ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರೂ ಆದ ಪ್ರೊ. ಎಂ.ಟಿ. ಕಾಂಬಳೆ ಅವರು ಶನಿವಾರ ನಸುಕಿನಜಾವ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 70 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದ ಕಾರಣ ಕಳೆದ ಒಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿದ್ದರೆಂದು ಕುಟುಂಬದ ಮೂಲಗಳು ತಿಳಿಸಿವೆ. ಇಂದು ಅವರ ಸ್ವಗ್ರಾಮವಾದ ಅಥಣಿ ತಾಲೂಕಿನ ಕೃಷ್ಣಕಿತ್ತೂರಿನಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಸ್ವಗ್ರಾಮದಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿದ್ದ ಪ್ರೊ. ಎಂ.ಟಿ. ಕಾಂಬಳೆ ಅವರು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 30 ವರ್ಷಗಳವರೆಗೆ ಸೇವೆ ಸಲ್ಲಿಸಿದ್ದಾರೆ. ಅಂಬೇಡ್ಕರ್ ಅಧ್ಯಯನ ಪೀಠ, ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಇತಿಹಾಸ ಕುರಿತು ಸಂಶೋಧನೆ ಅಧ್ಯಯನ ನಡೆಸಿದ ಅವರ ಹಲವಾರು ಸಂಶೋಧನಾತ್ಮಕ ಲೇಖನಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮ್ಯಾಗ್ಜಿನ್ ಗಳಲ್ಲಿ ಪ್ರಕಟಗೊಂಡಿವೆ. ಇವರ ಮಾರ್ಗದರ್ಶನದಲ್ಲಿ ಹಲವಾರು ವಿದ್ಯಾರ್ಥಿಗಳು ಪಿಎಚ್.ಡಿ. ಹಾಗೂ ಎಂ.ಫಿಲ್ ಸಂಶೋಧನೆ ಮಾಡಿ ಪದವಿಪಡೆದುಕೊಂಡಿದ್ದಾರೆ. ಮೃತರ ನಿಧನಕ್ಕೆ ಅನೇಕರು ಕಂಬನಿ ಮಿಡಿದು ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ