತ್ರಕಾರ್ಯದ ಹಿನ್ನೆಲೆಯಲ್ಲಿ ಈ ಸಂಶೋಧನಾ ಕಾರ್ಯ ಇವರ ನೇತೃತ್ವದಲ್ಲಿ ಜರುಗಿದ್ದು ಒಂದು ಇತಿಹಾಸ.


ಆದರ್ಶ ಶಿಕ್ಷಕರು : ಶುಭ್ರ ಶ್ವೇತ ವರ್ಣದ ವಸ್ತ್ರದಾರಿ ಯೂರೋಪಿಯನ್ ಶೈಲಿಯ ವೇಷಭೂಷಣ, ಒಂದಿಷ್ಟು ಸುಕ್ಕುಗಳಿರದ ಸೂಟು ಕೋಟು ಟೈಗಳಿಂದ ಶಿಸ್ತಿನ ಸಿಪಾಯಿಯ ಗತ್ತಿನ ನಡೆ ಆಕರ್ಷಕ ವ್ಯಕ್ತಿತ್ವ ಡಾ.ಕೊಡಕಣಿಯವರದಾಗಿತ್ತು. ತಮ್ಮ ವೃತ್ತಿಯಲ್ಲಿನ ಅಸಾಧಾರಣವಾದ ಶಸ್ತ್ರಚಿಕಿತ್ಸಾ ಕೌಶಲಗಳಿಂದ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಶ್ರೇಷ್ಠ ವಾಗ್ಮಿ, ಮೇಧಾವಿ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಜ್ಞಾನ ನೀಡುವಾಗ ಕ್ಲಿಷ್ಟ ಭಾಷೆಯನ್ನು ಬಳಸದೆ, ಎಷ್ಟು ಸಾಧ್ಯವೋ ಅಷ್ಟು ಸರಳ ಮಾಡಿ ಹೇಳುವ ಶೈಲಿ ಅವರದಾಗಿತ್ತು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮ್ಮೇಳನ ವಿಚಾರಸಂಕಿರಣಗಳನ್ನು ಜರುಗಿಸಿದ ವ್ಯವಸ್ಥಿತವಾಗಿ ಜರುಗಿಸಿದ ಕೀರ್ತಿ ಅವರದು.

ಡಾ.ಕೊಡಕಣಿಯವರ ಶಸ್ತ್ರಚಿಕಿತ್ಸಾ ಕೌಶಲವನ್ನು (Neat & Clean Surgery) ಅವರ ವಿದ್ಯಾರ್ಥಿಗಳು ಯಾವತ್ತಿಗೂ ನೆನಪಿಸಿಕೊಳ್ಳುತ್ತಾರೆ. ಅಂತೆಯೆ ರೋಗಿಗಳಿಗೆ ನೀಡುವ ಚಿಕಿತ್ಸಾ ಪದ್ಧತಿಯು ವಿಶೇಷವಾದದ್ದಾಗಿತ್ತು. ಇವರ ಜೊತೆ ಕೆಲಸ ಕಲಿಯಲು, ಜ್ಞಾನವನ್ನು ವಿಸ್ತರಿಸಿಕೊಳ್ಳಲು ವಿದ್ಯಾರ್ಥಿಗಳು ಮುಗಿ ಬೀಳುತ್ತಿದ್ದರೆಂದು ಹಳೆಯ ವಿದ್ಯಾರ್ಥಿಗಳು ಸ್ಮರಿಸಿಕೊಳ್ಳುತ್ತಾರೆ.


ಅಪರೂಪದ ಶಸ್ತ್ರ ಚಿಕಿತ್ಸಕರು : ಡಾ.ಬಿ.ಎಸ್.ಕೊಡಕಣಿಯವರಿಗೆ ರೋಗ ತಪಾಸಣೆಯ ಕೌಶಲವು ಅದ್ಭುತವಾಗಿತ್ತು. ಅಲ್ಟ್ರಾಸೌಂಡ ಮಷಿನ್ ಬರದೆ ಇದ್ದ ದಿನಗಳಲ್ಲಿ ರೋಗಿಯ ಜೊತೆ ಮಾತನಾಡುತ್ತಾ ರೋಗವನ್ನು ಕುರಿತಾದ ಮಾಹಿತಿಯನ್ನು ಕೇಳುತ್ತಲೇ ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳು ಯಾವತ್ತಿಗೂ ಸರಿಯಾಗಿರುತ್ತಿದ್ದವು. ಇವರಿಂದ ಚಿಕಿತ್ಸೆ ಪಡೆದ ರೋಗಿಗಳಿಗೆ ಯಾವಾಗಲೂ ಇನ್‌ಪೆಕ್ಷನ್ ಆಗುತ್ತಿರಲಿಲ್ಲ ಎಂಬುದು ಇಂದಿಗೂ ಜನಜನಿತವೆನಿಸಿದೆ. ಪ್ರತಿಭೆ-ಪರಿಶ್ರಮ-ಶಿಸ್ತುಗಳ ಸಂಯೋಜನೆ ಅವರ ವೃತ್ತಿಜೀವನದ ಯಶಸ್ಸಿಗೆ ಕಾರಣವಾಗಿದ್ದವು. ಹಾಗೆಯೇ ರೋಗಿಗಳು ಇವರ ಮಾರ್ಗದರ್ಶನ ಹಾಗೂ ಚಿಕಿತ್ಸೆಗಾಗಿ ದಿನಗಟ್ಟಲೆ ಕಾಯ್ದು ಚಿಕಿತ್ಸೆ ಪಡೆಯುತ್ತಿದ್ದರು.


ಸಂದ ಪ್ರಶಸ್ತಿ ಗೌರವಗಳು: ಡಾ.ಕೊಡಕಣಿಯವರ ಆರೋಗ್ಯ ವಲಯದ ಸೇವೆಯನ್ನು ಗುರುತಿಸಿ ೧೯೭೫ರಲ್ಲಿ W.H.O. Fellowship award ನೀಡಿ ಗೌರವಿಸಿತು. ಯುರೋಪಿನ ಲೈಸಿಸ್ಟರ್ ವಿಶ್ವವಿದ್ಯಾಲಯವು ೧೯೮೩ರಲ್ಲಿ ‘Visiting fellow school of medicine’ ಎಂದು ಗುರುತಿಸಿತು, ಇವರಿಗೆ ಬ್ರಿಟೀಷ್ ಕೌನ್ಸಿಲ ಅವಾರ್ಡ ನೀಡಿದೆ. ಬಾಂಬೆಯಲ್ಲಿ ೧೯೮೫ರಲ್ಲಿ  Founder fellowship Award of Indian college of obsteriecian and gynaecologist  ಗೌರವ ನೀಡಿತು. ೧೯೯೪ ರಲ್ಲಿ ಭಾರತ ದೇಶದ ಅತ್ಯುನ್ನತ ಗೌರವ ಬಿ.ಸಿ.ರಾಯ್ ಪ್ರಶಸ್ತಿ ಡಾ. ಕೋಡಕಣಿಯವರಿಗೆ ಸಂದಿತು. ಅದೇ ವರ್ಷ ಅವರನ್ನು Eminet medical teacher ಎಂದು ದೆಹಲಿಯ ಎಮ್.ಸಿ.ಐ ಸಹ ಪುರಸ್ಕರಿಸಿತು. ೨೦೧೩ರಲ್ಲಿ ಕೆ.ಎಲ್.ಇ ವಿಶ್ವವಿದ್ಯಾಲಯವು ಡಾ. ಬಿ. ಎಸ್. ಕೋಡಕಣಿಯವರಿಗೆ ಮಹಾಮಹೋಪಾಧ್ಯಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ. ಕೆಎಲ್‌ಇ ಶತಮಾನೋತ್ಸವದಲ್ಲಿ ಅವರ ಕುರಿತು ಗ್ರಂಥವನ್ನು ಪ್ರಕಟಿಸಿದೆ. ಮಾತ್ರವಲ್ಲದೆ ಜೆಎನ್‌ಎಂಸಿಯ ಜೀರಗೆ ಸಭಾಗೃಹದ ಕನ್ವೇಷನ್ ಸೆಂಟರ್ ಒಂದಕ್ಕೆ ಅವರ ಹೆಸರನ್ನು ನಾಮಕರಣ ಮಾಡಿ ಉಪಕೃತವಾಗಿದೆ.
ಡಾ.ಪ್ರಭಾಕರ ಕೋರೆ ಕಂಬನಿ : ಡಾ.ಬಿ.ಎಸ್.ಕೊಡಕಣಿಯವರ (೮೯)ನಿಧನ ಹೊಂದಿರುವುದು ತುಂಬ ದುಃಖವನ್ನುಂಟುಮಾಡಿದೆ. ಅವರ ಅಗಲಿಕೆಯಿಂದ ದೇಶ ಬಡವಾಗಿದೆ. ಅಸಂಖ್ಯ ಸ್ತ್ರೀರೋಗಿಗಳಿಗೆ ಜೀವನ ನೀಡಿದ ಪುಣ್ಯಾತ್ಮರು ಡಾ.ಕೊಡಕಣಿಯವರು. ಅವರ ಕೆ.ಎಲ್.ಇ. ಸಂಸ್ಥೆಗೆ ತಮ್ಮ ವೈದ್ಯಕೀಯ ಸೇವೆಯ ಮೂಲಕ ನೀಡಿದ ಕೊಡುಗೆ ಅನುಪಮ. ಅವರ ಹೆಸರನ್ನು ಕೆ.ಎಲ್.ಇ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕೆಂದು ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ದುಃಖ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಗೆ ಮೊಟ್ಟಮೊದಲ ಬಾರಿಗೆ ಅಲ್ಟ್ರಸೌಂಡ್ ಸ್ಕ್ಯಾನಿಂಗ್ ಮೆಷಿನ್ ತಂದವರು
ಡಾ. ಕೊಡಕಣಿ ಅವರು. ಗರ್ಭಸ್ಥ ಮಗುವಿನ ಬೆಳವಣಿಗೆಯನ್ನು ಗುರುತಿಸಿ ನೋಡಲು ಅಲ್ಟ್ರಸೌಂಡ್ ವೇವ್ಸಗಳು ಸಹಾಯ ಮಾಡುತ್ತವೆ. ಖಚಿತವಾದ ಅವರ ಮಾತುಗಳು ತಪಾಸಣೆ ಮಾಡುವ ಶೈಲಿ, ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ರೀತಿ ಅನನ್ಯವಾಗಿತ್ತು. ಅವರ ಶಸ್ತ್ರ ಚಿಕಿತ್ಸೆಯ ಪ್ರತಿಭೆ, ವಿದ್ವತ್ತುಗಳಿಗೆ ಬೆಳಗಾವಿಯ ಜನರು ಇಂದಿಗೂ ಗೌರವಿಸುತ್ತಾರೆ.
ಜವಾಹರಲಾಲ್ ನೆಹರೂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿ ೩೦ ವರ್ಷಗಳವರೆಗೆ ಒಂದು ವಿಭಾಗವನ್ನು ಕಟ್ಟಿ ಬೆಳೆಸುವುದು ಸರಳವಾದುದಲ್ಲ. ಜೆಎನ್‌ಎಂಸಿ ಪ್ರಾಚಾರ‍್ಯರಾಗಿದ್ದ ಡಾ. ಎಸ್. ಜಿ. ದೇಸಾಯಿ ತದನಂತರದಲ್ಲಿ ಡಾ. ಎಚ್. ಬಿ. ರಾಜಶೇಖರರೊಂದಿಗೆ ವೈದ್ಯಕೀಯ ಮಹಾವಿದ್ಯಾಲಯದ ರಥವನ್ನು ಎಳೆಯುವಲ್ಲಿ ಡಾ.ಬಿ.ಎಸ್.ಕೊಡಕಣಿಯವರ ಸೇವೆ ಅದ್ವಿತೀಯವೆನಿಸಿದೆ.
ಅವರಂತಹ ಖ್ಯಾತ ವೈದ್ಯರಿಂದ ಜೆಎನ್‌ಎಂಸಿ ಬೆಳೆಯಿತು, ವಿಸ್ತರಿಸಿತು. ಜೊತೆಗೆ ಅವರೂ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದರು. ವೈದ್ಯಕೀಯ ನೆಲೆಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯಕ್ಷೇತ್ರದಲ್ಲಿ ಅವರು ನಡೆಸಿದ ಸಂಶೋಧನೆಗಳು, ಕೈಗೊಂಡ ವೈದ್ಯಕೀಯ ಕ್ರಮಗಳು ಇಂದಿಗೂ ಅಜರಾಮರವಾಗಿ ಉಳಿದಿವೆ. ಸುದೀರ್ಘ ೫೮ ವರ್ಷಗಳ ವರೆಗೆ ಅವರು ಕೆಎಲ್‌ಇ ಸಂಸ್ಥೆಯೊಂದಿಗೆ ಒಡನಾಟವಿಟ್ಟುಕೊಂಡು ಅದರ ಬೆಳವಣಿಗೆಗೆ ಶ್ರಮಿಸಿದರು. ಇಂತಹ ಖ್ಯಾತ ವೈದ್ಯರನ್ನು ಕಳೆದುಕೊಂಡು ಸಂಸ್ಥೆಯು ಬಡವಾಗಿದೆ. ಅವರ ದಿವ್ಯಾತ್ಮಕ್ಕೆ ಕೆಎಲ್‌ಇ ಸಂಸ್ಥೆಯು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತದೆ ಎಂದು ಡಾ.ಕೋರೆಯವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button