ಪ್ರಗತಿವಹಿನಿ ಸುದ್ದಿ, ಅಥಣಿ- ಹಲವಾರು ವರ್ಷಗಳಿಂದ ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಅರೇಕಾಲಿಕ ಉಪನ್ಯಾಸಕರ ವೇತನ ಹೆಚ್ಚಳ ಮತ್ತು ಸೇವಾ ಭದ್ರತೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಅಥಣಿ ಪಾಲಿಟೆಕ್ನಿಕ್ ಶಿಕ್ಷಕರು ಮನವಿ ನೀಡಿದರು .
ಅಥಣಿ ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಉಪನ್ಯಾಸಕ ಆರ್.ಎ.ಬಡಿಗೇರ, ನಾವು ಹಲವು ವರ್ಷಗಳಿಂದ ಉಪನ್ಯಾಸ ಮಾಡುತ್ತಿದ್ದೇವೆ. ನಮಗೆ ಮಾಸಿಕವಾಗಿ ೭೫೦೦ ರೂ. ವೇತನ ನಿಗದಿಪಡಿಸಿ ವಾರ್ಷಿಕವಾಗಿ ಒಮ್ಮೆ ಅಥವಾ ಎರಡು ಬಾರಿ ನೀಡುತ್ತಿದ್ದಾರೆ.
ಅದೂ ಕೂಡ ೮ ತಿಂಗಳಿಗೆ ಮಾತ್ರ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಬಿವೃದ್ದಿಯಲ್ಲಿ ಸಂಪೂರ್ಣ ಶ್ರಮವನ್ನು ವಹಿಸುತ್ತೇವೆ. ಆದರೆ ಸರಕಾರ ನಮ್ಮನ್ನು ಕಡೆಗಣಿಸುತ್ತಿದೆ ಎಂದು ಸರಕಾರದ ವಿರುದ್ದ ದೂರಿದರು.
ಪ್ರೌಢಶಾಲೆ ಅತಿಥಿ ಉಪನ್ಯಾಸಕರು ಮಾಸಿಕವಾಗಿ ೮೦೦೦ ರೂ ವೇತನ ಪಡೆಯುತ್ತಿದ್ದಾರೆ. ಪದವಿ ಪೂರ್ವ ಅತಿಥಿ ಉಪನ್ಯಾಸಕರು ೧೨೦೦೦ ರೂ.ಗಳನ್ನು ೧೦ ತಿಂಗಳಿಗೆ ಪಡೆಯುತ್ತಿದ್ದಾರೆ. ಹೀಗೆ ನಮಗಿಂತ ಕೆಳಗಿನ ಹಂತದ ಶಿಕ್ಷಣ ನೀಡುವ ಉಪನ್ಯಾಸಕರೆಲ್ಲ ನಮಗಿಂತ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಆದರೆ ನಮಗೆ ಮಾತ್ರ ಕಡಿಮೆ ವೇತನ ನೀಡಿ ಸರಕಾರವು ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಸರಕಾರವು ಕಳೆದ ೧೩ ವರ್ಷಗಳ ಹಿಂದೆ ನಿಗದಿ ಮಾಡಿದ ವೇತನವನ್ನು ನಮಗೆ ಈಗಲೂ ನೀಡುತ್ತಿದೆ. ೨೦೦೭ ರ ನಂತರ ಒಂದು ಬಾರಿಯೂ ಕೂಡ ನಮ್ಮ ವೇತನ ಪರಿಷ್ಕರಣೆಯಾಗಿಲ್ಲ. ಸರಕಾರವು ಮಾಡುತ್ತಿರುವ ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ವಿನಂತಿಸಿದರು.
ಈ ವೇಳೆ ಬಾಳಪ್ಪಾ ನಂದೇಶ್ವರ , ರಾವಸಾಬ ಅಂಬಿ , ಬಸವರಾಜ ಹಿಪ್ಪರಗಿ, ಮಂಜುನಾಥ ಬಡಿಗೇರ, ಸುರೇಶ ಚೌಗಲಾ, ವಿಠಲ ಕೆಂಪವಾಡ, ಶೀವಾನಂದ ಕೆಂಪವಾಡ, ಸುರೇಶ ಪುಟಾಣಿ ಹಾಗೂ ಇನ್ನಿತರರು ಹಾಜರಿದ್ದರು .
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ