ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಖಾನಾಪುರದ ಬೇಕ್ವಾಡ ಕ್ರಾಸ್ ನಲ್ಲಿ ವಿದ್ಯಾರ್ಥಿಗಳ ಮೇಲೆ ಬಸ್ ಹತ್ತಿಸಲು ಮುಂದಾದ ಬಸ್ (KA42 F 1096) ಚಾಲಕ ಹಳಿಯಾಳ ಡಿಪೋಗೆ ಸೇರಿದವ ಎನ್ನುವುದು ಗೊತ್ತಾಗಿದ್ದು, ಬುಧವಾರ ಆತನನ್ನು ಅಮಾನತುಗೊಳಿಸುವ ಸಾಧ್ಯತೆ ಇದೆ.
ಹಲವಾರು ಬಸ್ ಚಾಲಕರು ಉದ್ದಟತನದ ವರ್ತನೆ ತೋರಿಸುವುದು, ಬೇಕೆಂದೇ ಬಸ್ ನಿಲ್ಲಿಸದೆ ಪ್ರಯಾಣಿಕರನ್ನು ಸತಾಯಿಸುವುದು ಗಮನಕ್ಕೆ ಬಂದಿದೆ. ಹಾಗಾಗಿ ಅಂತವರಿಗೆಲ್ಲ ಮೆಮೋ ನೀಡಲಾಗಿದೆ. ಅನೇಕ ಕಡೆ ಕಂಟ್ರೋಲರ್ ಗಳನ್ನು ನೇಮಿಸಲಾಗಿದೆ. ಈ ರೀತಿ ಮಾಡುವ ಒಂದಿಬ್ಬರ ಮೇಲೆ ಕಠಿಣ ಕ್ರಮ ತೆಗೆದುಕೊಂಡರೆ ಉಳಿದವರಿಗೂ ಬುದ್ದಿ ಬರುತ್ತದೆ. ಇಂತಹ ವರ್ತನೆಯನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಆಗಿದ್ದೇನು?
ಖಾನಾಪುರ ತಾಲೂಕಿನ ಬೇಕ್ವಾಡ ಕ್ರಾಸ್ ನಲ್ಲಿ ಕಳೆದ ಒಂದು ವಾರದಿಂದ ಬಸ್ ಗಳನ್ನು ನಿಲ್ಲಿಸದೆ ಬಸ್ ಚಾಲಕರು ವಿದ್ಯಾರ್ಥಿಗಳನ್ನು ಸತಾಯಿಸುತ್ತ ಬಂದಿದ್ದಾರೆ. ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆ, ಕಾಲೇಜಿಗೆ ತೆರಳಲಾಗದೆ ಪರದಾಡುತ್ತಿದ್ದರು. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಮಂಗಳವಾರ ರಸ್ತೆಗೆ ಅಡ್ಡಲಾಗಿ ನಿಂತಿದ್ದಾರೆ. ಸಾಕಷ್ಟು ದೂರದಿಂದಲೇ ಬಸ್ ಚಾಲಕನಿಗೆ ವಿದ್ಯಾರ್ಥಿಗಳು ರಸ್ತೆಯಲ್ಲಿ ನಿಂತಿರುವುದು ಕಾಣುವಂತಿತ್ತು. ಆದರೂ ಬೇಕೆಂದೇ ಜೋರಾಗಿ ಬಸ್ ಓಡಿಸಿಕೊಂಡು ಬಂದಿದ್ದಾನೆ.
ಬಸ್ ಬರುವ ವೇಗ ಕಂಡು ಕೆಲವು ವಿದ್ಯಾರ್ಥಿಗಳು ಓಡಿದ್ದಾರೆ. ಆದರೆ ಓರ್ವ ವಿದ್ಯಾರ್ಥಿ ಮಾತ್ರ ರಸ್ತೆ ಮಧ್ಯೆಯೇ ನಿಂತು ಕೈಯಿಂದ್ ಬಸ್ ತಡೆಯುವ ಪ್ರಯತ್ನ ಮಾಡಿದ್ದಾನೆ. ಸುಮಾರು 10-15 ಅಡಿ ದೂರದವರೆಗೂ ವಿದ್ಯಾರ್ಥಿಯನ್ನು ತಳ್ಳಿಕೊಂಡೇ ಓಡಿಸಿದ್ದಾನೆ ಡ್ರೈವರ್. ಕೊನೆಗೂ ಬಸ್ ನಿಲ್ಲಿಸದೆ ಓಡಿಸಿಕೊಂಡು ಹೋಗಿದ್ದಾನೆ. ವಿದ್ಯಾರ್ಥಿ ಪವಾಡ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಂಪೂರ್ಣ ಘಟನೆಯನ್ನು ವಿದ್ಯಾರ್ಥಿಗಳು ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ವೀಡಿಯೋ ನೋಡಿದರೆ ಮೈ ಜುಮ್ಮೆನ್ನುವಂತಿದೆ.
ವರದಿ ಕೇಳಿದ ಸವದಿ
ಘಟನೆ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಇದೊಂದು ದುರದೃಷ್ಟಕರ ಘಟನೆ. ಬಸ್ ಚಾಲಕನ ಕುರಿತು ವರದಿ ನೀಡುವಂತೆ ಮತ್ತು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದೇನೆ ಎಂದಿದ್ದಾರೆ.
ವಿದ್ಯಾರ್ಥಿಗಳ ಪರದಾಟ ತಪ್ಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ, ಇಂತಹ ಘಟನೆ ನಡೆಯದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಸವದಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ