*ಎಸ್. ನಿಜಲಿಂಗಪ್ಪರ ನಿವಾಸ ವಸ್ತು ಸಂಗ್ರಹಾಲಯವಾಗಿಸಲು ಕ್ರಮ: ಸಚಿವ ಶಿವರಾಜ್ ತಂಗಡಗಿ*

ಪ್ರಗತಿವಾಹಿನಿ ಸುದ್ದಿ: ಮಾಜಿ ಮುಖ್ಯಮಂತ್ರಿ ದಿ. ಎಸ್.ನಿಜಲಿಂಗಪ್ಪನವರ ಚಿತ್ರದುರ್ಗ ನಗರದಲ್ಲಿನ ಮನೆಯನ್ನು ನವೀಕರಣಗೊಳಿಸಿ, ವಸ್ತು ಸಂಗ್ರಹಾಲಯವನ್ನಾಗಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದರು.
ಮಂಗಳವಾರ ನಗರದ ಎಸ್. ನಿಜಲಿಂಗಪ್ಪನವರ ನಿವಾಸ, ಸ್ಮಾರಕ ಹಾಗೂ ತಾಲ್ಲೂಕಿನ ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಗೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಿವಾಸ ಖರೀದಿಗೆ ಸರ್ಕಾರ ರೂ.5 ಕೋಟಿ ಅನುದಾನ ನೀಡಿತ್ತು. ಇದರಲ್ಲಿ ಇಲಾಖೆಯಿಂದ ರೂ.4.18 ಕೋಟಿಗೆ ನಿವಾಸವನ್ನು ಖರೀದಿಸಲಾಗಿದ್ದು, ಉಳಿದ 82 ಲಕ್ಷ ಅನುದಾನದಲ್ಲಿ ಮನೆಯನ್ನ ನವೀಕರಣ ಗೊಳಿಸಲಾಗುವುದು ಎಂದರು.
ರಾಷ್ಟ್ರ ಮತ್ತು ರಾಜ್ಯ ನಾಯಕರಾಗಿ, ಮುಖ್ಯಮಂತ್ರಿಗಳಾಗಿ ಎಸ್. ನಿಜಲಿಂಗಪ್ಪನವರ ಕೊಡುಗೆ ಅಪಾರವಾದದ್ದು. ಮಹಾತ್ಮರಾದ ಎಸ್. ನಿಜಲಿಂಗಪ್ಪನವರು ಹುಟ್ಟಿ ಬೆಳೆದು, ಬದುಕಿ ಬಾಳಿದ ನಿವಾಸಕ್ಕೆ ಬೆಲೆ ಕಟ್ಟಲಾಗದು. ಅವರ ನಿವಾಸ ದೇವರ ಗುಡಿಗೆ ಸಮಾನವಾದದ್ದು. ಹಿರಿಯ ಮುಖಂಡರಾದ ಹನುಮಂತಪ್ಪ ಹಾಗೂ ಎಸ್.ನಿಜಲಿಂಗಪ್ಪನವರ ಮಗ ಕಿರಣ್ ಶಂಕರ್ ಟ್ರಸ್ಟ್ ಸ್ಥಾಪಿಸಿ, ಉತ್ತಮ ರೀತಿಯಲ್ಲಿ ಸ್ಮಾರಕವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ನಿವಾಸವನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡುವ ದೃಷ್ಟಿಯಿಂದ ಈಗಾಗಲೇ ಎರಡು ಬಾರಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಜಿಲ್ಲಾಧಿಕಾರಿಗಳು ಕೂಡ ಉತ್ಸುಕತೆಯಿಂದ ಈ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೂ ಕೂಡ ಈ ಕುರಿತಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಎಸ್. ನಿಜಲಿಂಗಪ್ಪ ನವರ ನಿವಾಸದ ಮೂಲ ವಿನ್ಯಾಸಕ್ಕೆ, ಗೋಡೆಗಳಿಗೆ ಯಾವುದೇ ಧಕ್ಕೆಯಾಗದಂತೆ ನವೀಕರಣ ಮಾಡಿ, ನಿಜಲಿಂಗಪ್ಪನವರ ಪುತ್ರ ಕಿರಣ್ ಶಂಕರ್ ಒಳಗೊಂಡಂತೆ ಸಮಿತಿ ರಚಿಸಿ, ಯೋಜನೆ ರೂಪಿಸಿ, ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾಗುವುದು. ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಪ್ರಸ್ತುತ ರೂ.86 ಲಕ್ಷ ಅನುದಾನ ಲಭ್ಯವಿದ್ದು, ಅಗತ್ಯಬಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಒದಗಿಸಲಾಗುವುದು ಎಂದು ಹೇಳಿದರು.
ಕೋಟೆನಾಡು ಚಿತ್ರದುರ್ಗಕ್ಕೆ ಭೇಟಿ ನೀಡುವವರು ಎಸ್. ನಿಜಲಿಂಗಪ್ಪ ಅವರ ವಸ್ತು ಸಂಗ್ರಹಾಲಯಕ್ಕೂ ಭೇಟಿ ನೀಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ನಾಮಕರಣದ 50ನೇ ವರ್ಷಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಗಿದೆ. ಇದರ ಅಂಗವಾಗಿ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ನಾಡದೇವತೆ ಭುವನೇಶ್ವರಿ ದೇವಿಯ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಇಂತಹ ಐತಿಹಾಸಿಕ ಕಾರ್ಯವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ನೆರವೇರಿಸಿರುವುದು ನನ್ನ ಸೌಭಾಗ್ಯವಾಗಿದೆ. ಇದೇ ಮಾದರಿಯಲ್ಲಿ ಎಸ್.ನಿಜಲಿಂಗಪ್ಪನವರ ನಿವಾಸವನ್ನು ವಸ್ತು ಸಂಗ್ರಹಾಯಲಯವನ್ನಾಗಿ ಮಾಡುತ್ತಿರುವ ಕಾರ್ಯದ ಸಮಯದಲ್ಲೂ ನಾನು ಮಂತ್ರಿಯಾಗಿರುವುದು ಹೆಮ್ಮೆ ಎನಿಸುತ್ತಿದೆ ಎಂದು ಸಚಿವ ಶಿವರಾಜ ಎಸ್ ತಂಗಡಗಿ ಹೇಳಿದರು.
ದುರ್ಗೋತ್ಸವಕ್ಕೆ ಪ್ರಸ್ತಾವ ಸಲ್ಲಿಸಲು ಸೂಚನೆ: ಕನ್ನಡ ಪರ ಸಂಘಟನೆಗಳು ದುರ್ಗೋತ್ಸವ ಆಚರಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಬಾರಿ ನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ಅಣೆಕಟ್ಟುಗಳು ತುಂಬಿ ತುಳುಕುತ್ತಿವೆ. ರೈತರು ಸಂತಸದಿಂದಿದ್ದಾರೆ. ಇಂತಹ ಸಂದರ್ಭದಲ್ಲಿ ಉತ್ಸವಗಳ ಆಚರಣೆ ಮಾಡುವುದು ತಪ್ಪಲ್ಲ. ಈ ಹಿಂದೆ ಎರಡು ಬಾರಿ ಐತಿಹಾಸಿಕ ಹಿನ್ನಲೆಯ ಚಿತ್ರದುರ್ಗದಲ್ಲಿ ದುರ್ಗೋತ್ಸವ ಆಯೋಜಿಸಲಾಗಿತ್ತು ಎಂದು ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಗೂ ಹೋರಾಟಗಾರರು ಗಮನಕ್ಕೆ ತಂದಿದ್ದಾರೆ. ದುರ್ಗೋತ್ಸವ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಪ್ರಸ್ತಾವ ಸಲ್ಲಿಸಿದರೆ ನಿಶ್ವಿತವಾಗಿ ದುರ್ಗೋತ್ಸವ ಆಚರಣೆ ಮಾಡಲಾಗುವುದು. ಮುಖ್ಯಮಂತ್ರಿಗಳು ಸಹ ದುರ್ಗೋತ್ಸವಕ್ಕೆ ಆಚರಣೆಗೆ ಅವಕಾಶ ಹಾಗೂ ಸಹಕಾರ ನೀಡುತ್ತಾರೆ ಎಂಬ ಭರವಸೆ ಇದೆ. ಹೀಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಸಚಿವರು ಹೇಳಿದರು.
ಸರ್ಕಾರ ಮಠಗಳಿಗೆ ನೀಡುವ ಅನುದಾನವನ್ನು ಕಡಿತಗೊಳಿಸಿಲ್ಲ. ನಿಯಮಾನುಸಾರ ಸರ್ಕಾರ ಶೇ.25 ಹಣವನ್ನು ಮೀಸಲಿರಿಸಿ ಅನುದಾನ ಘೋಷಿಸಿಬೇಕು. ಸರ್ಕಾರ ಹಣಕಾಸಿನ ಶಿಸ್ತು ಪಾಲನೆ ಮಾಡುತ್ತಿದೆ. ಇದೇ ರೀತಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ನಿಗಮ ಮಂಡಳಿಗಳನ್ನು ಸ್ಥಾಪಿಸಲು ರೂ.5 ಕೋಟಿ ಮೂಲಧನ ಇರಿಸಬೇಕು. ಇತ್ತೀಚೆಗೆ ಕಾಡುಗೊಲ್ಲ ಅಭಿವೃದ್ದಿ ನಿಗಮವನ್ನು ರೂ.5 ಕೋಟಿ ನೀಡಿ, ಕಂಪನಿ ನೊಂದಣಿ ಕಾಯ್ದೆಯಡಿ ದೆಹಲಿಯಲ್ಲಿ ನೊಂದಣಿ ಮಾಡಿಸಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಇದಕ್ಕೂ ಮುನ್ನ ಎಸ್. ನಿಜಲಿಂಗಪ್ಪ ನವರ ಸ್ಮಾರಕದ ಆವರಣದಲ್ಲಿರುವ ಕೊಠಡಿಗಳಲ್ಲಿ ಅಳವಡಿಸಿರುವ ನಿಜಲಿಂಗಪ್ಪನವರ ಕುರಿತಾದ ಫೋಟೋ ಗ್ಯಾಲರಿ ಹಾಗೂ ಗ್ರಂಥಾಲಯವನ್ನು ಸಚಿವರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ನ ಗೌರವಾಧ್ಯಕ್ಷ ಹೆಚ್.ಹನುಮಂತಪ್ಪ, ಗೌರವ ಕಾರ್ಯದರ್ಶಿ ಕಿರಣ್ ಶಂಕರ್, ಟ್ರಸ್ಟಿಗಳಾದ ಮೋಹನ್ ಕುಮಾರ್ ಕೊಂಡಜ್ಜಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯತ್ರಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್ , ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಛಲವಾದಿ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.