Kannada NewsKarnataka NewsLatest

ಬೆಳಗಾವಿ ಪಾಲಿಕೆ ಆಯುಕ್ತರ ಮೇಲೆ ಕಂದಾಯ ಅಧಿಕಾರಿ ದೂರು;  ದೊಡ್ಡಗೌಡರ್ ವಿರುದ್ಧ ನೌಕರರ ದೂರು

 ಬೆಳಗಾವಿ ಮಹಾನಗರ ಪಾಲಿಕೆ ದೊಡ್ಡ ಗೊಂದಲದ ಗೂಡಾಗಿದ್ದು, ರಾಜ್ಯಮಟ್ಟದ ಏಜನ್ಸಿಗಳಿಂದ ಸಮಗ್ರ ತನಿಖೆ ನಡೆಸಿದರೆ ಸಾವಿರಾರು ಕೋಟಿ ರೂ. ಗಳ ಹಗರಣ ಬಯಲಾಗುವುದು ಖಚಿತ. ಪೌರ ಕಾರ್ಮಿಕರ ನೇಮಕಾತಿ, ನಿರ್ವಹಣೆ, ಕಸ ವಿಲೇವಾರಿ ಗುತ್ತಿಗೆ, ಪಾಲಿಕೆ ಮಳಿಗೆಗಳ ನಿರ್ವಹಣೆ, ಬಾಡಿಗೆ ಸೇರಿದಂತೆ ಹಲವಾರು ವಿಭಾಗಗಳಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ಕಳೆದ ಹಲವು ವರ್ಷಗಳಿಂದಲೇ ನಡೆಯುತ್ತಿರುವ ಬಗ್ಗೆ ಆರೋಪಗಳಿವೆ. ಸರಕಾರ ಈ ಬಗ್ಗೆ ಸಮಗ್ರ ತನಿಖೆಗೆ ಮುಂದಾಗಬೇಕಿದೆ. ಈ ವಿಷಯದಲ್ಲಿ ಶಾಸಕ ಅಭಯ ಪಾಟೀಲ ಅವರ ಜವಾಬ್ದಾರಿ ದೊಡ್ಡದಿದೆ. ಅವರೇ ಮುಂದಾಗಿ ಸಿಒಡಿಯಂತಹ ತನಿಖೆಗೆ ಕ್ರಮ ಕೈಗೊಳ್ಳಬೇಕಿದೆ

 

ಪ್ರಾದೇಶಿಕ ಆಯುಕ್ತರ ಮೇಲೆ ದೂರು ಸಲ್ಲಿಸಿದ ದೊಡ್ಡಗೌಡರ್

ಪ್ರಗತಿ ವಾಹಿನಿ ಸುದ್ದಿ ಬೆಳಗಾವಿ –  ಬೆಳಗಾವಿ ಮಹಾನಾಗರ ಪಾಲಿಕೆಯಲ್ಲಿ ನಡೆದಿರುವ ಅಧಿಕಾರಿಗಳು, ನೌಕರರ ಆಂತರಿಕ ಕಿತ್ತಾಟ ಜಗಜ್ಜಾಹೀರಾಗಿದೆ. ಪಾಲಿಕೆ ಆಯುಕ್ತರು ಮತ್ತು ಇತರ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದು ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕಂದಾಯ ವಿಭಾಗದ ಉಪ ಆಯುಕ್ತ ಎಸ್.ಬಿ.ದೊಡಗೌಡರ ಅವರು ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಅವರಿಗೆ ದೂರು ಸಲ್ಲಿಸಿದ್ದಾರೆ.

ದೊಡ್ಡಗೌಡರ್ ಅವರು ಆಯುಕ್ತ ರುದ್ರೇಶ ಘಾಳಿ ಸೇರಿದಂತೆ ಹಿರಿಯ ಅಕಾರಿಗಳ ವಿರುದ್ಧ ಫೆ.೨ರಂದು ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ೧೯೩೦ರಲ್ಲಿ ತಿಲಕವಾಡಿ ವ್ಯಾಪ್ತಿಯಲ್ಲಿ ಕೃಷಿಭೂಮಿಯನ್ನು ಪರಿವರ್ತಿಸಿ ೩೯೪ನಿವೇಶನಗಳನ್ನು ಮಾಡಲಾಗಿತ್ತು. ಇದರಲ್ಲಿ ಕೆಲವನ್ನು ಮಾರಾಟ ಮಾಡಿದ್ದರೆ ಕೆಲವನ್ನು ಲೀಸ್ ಮೇಲೆ ನೀಡಲಾಗಿತ್ತು. ಇನ್ನು ಕೆಲ ನಿವೇಶನಗಳನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಹಂಚಿಕೆ ಮಾಡಲು ಮೀಸಲಿಡಲಾಗಿತ್ತು. ಆದರೆ ಹೀಗೆ ಬಡವರಿಗಾಗಿ ಮೀಸಲಿಟ್ಟಿದ್ದ ನಿವೇಶನಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಪಾಲಿಕೆಯ ವ್ಯಾಪ್ತಿಯಲ್ಲಿ ದೀರ್ಘಾವಧಿಯಿಂದ ಬಾಕಿ ಉಳಿದಿರುವ ತೆರಿಗೆ ವಸೂಲಾತಿ ಆಗುತ್ತಿಲ್ಲ.ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಕೆಲ ಅಧಿಕಾರಿಗಳು ಪಾಲಿಕೆ ಸದಸ್ಯರ ಜೊತೆ ಶಾಮೀಲಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ.

ಮಹಾನಗರ ಪಾಲಿಕೆಗೆ ಐಎಎಸ್ ಅಧಿಕಾರಿ ಆಯುಕ್ತರಾಬೇಕಿತ್ತು. ಆದರೆ ಐಎಎಸ್ ಅಧಿಕಾರಿಗಳು ಆಯುಕ್ತರಾಗದ ಕಾರಣ ಮಾನವ ಸಂಪನ್ಮೂಲ ಹಾಗೂ ಸಮಯ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ.

ಪಾಲಿಕೆಯ ಪಿಡಬ್ಲ್ಯುಡಿ ವಿಭಾಗವು ಸರಕಾರಿ ಆಸ್ತಿ ಪಾಸ್ತಿಗಳ ಅತಿಕ್ರಮಣವಾಗಿರುವುದರ ಬಗ್ಗೆ ಲಕ್ಷ್ಯ ವಹಿಸುತ್ತಿಲ್ಲ. ಆರೋಗ್ಯ ವಿಭಾಗದವರು ವಾಣಿಜ್ಯ ಮಳಿಗೆಗೆ ಲೈಸೆನ್ಸ್ ನೀಡುವಲ್ಲಿ ಲೋಪ ಎಸಗುತ್ತಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಗೆ ಐಎಎಸ್ ಅಧಿಕಾರಿಗಳನ್ನು ಆಯುಕ್ತರನ್ನಾಗಿ ನೇಮಕ ಮಾಡಬೇಕು. ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ದೊಡ್ಡಗೌಡರ್ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

 

 ದೊಡ್ಡಗೌಡರ್ ವಿರುದ್ಧ ನೌಕರರ ದೂರು

ಬೆಳಗಾವಿ ಪಾಲಿಕೆ ಆಯುಕ್ತರು ಮತ್ತಿತರ ಅಧಿಕಾರಿಗಳ ವಿರುದ್ಧ ಕಂದಾಯ ಅಧಿಕಾರಿ ದೊಡ್ಡಗೌಡರ್ ಅವರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿರುವುದು ಬೆಳಕಿಗೆ ಬರುತ್ತಿದ್ದಂತೆ ದೊಡ್ಡಗೌಡರ್ ವಿರುದ್ಧವೂ ಪಾಲಿಕೆಯ ನೌಕರರು ಈ ಹಿಂದೆಯೇ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರಿಗೆ ದೂರು ನೀಡಿದ್ದು ಬೆಳಕಿಗೆ ಬಂದಿದೆ.

ಅಲ್ಲದೇ ನೌಕರರ ಸಂಘ, ಎಸ್ಸಿಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದವರು ದೊಡ್ಡಗೌಡರ್ ಅವರನ್ನು ವರ್ಗಾವಣೆ ಮಾಡುವಂತೆ ಗುರುವಾರ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರಿಗೆ ಮನವಿ ಮಾಡಿದ್ದಾರೆ.

ಜ.೧೧ರಂದು ಸಭೆ ನಡೆಸಿದ್ದ ಪಾಲಿಕೆಯ ನೌಕರರ ಕ್ಷೇಮಾಭಿವೃದ್ಧಿ ಸಂಘದವರು, ದೊಡ್ಡಗೌಡರ್ ಅವರು ಪಾಲಿಕೆಯ ನೌಕರರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ಸಮರ್ಪಕ ದಾಖಲೆಗಳು ಇಲ್ಲದ ಕೆಲಸಗಳನ್ನು ಮಾಡಿಕೊಡುವಂತೆ ಕೆಳ ಹಂತದ ನೌಕರರಿಗೆ ಒತ್ತಾಯಿಸುತ್ತಾರೆ. ರಜೆ ಇದ್ದ ಅವಧಿಯಲ್ಲಿಯೂ ಅನಗತ್ಯವಾಗಿ ನೌಕರರನ್ನು ಕಚೇರಿಗೆ ಕರೆಸುತ್ತಾರೆ. ಸಾರ್ವಜನಿಕರಿಂದ ಕೆಲ ಅರ್ಜಿಗಳನ್ನು ದೊಡ್ಡಗೌಡರ್ ಅವರು ನೇರವಾಗಿ ಪಡೆಯುತ್ತಾರೆ. ಪರಿಶೀಲನೆಗೆ ಪಡೆದುಕೊಂಡ ಕಡತಗಳನ್ನು ತಾವೇ ಪಡೆದು, ಬಳಿಕ ಅದು ತನ್ನ ಬಳಿ ಇಲ್ಲ ಎಂದು ಸುಳ್ಖು ಹೇಳುತ್ತಾರೆ ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರಿಗೆ ಲಿಖಿತ ದೂರು ಸಲ್ಲಿಸಿದ್ದರು.

ಇನ್ನು ದೊಡ್ಡಗೌಡರ್ ಅವರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿರುವುದು ಗೊತ್ತಾಗುತ್ತಿದ್ದಂತೆ ಪ್ರತಿಭಟನೆ ನಡೆಸಿದ ಪಾಲಿಕೆ ನೌಕರರು, ಬೆಳಗಾವಿ ಮಹಾನಗರ ಪಾಲಿಕೆ ಎಸ್ಸಿ ಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ದೊಡ್ಡಗೌಡರ್ ಅವರನ್ನು ವರ್ಗಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

 

ಬೆಳಗಾವಿ ಮಹಾನಗರ ಪಾಲಿಕೆಗೆ ನೂತನ ಆಯುಕ್ತರು

ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ತಂದು ಚೆಲ್ಲಿದ ಶಾಸಕ ಅಭಯ ಪಾಟೀಲ (ವಿಡೀಯೋ ಸಹಿತ ವರದಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button