*ಬೆಳಗಾವಿಯಲ್ಲಿ ಕಾಂಗ್ರೆಸ್ ಗೆದ್ದರೆ ರಾಜ್ಯ ಸರ್ಕಾರಕ್ಕೆ ಬಲ: ಸಚಿವ ಸತೀಶ್ ಜಾರಕಿಹೊಳಿ*
ಅರಭಾವಿ ಭಾಗದಲ್ಲಿ ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು ಶೀಘ್ರವೇ ಮುಕ್ತಾಯಗೊಳಿಸಲಾಗುವುದು
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಹಾಗೂ ಚಿಕ್ಕೋಡಿ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬಲ ತುಂಬಿದಂತಾಗುತ್ತದೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಅರಭಾವಿ ವಿಧಾನಸಭಾ ಕ್ಷೇತ್ರದ ದುರದುಂಡಿ, ರಾಜಾಪೂರ, ಶಿವಾಪೂರ, ಖಾನಟ್ಟಿ ಹಾಗೂ ಮುನ್ಯಾಳ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗೂಡಿ ಮತಯಾಚಿಸಿದ ಸಚಿವರು, ಕಾಂಗ್ರೆಸ್ ಪಕ್ಷದಿಂದ ಮಾತ್ರ ಬಡವರ ಏಳಿಗೆ ಎಂದು ಹೇಳಿದರು
ಗೃಹಲಕ್ಷ್ಮಿ, ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರಿಗೆ ಸಿದ್ದರಾಮಯ್ಯ ಸಹಾಯ ಹಸ್ತ ಚಾಚಿದ್ದಾರೆ. ಮತಗಳ ಮೂಲಕ ಸರ್ಕಾರವನ್ನು ಬೆಂಬಲಿಸಬೇಕು. ಸರ್ಕಾರ ಎಲ್ಲರ ಪರವಾಗಿ ಕೆಲಸ ಮಾಡುತ್ತಿದ್ದು, ಕಾರ್ಮಿಕರಿಗೆ, ರೈತರಿಗೆ, ದಲಿತರಿಗೆ ಉತ್ತಮ ಅನುಕೂಲ ಮಾಡಿಕೊಟ್ಟಿದೆ ಎಂದು ಸಚಿವರು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಯುವಕರಿದ್ದು ಅವರಿಗೊಂದು ಅವಕಾಶ ಮಾಡಿಕೊಡಿ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷ ಕಾಂಗ್ರೆಸ್ ಪಕ್ಷದ ಹುರಿಯಾಳುಗಳಾದ ಚಿಕ್ಕೋಡಿಯಲ್ಲಿ ಪ್ರಿಯಾಂಕಾ, ಬೆಳಗಾವಿಯಲ್ಲಿ ಮೃಣಾಲ್ ಅವರನ್ನು ಗೆಲ್ಲಿಸಿ. ಯುವಕರನ್ನು ಗೆಲ್ಲಿಸುವ ಮೂಲಕ ಇತಿಹಾಸ ನಿರ್ಮಿಸುವ ಅವಕಾಶವಿದೆ. ಅರಭಾವಿ ಭಾಗದಲ್ಲಿ ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು ಶೀಘ್ರವೇ ಮುಕ್ತಾಯಗೊಳಿಸುವುದಾಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ಬಿಜೆಪಿಗೆ ತಕ್ಕ ಪಾಠ ಕಲಿಸಿ
ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಬೇಕು. ಕಳೆದ 10 ವರ್ಷಗಳಿಂದ ಸುಳ್ಳುಗಳನ್ನೆ ಬಂಡವಾಳ ಮಾಡಿಕೊಂಡಿರುವ ಬಿಜೆಪಿಗೆ ಈ ಸೋಲು ಗ್ಯಾರಂಟಿ ಎಂದು ಹೇಳಿದರು.
ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿವೆ. ಲೋಕಸಭೆ ಚುನಾವಣೆ ಮುಗಿದ ಮೇಲೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಈ ಯೋಜನೆಗಳು ನಿರಂತರವಾಗಿ ಸಾಗಲಿವೆ. ಯೋಜನೆಗಳ ವಿರುದ್ಧ ಬಿಜೆಪಿಗರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು.
ನಿಮ್ಮೆಲ್ಲರ ಸೇವೆ ಮಾಡಲು ಮೃಣಾಲ್ ಬಂದಿದ್ದಾನೆ. ಮನೆ ಬಾಗಿಲಿಗೆ ಬಂದು ಸೇವೆ ಮಾಡುತ್ತಾನೆ, ಮೃಣಾಲ್ ಹೆಬ್ಬಾಳ್ಕರ್ ಅವ್ರಿಗೆ ನಿಮ್ಮ ಮತ ನೀಡಿ, ಜನ ಸೇವೆಗೆ ಅವಕಾಶ ಮಾಡಿಕೊಡಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಈ ವೇಳೆ ಮುಖಂಡರಾದ ಅರವಿಂದ್ ದಳವಾಯಿ, ಸೊನವಾಲಕರ, ಭೀಮಪ್ಪ ಹಂದಿಗುಂದ್, ಸುರೇಶ್ ಮಗದುಮ್ಮ, ರಮೇಶ್ ಉಟಗಿ, ಅಶೋಕ್ ದಳವಾಯಿ, ಪ್ರಕಾಶ್ ಅರಳಿ, ಭರಮಣ್ಣ ಉಪ್ಪಾರ್, ಕಲ್ಲಪ್ಪ ಗೌಡ ಲಕ್ಕಾರ, ಲಕ್ಕಣ್ಣ ಸವಸುದ್ದಿ, ಬಸವರಾಜ ಬೆಳಕೋಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ