ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಬಂಪರ್ ಕೊಡುಗೆ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ನಡೆದಿದ್ದು, ಸಭೆಯಲ್ಲಿ ಎಸ್ ಸಿ, ಎಸ್ ಟಿ ಮೀಸಲಾತಿ ಹೆಚ್ಚಳ ನಿಟ್ಟಿನಲ್ಲಿ ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಗೆ ನಿರ್ಧಾರ ಕೈಗೊಳ್ಳಲಾಯಿತು.
ಸರ್ವ ಪಕ್ಷ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ ಎಂದು ಘೋಷಿಸಿದರು.
ಎಸ್ ಸಿ ಮೀಸಲಾತಿ ಶೇ.15ರಿಂದ ಶೇ.17ಕ್ಕೆ ಹೆಚ್ಚಿಸಲು ಹಾಗೂ ಎಸ್ ಟಿ ಮೀಸಲಾತಿ ಪ್ರಮಾಣ ಶೇ.3ರಿಂದ 7ಕ್ಕೆ ಹೆಚ್ಚಿಸಲು ತೀರ್ಮಾನ ಕೈಗೊಳ್ಳಾಗಿದೆ. ಎಸ್ ಟಿ ಮೀಸಲಾತಿ ಹೆಚ್ಚಳಕ್ಕೆ ನಾಳಿನ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ಸೂಚಿಸಲು ನಿರ್ಧರಿಸಲಾಗಿದ್ದು, ಸರ್ಕಾರದಿಂದ ನಾಳೆಯೇ ಅಧಿಕೃತ ಮುದ್ರೆ ಬೀಳಲಿದೆ ಎಂದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ನಾಯಕರ ಸಭೆ
*ಪರಿಶಿಷ್ಟ ಜಾತಿಗೆ ಶೇ. 17% ಪರಿಶಿಷ್ಟ ಪಂಗಡಕ್ಕೆ ಶೇ.7% ಮೀಸಲಾತಿ ಹೆಚ್ಚಿಸಲು ಒಮ್ಮತದ ತೀರ್ಮಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಅಕ್ಟೋಬರ್ 07: ಬಹಳ ವರ್ಷಗಳ ನ್ಯಾಯಸಮ್ಮತವಾದ ಬೇಡಿಕೆ, ಸಂವಿಧಾನದಲ್ಲಿ ಹೇಳಿರುವಂತೆ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನೀಡಬೇಕೆಂಬ ಬೇಡಿಕೆಯಂತೆ ಪರಿಶಿಷ್ಟ ಜಾತಿಗೆ ಶೇ 15 ರಷ್ಟಿದ್ದ ಮೀಸಲಾತಿಯನ್ನು ಶೇ. 17% ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 3 ರಿಂದ ಶೇ.7% ಕ್ಕೆ ಮೀಸಲಾತಿ ಹೆಚ್ಚಿಸಲು ಒಮ್ಮತದ ತೀರ್ಮಾನ ಮಾಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಹೆಚ್ಚಿಸಲು ರಚಿಸಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಸಲ್ಲಿಸಿರುವ ವರದಿ ಕುರಿತು ಇಂದು ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ವಿಧಾನಮಂಡಲದ ಉಭಯ ಸದನಗಳ ನಾಯಕರ ಸಭೆಯ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
*ಸಾಮಾಜಿಕ ನ್ಯಾಯದ ಕುರಿತು ಬದ್ಧತೆ*
ಇದಕ್ಕೆ ಪೂರ್ವದಲ್ಲಿ ಬಿಜೆಪಿ ಪಕ್ಷದಲ್ಲಿಯೂ ಈ ಬಗ್ಗೆ ಎಲ್ಲಾ ನಾಯಕರೊಂದಿಗೆ ಚರ್ಚೆ ಮಾಡಲಾಗಿದೆ. ಇಂದು ಬೆಳಿಗ್ಗೆ ಕೋರ್ ಸಮಿತಿ ಸಭೆಯಲ್ಲಿ ಚರ್ಚೆಸಿ ಸಾಮಾಜಿಕ ನ್ಯಾಯದಲ್ಲಿ ನಮ್ಮ ಬದ್ಧತೆಯನ್ನು ಮುಂದುವರೆಸಬೇಕು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಹೆಚ್ಚಿನ ಮೀಸಲಾತಿ ನೀಡಲು ಕ್ರಮ ಕೈಗೊಂಡು, ಕಾನೂನಾತ್ಮಕ ಕ್ರಮಗಳನ್ನೂ ತೆಗೆದುಕೊಳ್ಳಲು ನಿರ್ಣಯ ಮಾಡಲಾಗಿತ್ತು.
*ಸರ್ಕಾರದ ಆದೇಶ*
ಸರ್ವಪಕ್ಷದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಅದರ ಅನುಷ್ಠಾನಕ್ಕೆ ನಮ್ಮ ಸರ್ಕಾರ ಮುಂದಾಗಿದೆ. ನಾಳೆಯೇ ಸಚಿವ ಸಂಪುಟ ಸಭೆ ಕರೆದು ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ಎಲ್ಲಾ ಶಿಫಾರಸ್ಸುಗಳನ್ನು ಚರ್ಚಿಸಿ ಅಂತಿಮವಾದ ಸರ್ಕಾರದ ಕಾರ್ಯಾದೇಶವನ್ನು ಹೊರಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
*ಒಳಮೀಸಲಾತಿ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಿ ತೀರ್ಮಾನ*
ಇದರ ಜೊತೆಗೆ ಇನ್ನೂ ಹತ್ತು ಹಲವಾರು ಬೇಡಿಕೆಗಳಿವೆ. ಮೀಸಲಾತಿಯ ಬಗ್ಗೆ ನಾವೆಲ್ಲರೂ ಚಿಂತನೆ ಮಾಡುವ ಅವಶ್ಯಕತೆ ಇದೆ. ಎಲ್ಲಾ ಸಮಾಜದಲ್ಲಿ, ಎಲ್ಲಾ ಜನಾಂಗಗಳಲ್ಲಿಯೂ ಆಕಾಂಕ್ಷೆಗಳು ಹೆಚ್ಚಾಗಿವೆ. ಎಸ್.ಸಿ./ಎಸ್.ಟಿ ಸಮುದಾಯದೊಳಗೆ ಕೆಲಸವರಿಗೆ ನ್ಯಾಯ ದೊರೆತಿಲ್ಲ ಎನ್ನುವ ಒಂದು ಕೂಗಿದೆ. ಅದರ ಬಗ್ಗೆಯೂ ಕೂಡ ಈಗಾಗಲೇ ಆಯೋಗಗಳು ತೀರ್ಮಾನ ನೀಡಿರುವ ಹಿನ್ನೆಲೆಯಲ್ಲಿ ಅದನ್ನೂ ಕೂಡ ಸಮಗ್ರವಾಗಿ ಅಧ್ಯಯನ ಮಾಡಿ ಎಲ್ಲರ ಮುಂದಿಟ್ಟು ಒಳ್ಳೆಯ ತೀರ್ಮಾನ ಮಾಡಲು ಸರ್ಕಾರ ಮುಂದಾಗಲಿದೆ. ಮುಂಬರುವ ದಿನಗಳಲ್ಲಿ ಸರ್ಕಾರ ಆ ನಿಟ್ಟಿನಲ್ಲಿಯೂ ಎಸ್.ಸಿ./ಎಸ್.ಟಿ ಒಳಮೀಸಲಾತಿಗೂ ಕೂಡ ಎಲ್ಲರೊಂದಿಗೆ ಚರ್ಚಿಸಿ, ಯಾವುದೇ ಸಮಾಜಕ್ಕೆ ಅನ್ಯಾಯವಾಗದಂತೆ, ಕೈಬಿಡದಂತೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಎಲ್ಲಾ ಪಕ್ಷಗಗಳೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದರು. ಇದಲ್ಲದೆ ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ನಡೆಯುತ್ತಿರುವ ಚರ್ಚೆ ಬಗ್ಗೆಯೂ ವರದಿಗಳನ್ನು ಆಧರಿಸಿ ಆಯಾ ಸಮಾಜಕ್ಕೆ ನ್ಯಾಯ ದೊರಕಿಸಲು ಸರ್ಕಾರ ಮುಂದಾಗಲಿದೆ ಎಂದರು.
ಈಗಿರುವ ಯಾವುದೇ ಮೀಸಲಾತಿ ಕಡಿಮೆಯಾಗುವುದಿಲ್ಲ. ರಾಜ್ಯದಲ್ಲಿ ಶೇ 50 ರಷ್ಟು ಮೀಸಲಾತಿ ಇದ್ದು, ಎಸ್. ಸಿ, ಎಸ್.ಟಿ, ಪ್ರವರ್ಗ 1, 2 ಎ, ಮರು ಬಿ ಯಾರಿಗೂ ಮೀಸಲಾತಿ ಪ್ರಮಾಣ ಕಡಿಮೆಯಾಗುವುದಿಲ್ಲ. ಇದು ಶೇ 50 ಕ್ಕಿಂತಲೂ ಜಾಸ್ತಿ ಇರುವವರಿಗೆ ನೀಡುವ ಮೀಸಲಾತಿ. ಅದೇ ನ್ಯಾ. ನಾಗಮೋಹನ್ ದಾಸ್ ಸಮಿತಿ ಹೇಳಿದೆ. ಅದನ್ನೇ ನಾವು ಮಾಡುತ್ತಿದ್ದೇವೆ ಎಂದರು.
*ಯಾರಿಗೂ ಅನ್ಯಾವಾಗದಂತೆ ಮೀಸಲಾತಿ*
ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿರುವ ಶೇ 10 ರಷ್ಟು ಮೀಸಲಾತಿಯನ್ನು ಕಾನೂನಿನ ಪ್ರಕಾರ ಮೀಸಲಾತಿ ಇಲ್ಲದಿರುವ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ನೀಡಲು ಈಗಾಗಲೇ ತೀರ್ಮಾನ ಮಾಡಲಾಗಿದೆ. ಆದರೆ ಅದು ಸರ್ವೋಚ್ಛ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲಾಗಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ. ಅದಾದ ಕೂಡಲೇ ಆದೇಶದನ್ವಯ ಅನುಷ್ಠಾನ ಮಾಡಲಾಗುವುದು. ಯಾರಿಗೂ ಅನ್ಯಾವಾಗದಂತೆ ಮೀಸಲಾತಿ ನೀಡುವುದೇ ನಿಜವಾದ ನ್ಯಾಯ ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.
*ಸಂವಿಧಾನದ ಅನುಸೂಚಿ 9 ರಲ್ಲಿ ವಿನಾಯಿತಿ*
ತಮಿಳುನಾಡು ಸರ್ಕಾರ 1994 ರಲ್ಲಿ ಮೀಸಲಾತಿ ಹೆಚ್ಚಳ ಮಾಡಿ ಅದನ್ನು ಸಂವಿಧಾನದ ಅನುಸೂಚಿ 9 ರಲ್ಲಿ ಬಂದ ನಂತರ 2007 ರಲ್ಲಿ ಮತ್ತೊಂದು ತೀರ್ಪು ಬಂದಿದೆ. ಅನುಸೂಚಿ 9 ಮೂಲಭೂತ ಹಕ್ಕುಗಳಿಗೆ ಚ್ಯುತಿಯಾದರೆ ಅದಕ್ಕೆ ನ್ಯಾಯಾಂಗದ ವಿನಾಯತಿ ನೀಡಬೇಕೆಂದಿದೆ. ಪಶ್ಚಿಮ ಬಂಗಾಲದಲ್ಲಿ 1950 ರಲ್ಲಿ ಭೂ ಸುಧಾರಣಾ ಕಾಯ್ದೆ ಬಂದಾಗ ಸರ್ವೋಚ್ಛ ನ್ಯಾಯಾಲಯ ಕಾಯ್ದೆಯನ್ನು ರದ್ದು ಮಾಡಿತು. ಆ ಸಂದರ್ಭದಲ್ಲಿ ಭೂ ಸುಧಾರಣಾ ಕಾಯ್ದೆ ಮತ್ತು ರೈತರಿಗೆ ನ್ಯಾಯ ಕೊಡಿಸುವ ಸಲುವಾಗಿ ಮೂಲಭೂತ ಹಕ್ಕು ಎಂದು ಪರಿಗಣಿಸಿ ಅನುಸೂಚಿ 9 ನ್ನು ತರಲಾಯಿತು. ಕೇವಲ ಮೀಸಲಾತಿಗೆ ಮಾತ್ರವಲ್ಲ ಹಲವಾರು ವಿಚಾರಗಳು ಇದರಲ್ಲಿ ಬರುತ್ತದೆ. 1994 ರಿಂದ ಈವರೆಗೆ ವಿನಾಯಿತಿ ದೊರೆತಿದೆ. ಈಗಲೂ ಕೂಡ ಅದರ ಬಗ್ಗೆ ತೀರ್ಪು ಹೊರಬಂದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇವುಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಈ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದಲ್ಲಿ ಸಾಮರಸ್ಯ ಮೂಡಬೇಕೆಂಬ ಕಾರಣದಿಂದ ಹಾಗೂ ಕಾನೂನು ಮತ್ತು ಸಂವಿಧಾನಾತ್ಮಕವಾದ ವಿಚಾರ ಇದಾಗಿರುವುದರಿಂದ ಸರ್ವ ಪಕ್ಷ ಸಭೆಯಲ್ಲಿ ಚರ್ಚೆ ಮಾಡಿ, ಸರ್ವಸಮ್ಮತದಿಂದ ತೀರ್ಮಾನ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ; ಶೀಘ್ರದಲ್ಲಿಯೇ ವಿವಿಧ ಯೋಜನೆಗಳು ಅನುಷ್ಠಾನಕ್ಕೆ; ಸಿಎಂ ಭರವಸೆ
https://pragati.taskdun.com/politics/cm-basavaraj-bommaikarnataka-developmentgovt-commited/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ