*ರೇಣುಕಾಸ್ವಾಮಿ ಕೊಲೆ ಪ್ರಕರಣ*: *ಇಂದು ಪುನೀತ್‌ಗೆ ಎಸ್‌ಪಿಪಿಯಿಂದ ಮಹತ್ವದ ವಿಚಾರಣೆ*

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು ಮಹತ್ವದ ಹಂತ ತಲುಪಲಿದೆ. ಪ್ರಕರಣದ ಐ ವಿಟ್ನೆಸ್ ಪುನೀತ್ ವಿಚಾರಣೆ ನಡೆಯಲಿದೆ. ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು ಪುನೀತ್‌ಗೆ ಪಾಟಿ ಸವಾಲು ನಡೆಸಲಿದ್ದಾರೆ.
ಪುನೀತ್ ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ಎಸ್‌ಪಿಪಿ ಈಗಾಗಲೇ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಹಿಂದೆ ಪ್ರಾಸಿಕ್ಯೂಷನ್ ಕೇಳಿದ ಪ್ರಶ್ನೆಗಳಿಗೆ ಪುನೀತ್, “ಗೊತ್ತಿಲ್ಲ, ನೋಡಿಲ್ಲ, ನೆನಪಿಗೆ ಬರುತ್ತಿಲ್ಲ” ಎಂದು ಉತ್ತರಿಸಿದ್ದರು. ಹೀಗಾಗಿ ಅವರನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಲು ಮನವಿ ಮಾಡಲಾಗಿತ್ತು.
ಇಂದು ಪುನೀತ್ ಅವರ ಮಹತ್ವದ ಪಾಟಿ ಸವಾಲು ನಡೆಯಲಿದೆ. ತನಿಖೆಯ ಸಂದರ್ಭದಲ್ಲಿ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164ರ ಅಡಿಯಲ್ಲಿ ಪುನೀತ್ ಹೇಳಿಕೆ ನೀಡಿದ್ದರು. ಇದೀಗ ಆ ಹೇಳಿಕೆಯ ದಾಖಲೆಯನ್ನು ಮುಂದಿಟ್ಟುಕೊಂಡು ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರಶ್ನೆಗಳನ್ನು ಕೇಳಲಿದ್ದಾರೆ. ಪ್ರತಿಕೂಲ ಹೇಳಿಕೆ ನೀಡಿರುವುದರ ಬಗ್ಗೆಯೂ ವಿಚಾರಣೆ ನಡೆಯಲಿದೆ.
59ನೇ ಸೆಷನ್ಸ್ ನ್ಯಾಯಾಲಯದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಪುನೀತ್ ಈ ಬಾರಿ ಎಸ್‌ಪಿಪಿಯ ಪ್ರಶ್ನೆಗಳಿಗೆ ಯಾವ ರೀತಿ ಉತ್ತರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ದರ್ಶನ್ ಬೆನ್ನುನೋವು ಅರ್ಜಿ ವಿಚಾರಣೆ
ಇದೇ ವೇಳೆ ನಟ ದರ್ಶನ್ ಅವರ ಬೆನ್ನುನೋವಿನ ಹಿನ್ನೆಲೆಯಲ್ಲಿ ವೈದ್ಯಕೀಯ ಸೌಲಭ್ಯ ಕೋರಿ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಇಂದು ಎಸ್‌ಪಿಪಿ ಆಕ್ಷೇಪಣೆ ಸಲ್ಲಿಸಲಿದ್ದಾರೆ.
ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್ ಕಾಲಾವಕಾಶ ಕೋರಿತ್ತು. ಬೆನ್ನುನೋವಿನ ಚಿಕಿತ್ಸೆಗೆ ಸಂಬಂಧಿಸಿದಂತೆ ತನ್ನ ವಾದ ಮಂಡಿಸಲು ಸಿದ್ಧತೆ ಮಾಡಿಕೊಂಡಿದೆ. ಸದ್ಯ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಇಂದು ದರ್ಶನ್ ಅವರ ಅರ್ಜಿಯ ವಿಚಾರಣೆಯೂ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ.




