Latest

ಗಣರಾಜ್ಯೋತ್ಸವ ಪಥಸಂಚಲನ: 12 ರಾಜ್ಯಗಳ ಸ್ತಬ್ಧಚಿತ್ರಗಳು ಆಯ್ಕೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಗಣರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ಪೆರೇಡ್ ಗೆ ಸಿದ್ಧತೆಗಳು ನಡೆದಿದೆ.  ಈ ಬಾರಿ ಪೆರೇಡ್ ಗೆ ಕರ್ನಾಟಕ ಸೇರಿ 12 ರಾಜ್ಯಗಳ ಸ್ತಬ್ಧಚಿತ್ರಗಳು ಆಯ್ಕೆಯಾಗಿವೆ.

ಆದರೆ, ಕೇರಳ, ಪಶ್ಚಿಮಬಂಗಾಳ ಹಾಗೂ ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳ ಸ್ತಬ್ಧಚಿತ್ರವನ್ನು ರಕ್ಷಣಾ ಇಲಾಖೆ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.

ಕರ್ನಾಟಕದಿಂದ ಜಗಜ್ಯೋತಿ ಬಸವೇಶ್ವರ ಅನುಭವ ಮಂಟಪ ಸ್ತಬ್ಧಚಿತ್ರ ಪಥಸಂಚಲನದಲ್ಲಿ ಪ್ರದರ್ಶನಗೊಳ್ಳಲಿದೆ. ಭಾರತದ ಸಂವಿಧಾನಕ್ಕೆ 70 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ 12ನೇ ಶತಮಾನದ ಅನುಭವ ಮಂಟಪದ ಮಾದರಿಯೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಎಂಬಂತೆ ಈ ಬಾರಿ ಸ್ತಬ್ಧಚಿತ್ರದಲ್ಲಿ ಮೂಡಿ ಬರುತ್ತಿದೆ. ಸತತ 12ನೇ ಬಾರಿಗೆ ಕರ್ನಾಟಕ ಸ್ತಬ್ಧಚಿತ್ರಕ್ಕೆ ಪೆರೇಡ್ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ.

ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡುವ ತಜ್ಞರ ಸಮಿತಿಯು ಮೂರನೇ ಸುತ್ತಿನ ಸಭೆಯಲ್ಲಿ ಕೇರಳದ ಸ್ತಬ್ಧಚಿತ್ರ ಪ್ರಸ್ತಾವವನ್ನು ತಿರಸ್ಕರಿಸಿದೆ. ಥೆಯ್ಯಮ್ ಹಾಗೂ ಕಲಾಮಂಡಲ ಸಾಂಸ್ಕೃತಿಕ ಕಲೆಗಳನ್ನು ಆಧರಿಸಿದ ಸ್ತಬ್ಧಚಿತ್ರ ಪ್ರಸ್ತಾಪವನ್ನು ಕೇರಳ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ  ಕೇರಳ ಪ್ರಸ್ತಾಪ ತಿರಸ್ಕಾರಗೊಂಡಿದೆ.

ಕೇಂದ್ರದ ಈ ನಡೆಯ ವಿರುದ್ಧ ಕಿಡಿಕಾರಿರುವ ಕೇರಳ  ಕಾನೂನು ಸಚಿವ ಎ.ಕೆ.ಬಾಲನ್ ಅವರು ಇದೊಂದು ರಾಜಕೀಯ ಪ್ರೇರಿತ ನಿರ್ಧಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button