*ಕಾಂಗ್ರೆಸ್ ಅಧ್ಯಕ್ಷರನ್ನು ಬದಲಿಸಬೇಕು; ಸತೀಶ್ ಜಾರಕಿಹೊಳಿ* *ಬಿಜೆಪಿ ಅಧ್ಯಕ್ಷರನ್ನು ಬದಲಿಸಬೇಕು; ರಮೇಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲೂ ರಾಜ್ಯಾಧ್ಯಕ್ಷರ ಬಲದಲಾವಣೆ ಮಾಡುವಂತೆ ಸ್ವಪಕ್ಷದ ನಾಯಕರೇ ಒತ್ತಾಯಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸುವಂತೆ ಲೋಕೋಪಯೋಗಿ ಸಚಿವ, ಕೆಪಿಸಿಸಿ ಕಾರ್ಯಾದ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದರೆ, ಇತ್ತ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡುವಂತೆ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಬೇಕು. ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕವಾಗಬೇಕು ಎಂದು ಹೇಳಿದರು. ಇತ್ತ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ, ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಿಸಬೇಕು. ವಿಜಯೇಂದ್ರ ಅವರನ್ನು ಸ್ಥಾನದಿಂದ ಇಳಿಸಲು ನಾವೆಲ್ಲರೂ ಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ವೋಟು ತರುವವರನ್ನು ಅಧ್ಯಕ್ಷರನ್ನಾಗಿ ಮಾಡಿ. ನಮಗೆ ಪೂರ್ಣ ಪ್ರಮಾಣದ ಅಧ್ಯಕ್ಷರು ಬೇಕು. ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕವಾಗಬೇಕು ಎಂದರು.
ಪಾಪ್ಯುಲರ್ ಇರುವವರನ್ನು ಅಧ್ಯಕ್ಷರನ್ನಾಗಿ ಮಾಡಿ. ಯಾರೇ ಅಧ್ಯಕ್ಷರಾದರೂ ವೋಟ್ ತರಬೇಕು ಅಂತವರನ್ನು ಮಾಡಿ. ಜಾತಿ ಲೆಕ್ಕಾಚಾರ ಇದ್ಯಾವುದೂ ಮುಖ್ಯವಲ್ಲ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಧ್ಯಕ್ಷರ ನೇಮಕವಾಗಬೇಕು. ಡಿ.ಕೆ. ಶಿವಕುಮಾರ್ ಅವರೇ ಅಧ್ಯಕ್ಷರಾಗಿ ಮುಂದುವರೆಯಬೇಕಾ? ಬೇಡವೇ ಎಂಬುದನ್ನು ಪಕ್ಷದ ಮೇಲ್ಮಟ್ಟದಲ್ಲಿ ಚರ್ಚೆಯಾಗಲಿ. ಈಗಿರುವ ಗೊಂದಲಗಳಿಗೆ ಇತಿಶ್ರೀ ಹಾಡಿ. ಡಿ.ಕೆ ಅವರೇ ಇರಬೇಕು ಎನ್ನುವುದಾದರೇ ಹೈಕಮಾಂಡ್ ಈ ಬಗ್ಗೆ ಸ್ಪಷ್ಟವಾಗಿ ಹೇಳಲಿ. ಈ ಬಗ್ಗೆ ನಾನು ಸುರ್ಜೇವಾಲಾ ಜೊತೆ ಚರ್ಚೆ ನಡೆಸಿದ್ದೇನೆ. ಆದಷ್ಟು ಬೇಗ ಗೊಂದಲಕ್ಕೆ ತೆರೆ ಎಳೆಯಿರಿ ಎಂದಿದ್ದೇನೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆ ಮಾಡಬೇಕು ಎಂದು ನಾವು ಯತ್ನಿಸುತ್ತಿರುವುದು ನಿಜ. ಪಕ್ಷದ ನಾಯಕತ್ವವನ್ನು ಒಪ್ಪುತ್ತೇನೆ ಆದರೆ ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪಲ್ಲ. ವಿಜಯೇಂದ್ರ ಅವರನ್ನು ಬಿಟ್ಟು ಬೇರೆಯಾರನ್ನಾದರೂ ಅಧ್ಯಕ್ಷರನ್ನಾಗಿ ಮಾಡಲಿ ನಮ್ಮ ತಕರಾರಿಲ್ಲ. ಅಂತಿಮವಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ಹೇಳಿದರು.
ಒಟ್ಟಾರೆ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ಎರಡೂ ಪಕ್ಷಗಳಲ್ಲಿಯೂ ರಾಜ್ಯಾಧ್ಯಕ್ಷರ ಬದಲಾವಣೆಗಾಗಿ ಸ್ವಪಕ್ಷಗಳ ನಾಯಕರೇ ಒತ್ತಾಯಿಸುತ್ತಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಎರಡೂ ಪಕ್ಷಗಳಲ್ಲಿ ಅಧ್ಯಕ್ಷರ ವಿರುದ್ದ ಜಾರಕಿಹೊಳಿ ಸಹೋದರರೇ ಸಿಡಿದೆದ್ದಿರುವುದು ವಿಶೇಷವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ