ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ಖ್ಯಾತ ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ ಅವರ ಮಗಳು ಮತ್ತು ಖ್ಯಾತ ಸಾಹಿತಿ ದಿ. ಶಿವರಾಮ ಕಾರಂತ್ ಅವರ ಮೊಮ್ಮಗಳಾದ ಕೃತಿ ಕಾರಂತ್, ಪ್ರಶಸ್ತಿಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಅರಣ್ಯ ಇಲಾಖೆ ಗಂಭೀರ ಆರೋಪ ಮಾಡಿದೆ.
ಇತ್ತೀಚೆಗಷ್ಟೇ 1.5 ಕೋಟಿ ರೂಪಾಯಿ ಮೊತ್ತದ ಪ್ರತಿಷ್ಠಿತ ರೋಲೆಕ್ಸ್ ಪ್ರಶಸ್ತಿಗೆ ವನ್ಯಜೀವಿ ತಜ್ಞೆ ಕೃತಿ ಕಾರಂತ್ ಆಯ್ಕೆಯಾಗಿದ್ದಾರೆ. ಆದರೆ, ಅವರು ಪ್ರಶಸ್ತಿಗಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಆಧಾರ ರಹಿತ ಮತ್ತು ನಕಲಿ ದಾಖಲೆಗಳನ್ನು ನೀಡಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ದೂರಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಲ್ಲದೆ, ಪತ್ರಿಕಾ ಪ್ರಕಟಣೆಯನ್ನು ಕೂಡ ಹೊರಡಿಸಿದೆ.
ಬಂಡೀಪುರ, ನಾಗರಹೊಳೆ ಅರಣ್ಯದಂಚಿನಲ್ಲಿ ವಾಸಿಸುವ ಸಾವಿರಾರು ಜನರಿಗೆ ಕಾಡುಪ್ರಾಣಿ-ಮಾನವ ಸಂಘರ್ಷದಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಪರಿಹಾರ ಕೊಡಿಸಿದ್ದೇವೆ ಎಂದು ಕೃತಿ ಕಾರಂತ್ ಹೇಳಿಕೊಂಡಿದ್ದರು.
ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಟಿ. ಬಾಲಚಂದ್ರ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ವನ್ಯಜೀವಿಗಳ ದಾಳಿಗೆ ಬಲಿಯಾದವರು/ಬೆಳೆ ಹಾನಿಗೆ ತುತ್ತಾದವರಿಗೆ ಪರಿಹಾರ ಪಾವತಿ ಪ್ರಕ್ರಿಯೆಯಲ್ಲಿ ಯಾವುದೇ ಸಂಸ್ಥೆ, ವ್ಯಕ್ತಿ ಅಥವಾ ಎನ್‌ಜಿಓ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅರಣ್ಯ ಸೇವೆ ಮತ್ತು ಅರಣ್ಯ ಶಾಲೆ ಎಂಬ ಯೋಜನೆಗಳ ಮೂಲಕ ವನ್ಯ ಬದುಕಿನ ಬಗ್ಗೆ ಅರಿವು ಮೂಡಿಸುವ ಹಾಗೂ ಚಿಕ್ಕಮಕ್ಕಳಲ್ಲಿ ವನ್ಯಜೀವಿ, ಅರಣ್ಯದ ಬಗ್ಗೆ ಪ್ರೀತಿ ಬೆಳೆಸುವ ಕಾರ್ಯಕ್ಕಾಗಿ ಈ ಪ್ರಶಸ್ತಿ ದೊರೆತಿದೆ.
ಕೃತಿ ಕಾರಂತ್ ಅವರ ಕಾರ್ಯದ ಬಗ್ಗೆ ಅರಣ್ಯ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ. ಅವರು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆಯನ್ನೂ ನಡೆಸಿಲ್ಲ. ಪರಿಹಾರ ಒದಗಿಸುವ ಒಂದೇ ಒಂದು ಪ್ರಕರಣದಲ್ಲಿಯೂ ಅವರು ಅಧಿಕಾರಿಗಳನ್ನು ಸಂಪರ್ಕಿಸಿಲ್ಲ. ಹೀಗಾಗಿ ಪರಿಹಾರ ಕೊಡಿಸಿರುವ ಹೇಳಿಕೆಯೇ ಸುಳ್ಳಾಗಿದೆ ಎಂದು ಆರೋಪಿಸಿದೆ.
ರೋಲೆಕ್ಸ್ ಅನ್ನು ಪ್ರತಿನಿಧಿಸುವ ಕೆಲವು ಎನ್‌ಜಿಒಗಳು ಈ ದಾಖಲೆಗಳು ಸುಳ್ಳು ಎಂದು ಮಾಹಿತಿ ನೀಡಿದ್ದವು. ಅಲ್ಲದೆ, ಅರಣ್ಯ ಇಲಾಖೆ ಕೂಡ ರೋಲೆಕ್ಸ್‌ಗೆ ಟ್ವಿಟ್ಟರ್‌ನಲ್ಲಿ ಈ ಮಾಹಿತಿ ನೀಡಿತ್ತು. ಆದರೂ ರೋಲೆಕ್ಸ್ ವಾಸ್ತವಗಳನ್ನು ನಿರ್ಲಕ್ಷಿಸಿದೆ. ಸುಳ್ಳು ದಾಖಲೆಗಳನ್ನು ಒದಗಿಸಿದವರಿಗೆ ಪ್ರಶಸ್ತಿ ನೀಡಿದೆ ಎಂದು ಅರಣ್ಯ ಇಲಾಖೆ ಆರೋಪಿಸಿದೆ.
ಮಾನವ-ಪ್ರಾಣಿ ಸಂಘರ್ಷದಿಂದ ಜೀವ ಹಾನಿ ಮತ್ತು ಬೆಳೆ ಹಾನಿಯಾದ ಕುಟುಂಬಗಳಿಗೆ ಪರಿಹಾರ ಒದಗಿಸಲು 6,505 ಜನರ ಪರವಾಗಿ 13,702 ಅರ್ಜಿಗಳನ್ನು ವಿಲೇವಾರಿ ಮಾಡಿಸಿ ಅವರಿಗೆ ಪರಿಹಾರ ಕೊಡಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ದಾಖಲೆಗಳನ್ನು ರೋಲೆಕ್ಸ್ ಸಂಸ್ಥೆಗೂ ನೀಡಿದ್ದಾರೆ. ಆದರೆ, ಅರಣ್ಯ ಇಲಾಖೆಯ ಸಿಬ್ಬಂದಿ ಸ್ವತಃ ಇಲ್ಲಿನ ಜನರನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಪಡೆದು ಪರಿಹಾರವನ್ನು ಒದಗಿಸಿದೆ ಎಂದು ಹೇಳಿದೆ.
ಕಾಡು ಪ್ರಾಣಿಗಳು ದಾಳಿ ಮಾಡಿದರೆ ನಮ್ಮ ಸಿಬ್ಬಂದಿಯೇ ಅಲ್ಲಿಗೆ ಹೋಗುತ್ತಾರೆ. ಅವರ ಹೆಸರು-ಹಾನಿಯ ವಿವರಗಳನ್ನು ಬರೆದುಕೊಂಡು ಬರುತ್ತಾರೆ. ಜನರಿಗೆ ಪರಿಹಾರ ನೀಡಲು ನಮಗೆ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ. ನಾವು ಕೃತಿ ಕಾರಂತ್ ಯಾರೆಂದು ಅವರನ್ನು ನೋಡಿಯೇ ಇಲ್ಲ. ಬಂಡೀಪುರ, ನಾಗರಹೊಳೆಯಲ್ಲಿ ಯಾವ ಎನ್‌ಜಿಓ ಕೂಡ ಕೆಲಸ ಮಾಡಿಲ್ಲ ಅರಣ್ಯ ಇಲಾಖೆ ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ