*ಗಡಿಪಾರು ನಿಯಮ ಉಲ್ಲಂಘನೆ: ರೌಡಿಶೀಟರ್ ಬಂಧನ: ಹಿಂಡಲಗಾ ಜೈಲಿಗೆ ಶಿಪ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರೌಡಿಶೀಟರ್ ವಿನಾಯಕ @ ವಿಲ್ಲಕ ಶಂಕರ ಪ್ರಧಾನ, ಎಂಬಾತನನ್ನು ಬೆಳಗಾವಿ ಪೊಲೀಸರು ಗೂಂಡಾ ಕಾಯ್ದೆಯ ಅಡಿಯಲ್ಲಿ ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ಬೆಳಗಾವಿ ನಗರದ ಮಹಾದ್ವಾರ ರಸ್ತೆಯ ನಿವಾಸಿ, ರೌಡಿಶೀಟರ ಆಗಿರುವ ವಿನಾಯಕ @ ವಿಲ್ಲಕ ಶಂಕರ ಪ್ರಧಾನ ಮೇಲೆ ಕರ್ನಾಟಕ ಅಕ್ರಮ ಸರಾಯಿ ವ್ಯವಹಾರ, ಮಾದಕ ದ್ರವ್ಯ, ಜೂಜುಕೋರ, ಗೂಂಡಾ, ಅನೈತಿಕ ವ್ಯವಹಾರಗಳ ಅಪರಾಧ ಮತ್ತು ಕೊಳಚೆ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವ ತಡೆ ಅಧಿನಿಯಮ 1985 ರ ಕಲಂ 3 ಉಪಕಲಂ(2) ರ (ಗೂಂಡಾ ಕಾಯ್ದೆ) ಅಡಿಯಲ್ಲಿ ಕ್ರಮಕೈಕೊಳ್ಳಲಾಗಿದೆ.
ವಿನಾಯಕ @ ವಿಲ್ಲಕ ಶಂಕರ ಪ್ರಧಾನ 1999 ರಿಂದಲೂ ನಿರಂತರವಾಗಿ ತನ್ನ ಸಹಚರರೊಂದಿಗೆ ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಕುಖ್ಯಾತ ಆರೋಪಿ. ಬೆಳಗಾವಿ ನಗರದ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುತ್ತ ಬಂದಿದ. ಸಾಕಷ್ಟು ಸಲ ಕೊಲೆಗೆ ಪ್ರಯತ್ನ, ಹಣಕ್ಕಾಗಿ ಅಪಹರಣ, ದರೋಡೆ, ಹಲ್ಲೆ, ಅಕ್ರಮ ಗುಂಪುಗಾರಿಕೆ, ಮತೀಯ ಭಾವನೆಗಳ ಕೆರಳಿಸುವುದು, ಸುಲಿಗೆ, ಮಾರಕಾಸ್ತ್ರಗಳ ಬಳಕೆ ಮುಂತಾದ ಅಪರಾಧಗಳಲ್ಲಿ ತೊಡಗಿ ಬೆಳಗಾವಿ ನಗರದಲ್ಲಿ ಭಯ ಮತ್ತು ಅಶಾಂತಿಯ ವಾತಾವರಣ ನಿರ್ಮಿಸುತ್ತಿದ್ದ.
ಈತನ ವಿರುದ್ಧ ಕರ್ನಾಟಕ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಾಗೂ ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಒಟ್ಟು 21 ಅಪರಾಧ ಪ್ರಕರಣಗಳು ದಾಖಲಾಗಿವೆ. ಈತನ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಈತನ ಮೇಲೆ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ಹಾಗೂ ಎಮ್.ಓ.ಬಿ ಕಾರ್ಡ ತೆರೆದು ನಿರ್ವಹಿಸಿಕೊಂಡು ಬಂದರೂ ಸಹ ಈತನ ಕಾನೂನು ಬಾಹಿರ ಚಟುವಟಿಕೆಗಳು ಕಡಿಮೆಯಾಗಿಲ್ಲ.
ಆದ್ದರಿಂದ ಈತನನ್ನು ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡುವಂತಹ ಕಠಿಣ ಕ್ರಮ ಕೈಕೊಂಡರೂ ಸಹ ಗಡಿಪಾರು ಆದೇಶವನ್ನು ಉಲ್ಲಂಘಿಸಿ ಪುನಃ ಬೆಳಗಾವಿ ನಗರವನ್ನು ಕಾನೂನು ಬಾಹಿರವಾಗಿ ಪ್ರವೇಶಿಸಿ ತನ್ನ ಸಹಚರರೊಂದಿಗೆ ಕೂಡಿಕೊಂಡು ಒಬ್ಬ ವ್ಯಕ್ತಿಯನ್ನು ಹಣಕ್ಕಾಗಿ ಅಪಹರಣ ಮಾಡಿದ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ
ಈತನ ಮೇಲೆ ದಾಖಲಾಗಿರುವ ಪ್ರಕರಣಗಳಲ್ಲಿಯ 10 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿದ್ದು, ಈತನು ಪ್ರಕರಣದ ಸಾಕ್ಷಿದಾರರು ತನ್ನ ವಿರುದ್ಧ ನ್ಯಾಯಾಲಯಗಳಲ್ಲಿ ಸಾಕ್ಷಿ ನುಡಿಯದಂತೆ ಬೆದರಿಕೆ ಹಾಕುವ ಹಾಕುತ್ತಾನೆ.
ಈತನ ಕಾನೂನು ಬಾಹಿರ ಕೃತ್ಯಗಳನ್ನು ಸಾಮಾನ್ಯ ಕಾನೂನಿನ ಅಡಿಯಲ್ಲಿ ನಿಯಂತ್ರಿಸಲು ಸಾಧ್ಯವಿ ಇಲ್ಲ ಎಂಬುವದು ಆತನ ಮೇಲೆ ದಾಖಲಾದ ಪ್ರಕರಣಗಳ ಮೇಲಿಂದ ಕಂಡು ಬರುತ್ತದೆ.
ಆದ್ದರಿಂದ ಬೆಳಗಾವಿ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಬೆಳಗಾವಿ ನಗರದ ಸಾಮಾನ್ಯ ನಾಗರಿಕರ ಸುರಕ್ಷತೆಗಾಗಿ ರೌಡಿಶೀಟರ್ ವಿನಾಯಕ @ ವಿಲ್ಲಕ ಶಂಕರ ಪ್ರಧಾನನ್ನು ಗೂಂಡಾ ಕಾಯ್ದೆಯ ಅಡಿಯಲ್ಲಿ ಬಂಧಿಸಿ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.



