
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪದಲ್ಲಿ ಕಾಲೆಜು ಉಪನ್ಯಾಸಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಗಂಗಮ್ಮನ ಗುಡಿ ಪೊಲಿಸರು ಆರೋಪಿ ಉಪನ್ಯಾಸಕನನ್ನು ಬಂಧಿಸಿದ್ದಾರೆ. ಮದನ್ ಕುಮಾರ್ ಬಂಧಿತ ಉಪನ್ಯಾಸಕ.
ಬೆಂಗಳೂರಿನ ಯಲಹಂಕ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಮದನ್ ಕುಮಾರ್, ಪಾರ್ಟ್ ಟೈಮ್ ಕೆಲಸ ಕೊಡಿಸುವಂತೆ ಕೇಳಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಎಂಬ ಆರೋಪ ಕೇಳಿಬಂದಿದೆ.
ಎಂ.ಜಿ.ರಸ್ತೆಯಲ್ಲಿ ಇಂಟರ್ ವ್ಯೂ ಇದೆ ಎಂದು ವಿದ್ಯಾರ್ಥಿನಿಯನ್ನು ಹೋಟೆಲ್ ಗೆ ಕರೆದೊಯ್ದು ದೌರ್ಜನ್ಯವೆಸಗಿದ್ದಾನೆ. ವಿಡಿಯೋ ಮಾಡಿ ವಿದ್ಯಾರ್ಥಿನಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಉಪನ್ಯಾಸಕನಿಂದ ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿನಿ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ ಉಪನ್ಯಾಸಕ ಮದನ್ ಕುಮಾರ್ ನನ್ನು ಬಂಧಿಸಲಾಗಿದೆ.


