Belagavi NewsBelgaum NewsKannada News

ಗಡಿ ಕ್ಯಾತೆ ಹೊತ್ತೊಯ್ದ ಎಂಇಎಸ್ ಮುಖಂಡರಿಗೆ ಶರದ್ ಪವಾರ್ ಮಂಗಳಾರತಿ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮತ್ತೆ ಗಡಿ ವಿವಾದ ಹೊತ್ತು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಬಳಿ ತೆರಳಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡು ಹಿಂತಿರುಗಿದ್ದಾರೆ.

ಶನಿವಾರ ಖಾಸಗಿ ಕಾರ್ಯಕ್ರಮದ ನಿಮಿತ್ತ ಕೊಲ್ಹಾಪುರಕ್ಕೆ ಆಗಮಿಸಿದ್ದ ಶರದ ಪವಾರ ಅವರನ್ನು ಅಲ್ಲಿಯ ಎನ್.ಸಿ.ಪಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಭೇಟಿ ಮಾಡಿದ ಬೆಳಗಾವಿ ಜಿಲ್ಲೆಯ ಎಂಇಎಸ್ ಮುಖಂಡರು ಅವರನ್ನು ಸನ್ಮಾನಿಸಿದರು. ಬಳಿಕ ಅವರೊಂದಿಗೆ ಗಡಿವಿವಾದದ
ಸಧ್ಯದ ಹಂತದ ಕುರಿತು ಪ್ರಸ್ತಾಪಿಸಲೆತ್ನಿಸಿದರು.

ಇದರಿಂದ ಕೆರಳಿದ ಶರದ್ ಪವಾರ ಇನ್ನೆಷ್ಟು ವರ್ಷ ಇದನ್ನೇ ಮಾಡುತ್ತಿರುತ್ತೀರಿ? ಈಗಾಗಲೆ ಬೆಳಗಾವಿಯಲ್ಲಿ ಎಂಇಎಸ್ ಒಳಜಗಳದಿಂದ ಮುಳುಗಿ ಹೋಗಿದೆ. ಕಳೆದ ವಿಧಾನ ಸಭಾ ಚುನಾವಣೆ ಮತ್ತು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಂಪೂರ್ಣ ನಿರ್ನಾಮವಾಗಿದೆ. ಬೆಳಗಾವಿ ಜನರು ನಿಮ್ಮನ್ನು ತಿರಸ್ಕರಿಸಿದ್ದಾರೆ. ಗಡಿ ವಿವಾದ ಸುಪ್ರಿಂ ಕೋರ್ಟ್ ನಲ್ಲಿದೆ. ಸುಪ್ರಿಂ ಕೋರ್ಟ್ ತೀರ್ಪು ಬರುವವರೆಗೆ ಬಾಯಿ ಮುಚ್ಚಿಕೊಂಡಿರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಖಾನಾಪುರ, ಬೆಳಗಾವಿ, ನಿಪ್ಪಾಣಿ ಸೇರಿದಂತೆ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಎಂಇಎಸ್ ಮುಖಂಡರ ನಿಯೋಗ ಶನಿವಾರ ಮಹಾರಾಷ್ಟ್ರದ ಕೊಲ್ಹಾಪುರ ನಗರದಲ್ಲಿ ಎನ್.ಸಿ.ಪಿಯ ರಾಷ್ಟ್ರೀಯ ಅಧ್ಯಕ್ಷ ಶರದ ಪವಾರ ಅವರನ್ನು ಭೇಟಿಯಾಗಿ ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ನಡುವಿನ ಗಡಿ ಸಮಸ್ಯೆಯನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸುವಂತೆ ಮನವಿ ಸಲ್ಲಿಸಿದರು.

ಲಿಖಿತ ಮನವಿಯೊಂದನ್ನು ಸಹ ನೀಡಿದರು. “ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಕರ್ನಾಟಕದಲ್ಲಿರುವ ಸರ್ಕಾರಿ ಮರಾಠಿ ಶಾಲೆಗಳ ಸ್ಥಿತಿ ದಯನೀಯವಾಗಿದೆ. ಹಳಿಯಾಳ, ಜೋಯಿಡಾ, ಕಾರವಾರ, ಬೆಳಗಾವಿ, ಖಾನಾಪುರ ಮತ್ತು ನಿಪ್ಪಾಣಿ ತಾಲ್ಲೂಕುಗಳ ವ್ಯಾಪ್ತಿಯ
ಗ್ರಾಮೀಣ ಭಾಗದ ಮರಾಠಿ ಶಾಲೆಗಳು ಮರಾಠಿ ಶಿಕ್ಷಕರ ಕೊರತೆ ಎದುರಿಸುತ್ತಿವೆ. ಕರ್ನಾಟಕ ಸರ್ಕಾರ ಗಡಿಭಾಗದ ಸ್ಥಳೀಯ ಸಂಸ್ಥೆಗಳು, ಸಹಕಾರಿ ಸಂಘಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲೆಡೆ ಕನ್ನಡ ಭಾಷೆಯ ಬಳಕೆಯನ್ನು ಹಂತ-ಹಂತವಾಗಿ ಕಡ್ಡಾಯಗೊಳಿಸುವ ಮೂಲಕ ಮರಾಠಿ ಭಾಷೆಯ ಪ್ರಾಬಲ್ಯವನ್ನು ಹತ್ತಿಕ್ಕುತ್ತಿದೆ. ಕರ್ನಾಟಕದಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಮರಾಠಿ ಭಾಷಿಕರಿಗೆ ಮರಾಠಿ ಭಾಷೆಯಲ್ಲಿ ಕಾಗದಪತ್ರಗಳನ್ನು ನೀಡಬೇಕು ಮತ್ತು ಗಡಿಯಲ್ಲಿ ದ್ವಿ ಭಾಷಾ ನೀತಿ ಕಡ್ಡಾಯಗೊಳಿಸಬೇಕು, ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಎರಡೂ ಭಾಷೆಯ ಫಲಕಗಳನ್ನು ಅಳವಡಿಸಬೇಕು ಮತ್ತು ಗಡಿಭಾಗದ ಮರಾಠಿಗರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ನ್ಯಾಯಾಲಯದ ಆದೇಶವಿದ್ದರೂ ಕರ್ನಾಟಕ ಸರ್ಕಾರ ಅದನ್ನು ಪಾಲಿಸುತ್ತಿಲ್ಲ. ಒಟ್ಟಾರೆ ಗಡಿಭಾಗದಲ್ಲಿ ಕರ್ನಾಟಕ ಸರ್ಕಾರ ಮರಾಠಿ ಜನತೆಯ
ಮೇಲೆ ನಿರಂತರವಾಗಿ ಶೋಷಣೆ ನಡೆಸುತ್ತಿದೆ. ವಿವಾದಿತ ಗಡಿ ಭಾಗ ಆದಷ್ಟು ಬೇಗ ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕು ಎಂಬುದು ಮಹಾರಾಷ್ಟ್ರ ಏಕೀಕರಣ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಗಡಿಭಾಗದ ಲಕ್ಷಾಂತರ ಮರಾಠಿ ಭಾಷಿಕರ ಬೇಡಿಕೆಯಾಗಿದೆ.
ಮರಾಠಿಗರ ಸಮಸ್ಯೆಯ ಕುರಿತು ಮಧ್ಯ ಪ್ರವೇಶಿಸಿ ಆದಷ್ಟು ಬೇಗ ಗಡಿ ವಿವಾದ ಇತ್ಯರ್ಥಕ್ಕೆ ಗಮನಹರಿಸಬೇಕು. ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಗಡಿಭಾಗದ ಮರಾಠಿಗರ ಕುರಿತು ಹಕ್ಕೋತ್ತಾಯವನ್ನು ಮಂಡಿಸಲು ಉನ್ನತಾಧಿಕಾರ ಸಮಿತಿಯ ಸಭೆಯನ್ನು
ಕರೆಯಬೇಕು, ಸರ್ವೋಚ್ಛ ನ್ಯಾಯಾಲಯದಲ್ಲಿ ಗಡಿಭಾಗದ ಮರಾಠಿಗರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಬೇಕು” ಎಂದು ಮನವಿ ಸಲ್ಲಿಸಿದರು.

ಬಳಿಕ ಅವರ ಮುಂದೆ ಬೆಳಗಾವಿ, ಖಾನಾಪುರ, ಕಾರವಾರ, ನಿಪ್ಪಾಣಿ ಸಹಿತ ಅಖಂಡ ಮಹಾರಾಷ್ಟ್ರ ರಚನೆ ಆಗಲೇ ಬೇಕು
ಎಂದು ಘೋಷಣೆ ಕೂಗಿದರು. ಇದರಿಂದ ಶರದ್ ಪವಾರ ಕೆರಳಿ ಕೆಂಡವಾದರು. ಮುಖಂಡರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು ಎಂದು ಗೊತ್ತಾಗಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ದಿಗಂಬರ ಪಾಟೀಲ, ಎಂಇಎಸ್ ಅಧ್ಯಕ್ಷ ಗೋಪಾಲ ದೇಸಾಯಿ, ಕಾರ್ಯಾಧ್ಯಕ್ಷ ಮುರಳೀಧರ ಪಾಟೀಲ, ನಿರಂಜನ ಸರ್ದೇಸಾಯಿ, ಮುಖಂಡರಾದ ಅಬಾಸಾಹೇಬ ದಳವಿ, ರಣಜಿತ ಪಾಟೀಲ, ಜಯರಾಮ್ ದೇಸಾಯಿ, ರವೀಂದ್ರ ಶಿಂಧೆ, ಕೃಷ್ಣಾ ಕುಂಬಾರ, ಕೃಷ್ಣ ಮನ್ನೋಳಕರ ಸೇರಿದಂತೆ ಗಡಿಭಾಗದ ಎಂಇಎಸ್ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button