*ವಿರೋಧದ ನಡುವೆಯೂ ಅದ್ಧೂರಿಯಾಗಿ ಅನಾವರಣವಾದ ಸಂಭಾಜಿ ಮಹಾರಾಜರ ಪ್ರತಿಮೆ*



ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಅನಗೋಳದ ಛತ್ರಪತಿ ಸಂಭಾಜಿ ಮಾಹಾರಾಜರ ಪ್ರತಿಮೆ ಅನಾವರಣಕ್ಕೆ ಅನುಮತಿ ದೊರಕದಿದ್ದರೂ ಜಿಲ್ಲಾಡಳಿತದ ವಿರೋಧದ ನಡುವೆಯೇ ಭಾನುವಾರ ರಾತ್ರಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಮೂರ್ತಿ ಅನಾವರಣ ಮಾಡಲಾಯಿತು.
ಕಳೆದ ಐದಾರು ದಿನದಿಂದ ಬೆಳಗಾವಿಯ ಅನಗೋಳದ ಡಿವಿಎಸ್ ಚೌಕ್ ದಲ್ಲಿನ 21 ಅಡಿ ಎತ್ತರದ ಸಂಭಾಜಿ ಮಹಾರಾಜರ್ ಪ್ರತಿಮೆ ಅನಾವರಣ ಮಾಡಲು ಬಿಜೆಪಿ ಶಾಸಕ ಅಭಯ ಪಾಟೀಲ ಹಾಗೂ ಪಾಲಿಕೆ ಸದಸ್ಯರು ತಯಾರಿ ನಡೆಸಿದ್ದರು. ಜಿಲ್ಲಾಧಿಕಾರಿಗಳು ಶನಿವಾರ ಸಭೆ ನಡೆಸಿ ಪುತ್ಥಳಿ ಅನಾವರಣ ಮುಂದೂಡುವ ಪ್ರಯತ್ನ ಮಾಡಿದ್ದರು.

ಹೀಗಾಗಿ ಎರಡು ಗುಂಪುಗಳ ನಡುವೆ ಜಟಾಪಟಿ ಮುಂದುವರಿದಿದ್ದರಿಂದ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಜಿಲ್ಲಾಡಳಿತದ ವಿರೋಧದ ನಡುವೆಯೂ ಮೂರ್ತಿ ಅನಾವರಣ ಮಾಡುವುದಾಗಿ ಶಾಸಕ ಅಭಯ ಪಾಟೀಲ್ ಘೋಷಣೆ ಮಾಡಿ, ಅನಗೋಳ ನಾಕಾದಿಂದ ಭವ್ಯ ಶೋಭಾಯಾತ್ರೆ ನಡೆಸುವ ಮೂಲಕ ಪುತ್ಥಳಿ ಅನಾವರಣ ಮಾಡಿದರು.

ಶೋಭಾ ಯಾತ್ರೆಯುದ್ದಕ್ಕೂ ಘೋಷಣೆಗಳು ಮೊಳಗಿದವು. ಕೇಸರಿ ಸೀರೆಯಲ್ಲಿದ್ದ ಮಹಿಳೆಯರು ಪೂರ್ಣ ಕುಂಭದೊಂದಿಗೆ ಸಾಗಿದರು. ಡೋಲ್ ತಾಶಾಗಳ ಅಬ್ಬರ ಜೋರಾಗಿತ್ತು. ಎತ್ತ ನೋಡಿದರೂ ಜನಸಾಗರವೇ ಕಾಣುತ್ತಿತ್ತು. ಪಟಾಕಿ, ಸಿಡಿಮದ್ದುಗಳು ಮೆರವಣಿಗೆಗೆ ಮೆರುಗು ತಂದವು.
ಛತ್ರಪತಿ ಸಂಭಾಜಿ ಮಹಾರಾಜರ ಪುತ್ಥಳಿಗೆ ಕ್ಷೀರಾಭಿಷೇಕ ಮಾಡಿ ಶಿವಾಜಿ ಮಹಾರಾಜರ 13ನೇ ವಂಶಸ್ಥ ಶಿವೇಂದ್ರರಾಜೇ ಭೋಸ್ಲೆ ಅವರು ಪುತ್ಥಳಿ ಅನಾವರಣ ನೆರವೇರಿಸಿದರು. ಈ ವೇಳೆ ಶಿವಾಜಿ ಮಹಾರಾಜ್ ಕೀ ಜೈ, ಸಂಭಾಜಿ ಮಹಾರಾಜ್ ಕೀ ಜೈ ಎಂಬ ಘೋಷಣೆಗಳನ್ನು ಹಾಕಿ ನೆರೆದಿದ್ದ ಸಹಸ್ರಾರು ಜನರು ಸಂಭ್ರಮಿಸಿದರು.
ಶಿವಭಕ್ತರ ಶಕ್ತಿಯಿಂದ ಭಗವಾ ಧ್ವಜ ಹಾರಾಡಿದೆ
ಬಳಿಕ ಮಾತನಾಡಿದ ಶಾಸಕ ಅಭಯ ಪಾಟೀಲ್ ಅವರು, ಛತ್ರಿಪತಿ ಸಂಭಾಜಿ ಮಹಾರಾಜರ ಪುತ್ಥಳಿ ಅನಾವರಣಕ್ಕೆ ನಾನಾ ರೀತಿಯಲ್ಲಿ ಅಡೆತಡೆಯನ್ನುಂಟು ಮಾಡಿದರೂ ಕೂಡ, ಶಿವಭಕ್ತರ ಶಕ್ತಿಯಿಂದ ಇಂದು ಇಲ್ಲಿ ಭಗವಾ ಧ್ವಜ ಹಾರಾಡಿದೆ. ನಿನ್ನೆ ಜಿಲ್ಲಾಧಿಕಾರಿಗಳು ಇದೇ ಸ್ಥಳದಲ್ಲಿ ಬಂದು ಹೇಳಿಕೆ ನೀಡಿ ರವಿವಾರ ಸಂಜೆ ಯಾರೂ ಇಲ್ಲಿ ಬರಬೇಡಿ, ಎಲ್ಲರೂ ಮನೆಯಲ್ಲಿ ಇರುವಂತೆ ಹೇಳಿದ್ದರು. ಅದರಂತೆ ರವಿವಾರ ಮಧ್ಯಾಹ್ನದವರೆಗೂ ಬಹಳಷ್ಟು ಅಡೆತಡೆಗಳನ್ನುಂಟು ಮಾಡಲಾಯಿತು. ಆದರೂ ನಿಮ್ಮೆಲ್ಲರ ಶಕ್ತಿ ಮುಂದೆ ಯಾವ ಆಟವೂ ನಡೆಯಲಿಲ್ಲ. ಪೊಲೀಸರಿಗೂ ನಮ್ಮ ಮೇಲೆ ಹೆಚ್ಚಿಗೆ ಪ್ರೀತಿಯಿದೆ. ಹೀಗಾಗಿ, ಅವರೂ ಕೂಡ ಹಗಲಿರುಳು ಇಲ್ಲಿ ಭದ್ರತೆ ಒದಗಿಸಿದರು. ಇಷ್ಟೊಂದು ಅದ್ಧೂರಿ ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಶಿವಭಕ್ತರಿಗೆ, ಮಹಿಳೆಯರಿಗೆ ವಿಶೇಷವಾದ ಧನ್ಯವಾದ. ಅಲ್ಲದೇ, ಎರಡು ಸಾವಿರಕ್ಕೂ ಅಧಿಕ ಕುಂಭ ಹೊತ್ತ ಮಹಿಳೆಯರು ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ನಿಂತು ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗಿದ್ದು ಅವರಿಗೂ ಅನಂತ ಧನ್ಯವಾದಗಳು ಎಂದು ಅಭಯ ಪಾಟೀಲ ಹೇಳಿದರು.
ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆಯಾಗಿದ್ದು ಸಂತಸ ತಂದಿದೆ
ಬಳಿಕ ಮಾತನಾಡಿದ ಶಿವಾಜಿ ಮಹಾರಾಜರ 13ನೇ ವಂಶಸ್ಥ ಶಿವೇಂದ್ರರಾಜೇ ಭೋಸ್ಲೆ ಅವರು, ನಗರದ ಪ್ರಮುಖ ವೃತ್ತದಲ್ಲಿ ಸಂಭಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆಯಾಗಿದ್ದು ಸಂತಸ ತಂದಿದೆ. ಶಾಸಕ ಅಭಯ ಪಾಟೀಲ ಅವರೇ ಇಂಥದ್ದೊಂದು ದೊಡ್ಡ ಕೆಲಸಕ್ಕೆ ಕಾರಣ. ನಾನು ಈ ಕಾರ್ಯಕ್ರಮಕ್ಕೆ ಬರಬಾರದು ಎಂಬುದು ಕೆಲವರ ಉದ್ದೇಶವಾಗಿತ್ತು. ಇದಕ್ಕಾಗಿ ತಡೆಯುವ ಯತ್ನ ಮಾಡಿದರು. ಆದರೆ, ನಿಮ್ಮ ಮತ್ತು ಅಭಯ ಪಾಟೀಲ ಅವರ ಮೇಲಿನ ಪ್ರೀತಿಗಾಗಿ ಬಂದಿದ್ದೇನೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ. ಮುಂದಿನ ದಿನಗಳಲ್ಲಿ ನೀವೂ ಸಹ ಅವರ ಬೆನ್ನಿಗೆ ನಿಲ್ಲಬೇಕು. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲೂ ಬೇರೆ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎಂದು ಶಿವಾಜಿ ಮಹಾರಾಜರ 13ನೇ ವಂಶಸ್ಥ ಶಿವೇಂದ್ರರಾಜೇ ಭೋಸ್ಲೆ ಶ್ಲಾಘಿಸಿದರು.
ಮಹಾಪೌರ ಸವಿತಾ ಕಾಂಬಳೆ, ಉಪಮಹಾಪೌರ ಆನಂದ ಚಹ್ವಾಣ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ