*ಅಧಿಕಾರಕ್ಕೇರಿ 9 ತಿಂಗಳಲ್ಲೇ ಅನೇಕ ಯೋಜನೆಗಳು ಅನುಷ್ಠಾನ: ಸಚಿವ ಸತೀಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ: ಅಧಿಕಾರಕ್ಕೆ ಬಂದು ಒಂಬತ್ತು ತಿಂಗಳಲ್ಲೇ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಮುಂದೆಯೂ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ನಗರದ ಸೆಂಟ್ರಲ್ ಮೆಥೋಡಿಸ್ಟ್ ಚರ್ಚ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರದ ಕಾರ್ಯಕರ್ತರ ಔತಣಕೂಟ, ಲೋಕಸಭೆ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳ ಬಗ್ಗೆ ಮನೆ, ಮನೆಗಳಿಗೆ ತೆರಳಿ ಕಾರ್ಯಕರ್ಯರು ಪ್ರಚಾರ ಮಾಡಬೇಕೆಂದು ತಿಳಿಸಿದರು.
ಲೋಕಸಭೆ ಚುನಾವಣೆ ಕೆಲವೇ ದಿನಗಳಲ್ಲಿ ಘೋಷಣೆಯಾಗಬಹುದು, ಆದ್ದರಿಂದ ಇಂದಿನಿಂದಲೇ ಚುನಾವಣೆಗಾಗಿ ತಯಾರಿ ನಡೆಸಬೇಕು. ಮುಂದಿನ ದಿನಗಳಲ್ಲಿ ಇನ್ನೆರೆಡು ಸಭೆ ನಡೆಸಲಾಗುವುದು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇನ್ನು ನಾಲ್ಕು ವರ್ಷ ಸಮಯವಿದೆ. ಕಾರ್ಯಕರ್ತರು ಕೈ ಜೋಡಿಸಿದರೆ ಇನ್ನಷ್ಟು ಮಾದರಿ ಯೋಜನೆಗಳನ್ನು ಬೆಳಗಾವಿ ಜಿಲ್ಲೆಗೆ ತರುತ್ತೇನೆಂದು ಭರವಸೆ ನೀಡಿದರು.
ರಾಜ್ಯದಲ್ಲಿ ಕಾರ್ಯಕರ್ತರ ಸಂಖ್ಯೆ ಬಹಳಷ್ಟಿದ್ದು, ಎಲ್ಲರಗೂ ಅಧಿಕಾರ ಸಿಗಲು ಸಾಧ್ಯವಿಲ್ಲ. ಕಾರಣ ಮುಂದಿನ ದಿನಗಳಲ್ಲಿ ಮತ್ತೆ ನಿಗಮ ಮಂಡಳಿಗಳಿಗೆ ಅವಕಾಶ ಸಿಕ್ಕಾಗ ಮತ್ತಷ್ಟು ಕಾರ್ಯಕರ್ತರಿಗೆ ಅಧಿಕಾರ ದೊರಕುತ್ತದೆ. ಆದ್ದರಿಂದ ತಾಳ್ಮೆಯಿಂದ ಪಕ್ಷದಲ್ಲಿ ದುಡಿಯಬೇಕೆಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ, ಶಾಸಕ ಆಸೀಫ್ (ರಾಜು ) ಸೇಠ್ ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿ ಅವರಂತ ನಾಯಕರು ಬೆಳಗಾವಿ ಜಿಲ್ಲೆಗೆ ಸಿಕ್ಕಿದ್ದು ಅದೃಷ್ಟ ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯದರ್ಶಿ ದಯಾನಂದ ಪಾಟೀಲ್ ಅವರು ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಕಾರ್ಯಕರ್ತರಿಗೆ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಮುಖಂಡರಾದ ಬಸವರಾಜ ಶೇಗಾಂವಿ, ಪ್ರಭಾವತಿ ಮಾಸ್ತಮರಡಿ, ಪ್ರದೀಪ್ ಎಂ.ಜೆ ಸೇರಿದಂತೆ ಐದು ನೂರಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ