ನವ ಕರ್ನಾಟಕ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು ಎಸ್.ಎಂ ಕೃಷ್ಣ
ಪ್ರಗತಿವಾಹಿನಿ ಸುದ್ದಿ: “ಎಸ್.ಎಂ ಕೃಷ್ಣ ಅವರು ನನಗೆ ತಂದೆ ಸಮಾನರು. ನನ್ನ ಬದುಕಿನಲ್ಲಿ ಆಗಿರುವ ಬದಲಾವಣೆ ಅವರ ಮಾರ್ಗದರ್ಶನಕ್ಕೆ ಸಾಕ್ಷಿ. ನವ ಕರ್ನಾಟಕ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು ಎಸ್.ಎಂ ಕೃಷ್ಣ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಿವಾಸ ಹಾಗೂ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಮುಂದೆ ಶಿವಕುಮಾರ್ ಅವರು ಎಸ್.ಎಂ ಕೃಷ್ಣ ಅವರ ಕೊಡುಗೆ ನೆನೆದು ಮಂಗಳವಾರ ಭಾವುಕರಾದರು.
“ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದರು. ಎಸ್.ಎಂ ಕೃಷ್ಣ ಅವರು ವಿಕಾಸ ಸೌಧ ಕಟ್ಟಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ರೈಲು ನೀಡಿದರು. ಅವರ ಕಡೆಯ ಬಜೆಟ್ ಗಾತ್ರ 26 ಸಾವಿರ ಕೋಟಿ. ಆದರೆ ಇಂದು ನಮ್ಮ ರಾಜ್ಯದ ಬಜೆಟ್ ಗಾತ್ರ 3.83 ಲಕ್ಷ ಕೋಟಿ. ಆಮೂಲಕ ರಾಜ್ಯಕ್ಕೆ ಆರ್ಥಿಕ ಶಕ್ತಿ ತುಂಬಿದರು.
ರಾಜ್ಯ ವಿಕಾಸವಾಗಲಿ ಎಂದು ವಿಕಾಸಸೌಧ, ಎಲ್ಲರಿಗೂ ಉದ್ಯೋಗ ಸಿಗಲಿ ಎಂದು ಉದ್ಯೋಗ ಸೌಧ ಕಟ್ಟಿದರು. ರಾಜ್ಯದಲ್ಲಿ ಪಾನೀಯ ನಿಗಮ ಸ್ಥಾಪಿಸಿ ರಾಜ್ಯದ ಬೊಕ್ಕಸಕ್ಕೆ ಹಣ ಬರುವಂತೆ ಮಾಡಿದರು.
ಕಾವೇರಿ ನೀರಿಗಾಗಿ ಅಧಿಕಾರ ತ್ಯಜಿಸಲು ಮುಂದಾಗಿದ್ದರು. ರಾಜಕುಮಾರ್ ಅವರು ಅಪಹರಣವಾದಾಗ ಅವರನ್ನು ಕರೆತರಲು ಪರಿಶ್ರಮ ನಮಗೆ ಮಾತ್ರ ಗೊತ್ತು.
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಸ್ತ್ರೀಶಕ್ತಿ ಕಾರ್ಯಕ್ರಮ, ಯಶಸ್ವಿನಿ ಕಾರ್ಯಕ್ರಮ, ರೈತರ ಜಮೀನಿಗಾಗಿ ಭೂಮಿ ಆಪ್, ಬೆಂಗಳೂರನ್ನು ಐಟಿ ರಾಜಧಾನಿಯಾಗಿ ಮಾಡಿ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಮೀನುಗುವಂತೆ ಮಾಡಿದರು. ದಕ್ಷ ಆಡಳಿತಕ್ಕೆ ಅವರು ಮಾದರಿಯಾಗಿದ್ದರು. ಬೆಂಗಳೂರು ಅಭಿವೃದ್ಧಿ, ಇಲ್ಲಿನ ಉದ್ಯೋಗ ಸೃಷ್ಟಿ ಸೇರಿದಂತೆ ಅವರ ಸಾಧನೆಗೆ ನಿಮ್ಮ ಕಣ್ಣುಗಳೇ ಸಾಕ್ಷಿ.
ಅವರು ನನ್ನ ಸಂಬಂಧಿ, ನನ್ನ ರಾಜಕೀಯ ಮಾರ್ಗದರ್ಶಕರು ಎಂಬುದು ಬೇರೆ ವಿಚಾರ. ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ. ಅವರು ನಮಗೆಲ್ಲ ದೊಡ್ಡ ಪರಂಪರೆ ಬಿಟ್ಟುಹೋಗಿದ್ದು, ನಾವು ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಅವರಿಂದ ಸಾಕಷ್ಟು ವಿಚಾರ ಕಲಿತ ಹೆಮ್ಮೆ ನಮಗಿದೆ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ. ನನ್ನ ಅವರ ನಡುವಣ ಸಂಬಂಧದ ಬಗ್ಗೆ ಬೇರೆ ದಿನ ಮಾತನಾಡುತ್ತೇನೆ.
ಎಸ್.ಎಂ ಕೃಷ್ಣ ಅವರು ದೂರದೃಷ್ಟಿಯುಳ್ಳ ಶ್ರೇಷ್ಠ ವ್ಯಕ್ತಿ. ರಾಜ್ಯಕ್ಕೆ ಅವರ ಕೊಡುಗೆ, ಅವರ ಜತೆಗಿನ ಒಡನಾಟದ ಬಗ್ಗೆ ಹೇಳಲು ಗಂಟೆಗಟ್ಟಲೆ ಸಮಯಬೇಕು” ಎಂದು ತಿಳಿಸಿದರು.
ಹುಟ್ಟೂರಿನಲ್ಲಿ ಬುಧವಾರ ಅಂತಿಮ ಸಂಸ್ಕಾರ, 3 ದಿನ ಶೋಕಾಚಾರಣೆ
“ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಪಾರ್ಥಿವ ಶರೀರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಬುಧವಾರ ಸಂಜೆ 4 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು.
“ಬುಧವಾರ (ನಾಳೆ) ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ರಾಜ್ಯಾದ್ಯಂತ ಮೂರು ದಿನ ಶೋಕಾಚಾರಣೆ ಮಾಡಲಾಗುವುದು. ಬುಧವಾರ ಬೆಳಗ್ಗೆ 8 ಗಂಟೆವರೆಗೂ ಎಸ್.ಎಂ. ಕೃಷ್ಣ ಅವರ ಸದಾಶಿವನಗರ ನಿವಾಸದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಂತರ ಅವರ ಪಾರ್ಥಿವ ಶರೀರವನ್ನು ಮದ್ದೂರಿನ ಸೋಮನಹಳ್ಳಿಗೆ ಕೊಂಡೊಯ್ಯಲಾಗುವುದು. ಅಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 3.00ಗಂಟೆವರೆಗೂ ಮಂಡ್ಯ, ಮೈಸೂರು ಭಾಗದ ಜನರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.
ಇಂದು ಸಂಜೆ 5 ಗಂಟೆಗೆ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸಂತಾಪ ಸೂಚಕ ಸಭೆ ಏರ್ಪಡಿಸಲಾಗಿದೆ. ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಹಾಗೂ ಶಾಸಕಾಂಗ ಸಭೆಯನ್ನು ಮುಂದೂಡಲಾಗಿದೆ. ನಾನು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯ ಸ್ವಾಮಿ ಅವರು ಅಂತಿಮ ದರ್ಶನ ಹಾಗೂ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲು ಮದ್ದೂರಿಗೆ ತೆರಳುತ್ತಿದ್ದೇವೆ” ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ