ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ತಲಾ 30 ಕೋಟಿ ಬೇಡಿಕೆ- ಶಾಸಕ ಬಿ.ಹರ್ಷವರ್ಧನ್
ಪ್ರಗತಿವಾಹಿನಿ ಸುದ್ದಿ, ನಂಜನಗೂಡು – ಯಡಿಯಾಲ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹಾಗೂ ಸಂಗಮದಲ್ಲಿ ತಡೆಗೋಡೆ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ತಲಾ 30 ಕೋಟಿ ರೂ. ಗಳನ್ನು ಪ್ರಸ್ತುತ ಬಜೆಟ್ ನಲ್ಲಿ ಮಂಜೂರು ಮಾಡುವಂತೆ ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಕೋರಿದ್ದಾರೆ.
ಈ ಕುರಿತು ಅವರು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಕಾಡಂಚಿನ ಪ್ರದೇಶದ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಮತ್ತು ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದ ಯಡಿಯಾಲ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಈ ಬಜೆಟ್ ನಲ್ಲಿ ಹಣ ಒದಗಿಸುವಂತೆ ವಿನಂತಿಸಿದ್ದಾಗಿ ತಿಳಿಸಿದ್ದಾರೆ.
ನಂಜನಗೂಡು ತಾಲೂಕಿನ 12 ಮತ್ತು ಎಚ್.ಡಿ.ಕೋಟೆಯ 3 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, ಇದರಿಂದ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಪ್ರಯೋಜನವಾಗಲಿದೆ. ಅಂದಾಜು 30 ಕೋಟಿ ರೂ. ಯೋಜನೆ ಇದಾಗಿದೆ. ನುಗು ನದಿಯಿಂದ ನೀರೆತ್ತುವ ಯೋಜನೆ ಇದಾಗಿದ್ದು, ಹಣ ಬಿಡುಗಡೆಯಾದರೆ ಕೇವಲ 9 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಈ ಯೋಜನೆ 2016 -17ರಲ್ಲಿ ವಿ.ಶ್ರೀನಿವಾಸ ಪ್ರಸಾದ ಅವರು ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲೇ ಮಂಜೂರಾಗಿದೆ. ಆದರೆ ಹಣದ ಕೊರತೆಯಿಂದಾಗಿ ಜಾರಿಯಾಗಿಲ್ಲ. ಈಗ ಹಣ ಬಿಡುಗಡೆ ಮಾಡುವ ಮೂಲಕ ಯೋಜನೆ ಸಾಕಾರಗೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಶಾಸಕರು ಕೋರಿದ್ದಾರೆ.
ಹಾಗೆಯೇ, ‘ಸಂಗಮ’ದಲ್ಲಿ ‘ಶ್ರೀ ಸದ್ಗುರು ಮಹದೇವ ತಾತಾರವರ ಗದ್ದುಗೆ’ ಹತ್ತಿರ ತಡೆಗೋಡೆ ನಿಮಾ೯ಣ ಹಾಗೂ ಪುನಶ್ಚೇತನ ಕಾಮಗಾರಿಗಾಗಿ ಅಂದಾಜು 30 ಕೋಟಿ ರೂ. ಅನುದಾನವನ್ನು 2022-23 ರ ಅಯವ್ಯಯಕ್ಕೆ ಸೇರಿಸಿ ಅನುದಾನ ಬಿಡುಗಡೆಗೊಳಿಸುವಂತೆ ಶಾಸಕರು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಪ್ರಸ್ತಾವನೆಯ ಪೂರ್ಣ ವಿವರ ಇಲ್ಲಿದೆ –
ನನ್ನ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನುಗು ನದಿಯು ಕೇರಳ ರಾಜ್ಯದ ಮಲಬಾರ್‌ನಲ್ಲಿ ಹುಟ್ಟಿ ಕರ್ನಾಟಕದ ಹೆಚ್.ಡಿ.ಕೋಟೆ ಹಾಗೂ ನಂಜನಗೂಡು ತಾಲ್ಲೂಕಿನಲ್ಲಿ ಉಗಮ ಸ್ಥಾನದಿಂದ ಒಟ್ಟು 130 ಕಿ.ಮೀನಷ್ಟು ಹರಿದು ನಂಜನಗೂಡು ತಾಲ್ಲೋಕಿನ ಸಂಗಮ ಕ್ಷೇತ್ರದ ಬಳಿ ಕಬಿನಿ ನದಿಗೆ ಸೇರುತ್ತದೆ.
ನುಗು ಜಲಾಶಯದ ಜಲಾನಯನ ಪ್ರದೇಶವು 984 ಚ.ಕಿ.ಮೀ ಇದ್ದು ಈ ಜಲಾಶಯದಡಿಯಲ್ಲಿ ನುಗು ಮೇಲ್ದಂಡೆ ನಾಲೆ ಇದ್ದು ಇದರ ಅಚ್ಚುಕಟ್ಟು 13,000 ಎಕರೆ ಪ್ರದೇಶವಿದೆ. ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿ ಒತ್ತುವರಿಯಾಗಿದ್ದು ಪ್ರವಾಹದ ಸಂದರ್ಭದಲ್ಲಿ ಹಾನಿಯ ಪ್ರಮಾಣ ಜಾಸ್ತಿಯಾಗುತ್ತಿದೆ.
ಕಳೆದ 30-40 ವರ್ಷಗಳಿಂದ ಬಾರದ ಮಳೆ ಬಂದ ಹಿನ್ನೆಲೆಯಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಲವು ಸೇತುವೆಗಳು ಶಿಥಿಲಗೊಂಡಿವೆ ಮತ್ತು ಸೇತುವೆಗಳನ್ನು ಮೇಲ್ದರ್ಜೆಗೇರಿಸಬೇಕಾಗಿದೆ. ನುಗು ನದಿಯು ಕಬಿನಿ ನದಿಗೆ ಸೇರುವ ಸಂಗಮದಲ್ಲಿ ಸದ್ಗುರು ಮಹದೇವ ತಾತಾರವರ ಗದ್ದುಗೆ ಇದ್ದು ಇದಕ್ಕೆ ಹಾನಿಯಾಗದಂತೆ ರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ.
ಈ ಹಿನ್ನೆಲೆಯಲ್ಲಿ ನುಗು ನದಿಯು ಸತತ 3 ವರ್ಷಗಳ ಭಾರಿ ಪ್ರವಾಹದಿಂದ ತನ್ನ ಮೂಲ ಆಕಾರವನ್ನು ಕಳೆದುಕೊಂಡಿರುವುದರಿಂದ ನುಗು ನದಿಯು ಕಬಿನಿ ನದಿಗೆ ಸೇರುವ ಸಂಗಮದಲ್ಲಿ ಸದ್ಗುರು ಮಹದೇವ ತಾತಾರವರ ಗದ್ದುಗೆ ಹತ್ತಿರ ತಡೆಗೋಡೆ ನಿರ್ಮಾಣ ಹಾಗೂ ಪುನಶ್ವೇತನ ಕಾಮಗಾರಿಗಾಗಿ 30 ಕೋಟಿ ರೂ.ಗಳನ್ನು 2022-23ರ ಅಯವ್ಯಯಕ್ಕೆ ಸೇರಿಸಿ ಅನುದಾನ ಬಿಡುಗಡೆ ಗೊಳಿಸಬೇಕು.
“ನುಗು ನದಿಯು ಕಬಿನಿ ನದಿಗೆ ಸೇರುವ ನನ್ನ ಮತಕ್ಷೇತ್ರ ‘ಸಂಗಮ’ದಲ್ಲಿ ‘ಶ್ರೀ ಸದ್ಗುರು ಮಹದೇವ ತಾತಾರವರ ಗದ್ದುಗೆ’ ಹತ್ತಿರ ತಡೆಗೋಡೆ ನಿಮಾ೯ಣ ಹಾಗೂ ಪುನಶ್ಚೇತನ ಕಾಮಗಾರಿಗಾಗಿ ಅಂದಾಜು 30 ಕೋಟಿ ರೂ. ಅನುದಾನವನ್ನು 2022-23 ರ ಅಯವ್ಯಯಕ್ಕೆ ಸೇರಿಸಿ ಅನುದಾನ ಬಿಡುಗಡೆಗೊಳಿಸುವಂತೆ ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖಾ ಸಚಿವರಾದ ಸನ್ಮಾನ್ಯ ‘ಶ್ರೀ ಗೋವಿಂದ ಕಾರಜೋಳ’ ಅವರಲ್ಲಿ ಮನವಿ ಮಾಡಿದ್ದೇನೆ. ಪರಿಶೀಲಿಸಿ ಕಡತದಲ್ಲಿ ಮಂಡಿಸಲು ಸೂಚಿಸಿದ್ದಾರೆ. ಹಾಗಾಗಿ ಸಚಿವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಶಾಸಕ ಬಿ. ಹರ್ಷವರ್ಧನ್ ತಿಳಿಸಿದ್ದಾರೆ.
ಫೆ.28 ರಂದು ಬೆಳಗಾವಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ – ಸಂಸದ ಅಣ್ಣಾ ಸಾಹೇಬ ಜೊಲ್ಲೆ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ