*ಗುರು ಪೂರ್ಣಿಮೆಯ ನಿಮಿತ್ತ ಹುಕ್ಕೇರಿ ಹಿರೇಮಠದ ಶ್ರೀಗಳ ಆಶೀರ್ವಾದ ಪಡೆದ ಶೆಟ್ಟರ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗುರು ಎಂದರೆ ಪ್ರೇರಣೆ, ಕರುಣೆ, ಗುರುತಿಸುವಿಕೆ, ಬದ್ಧತೆ, ಬೋಧ, ಬೋಧಿ ವೃಕ್ಷ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಶನಿವಾರ ಇಲ್ಲಿನ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ಗುರು ಪೂರ್ಣಿಮೆಯ ನಿಮಿತ್ತ ಮುನ್ನಾದಿನ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದು ಮಾತನಾಡಿದರು. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಎಲ್ಲ ಸಮುದಾಯದವರನ್ನು ಸಮಾನವಾಗಿ ನೋಡುವ ಶ್ರೀಗಳು. ಗುರು ಎಂದರೆ ಜ್ಞಾನ ಭಂಡಾರ, ಜ್ಞಾನ ದೇಗುಲ, ನ್ಯಾಯ ನಿಷ್ಠರು. ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಸನಾತನ ಧರ್ಮದ ಸ್ವಾಮೀಜಿಗಳ ಪಾತ್ರ ದೊಡ್ಡದಿದೆ ಎಂದರು.
ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನದ ಹಿರೇಮಠ ಉತ್ತರ ಕರ್ನಾಟಕದಲ್ಲಿಯೇ ಅಪರೂಪದ ಕಾರ್ಯ ಮಾಡುತ್ತಿದೆ. ಕರ್ನಾಟಕದಲ್ಲಿ ಅಷ್ಟೆ ಅಲ್ಲದೆ ಬೇರೆ ಬೇರೆ ರಾಜ್ಯದಲ್ಲಿ ಶ್ರೀಗಳ ಹೆಸರಿದೆ. ಗುರುಪೂರ್ಣಿಮೆಯ ಪರ್ವಕಾಲದಲ್ಲಿ ಶ್ರೀಗಳಿಂದ ಆಶೀರ್ವಾದ ಪಡೆದಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ನಾವೆಲ್ಲರೂ ಕೂಡ ಗುರುಗಳ ಬಗ್ಗೆ ಶೃದ್ಧೆ ಇಡುತ್ತ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.
ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುವನ್ನು ಗೌರವಿಸಬೇಕು. ಗುರುವನ್ನು ಗೌರವಿಸಿದಾಗ ಮಾತ್ರ ಶಿಷ್ಯನ ಬದುಕು ಬಂಗಾರವಾಗುತ್ತದೆ. ಗುರುವಿಗೆ ನೋವಾಗದಂತೆ ನಡೆದುಕೊಳ್ಳುವವನೇ ನಿಜವಾದ ಶಿಷ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಗುರುಗಳ ಆಶೀರ್ವಾದ ಪಡೆಯುತ್ತ ಜೀವನದಲ್ಲಿ ಮುಂದೆ ಬರಬೇಕು ಎಂದರು.
ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಸಂಸದರಾಗಿ ಈ ಭಾಗದ ಜನರಿಗೆ ಅನುಕೂಲವಾಗುವ ಕಾರ್ಯವನ್ನು ಹೆಚ್ಚಾಗಿ ಮಾಡಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮುಕ್ತಾರ್ ಹುಸೇನ್ ಪಠಾಣ, ಚೇತನ ಅಂಗಡಿ, ಚಂದ್ರಶೇಖರಯ್ಯ ಸವಡಿಸಾಲಿಮಠ, ವೀರುಪಾಕ್ಷಯ್ಯ ನೀರಲಗಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ