
ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ.
ಜೈಲಿನಲ್ಲಿ ವಾರಕ್ಕೊಮ್ಮೆ ಮನೆ ಊಟ ನೀಡಲು ಅವಕಾಶ ನೀಡಿದ್ದ 57ನೇ ಸಿಸಿಹೆಚ್ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಕೊಲೆ ಆರೋಪಿಗಳಾದ ಪವಿತ್ರಾ ಗೌಡ, ಲಕ್ಷ್ಮಣ್, ನಾಗರಾಜ್ ಅವರಿಗೆ ವಾರಕ್ಕೆ ಒಮ್ಮೆ ಮನೆ ಊಟಕ್ಕೆ ಬ್ರೇಕ್ ಹಾಕಲಾಗಿದೆ.
ಆರೋಪಿ ಪವಿತ್ರಾ ಗೌಡ ಈ ಹಿಂದೆ ತನಗೆ ಪ್ರತಿ ದಿನ ಜೈಲಿನಲ್ಲಿ ಮನೆ ಊಟಕ್ಕೆ ಅವಕಾಶ ಕೊಡಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಇದಕ್ಕೆ ಜೈಲಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ರ್ಜಿ ವಿಚಾರಣೆ ನಡೆಸಿದ್ದ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ಆರೋಪಿಗಳಾದ ಪವಿತ್ರಾ ಗೌಡ, ಲಕ್ಷ್ಮಣ್, ನಾಗರಾಜ್ ಅವರಿಗೆ ವಾರದಲ್ಲಿ ಒಂದು ದಿನ ಮನೆ ಊಟ ನೀಡಲು ಆದೇಶ ನೀಡಿತ್ತು.
ಇದನ್ನು ಪ್ರಶ್ನಿಸಿ ಜೈಲಾಧಿಕಾರಿಗಳು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ ಆದೇಶಕ್ಕೆ ತಡೆ ನೀಡಿದೆ.
ಇದೇ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜೈಲಾಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದೆ. ಆರೋಪಿಗಳಿಗೆ ಜೈಲಿನಲ್ಲಿ ಯಾವುದೇ ಸವಲತ್ತು ನೀಡುವಂತಿಲ್ಲ ಎಂದು ಆದೇಶ ನೀಡಿದೆ. ವಿಶೇಷ ಸವಲತ್ತು ನೀಡಿದರೆ ಜೈಲಾಧಿಕಾರಿಗಳ ವಿರುದ್ಧ ಕ್ರಮವಾಗುತ್ತದೆ. ಜೈಲಿನಲ್ಲಿ ಶಿಸ್ತು ಪಾಲನೆಯಾಗಬೇಕು ಎಂದಿದೆ. ಕಾನೂನು ಎಲ್ಲರಿಗೂ ಒಂದೇ. ಒಬ್ಬೊಬ್ಬರಿಗೆ ಒಂದೊಂದು ಸವಲತ್ತು ಕಾನೂನು ಬಾಹಿರ. ಪವಿತ್ರಾ ಗೌಡ, ಲಕ್ಷ್ಮಣ್ ಹಾಗೂ ನಾಗರಾಜ್ ಗೆ ವಾರಕ್ಕೆ ಒಮ್ಮೆ ಮನೆ ಊಟ ಆದೇಶಕ್ಕೆ ತಡೆ ನೀಡಲಾಗುವುದು ಎಂದು ಹೈಕೋರ್ಟ್ ಆದೇಶ ನೀಡಿದೆ.


