Latest

*ಶಿರೀಷ್ ಜೋಶಿಗೆ ಚಲನಚಿತ್ರ ಅಕಾಡೆಮಿ ಪ್ರಶಸ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಿರಿಯ ಸಾಹಿತಿ, ರಂಗಕರ್ಮಿಶಿರೀಷ ಜೋಶಿಯವರಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದ್ದು, ಮುಖ್ಯಮಂತ್ರಿ ಸಿದ್ದರಾಮ್ಯ ಮೈಸೂರಿನಲ್ಲಿ ಪ್ರದಾನ ಮಾಡಿದರು.


ವಿಶಾಲ್ ರಾಜ್ ನಿರ್ದೇಶಿಸಿರುವ ಸಾವಿತ್ರಿಬಾಯಿ ಫುಲೆ ಚಲನಚಿತ್ರದ ಸಂಭಾಷಣೆಗಾಗಿ ಶಿರೀಷ್ ಜೋಶಿಯವರಿಗೆ 2018 -19ನೇ ಸಾಲಿನ ಪ್ರಶಸ್ತಿ ಲಭಿಸಿದೆ.

Home add -Advt

 ಮೈಸೂರಿನ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ನಡೆದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ  ಅತ್ಯುತ್ತಮ ಸಂಭಾಷಣೆಕಾರ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನವೆಂಬರ್  3ರಂದು ಪ್ರದಾನ ಮಾಡಿದರು.

ಶಿರೀಷ ಜೋಶಿಯವರು 2018ರಲ್ಲಿ ಬಿಡುಗಡೆಯಾದ ಸಾವಿತ್ರಿಬಾಯಿ ಫುಲೆ ಚಲನಚಿತ್ರಕ್ಕಾಗಿ ಸಂಭಾಷಣೆ ಬರೆದಿದ್ದರು.  ಈ ಪ್ರಶಸ್ತಿಯು 100 ಗ್ರಾಂ ಬೆಳ್ಳಿಯ ಪದಕ, ಸ್ಮರಣಿಕೆ, 20 ಸಾವಿರ ರೂ. ನಗದು, ಮತ್ತು ಪ್ರಶಸ್ತಿ ಫಲಕಗಳನ್ನು ಹೊಂದಿದೆ. ಡಾ.ಸರಜೂ ಕಾಟ್ಕರ್ ಅವರ ಸಾವಿತ್ರಿಬಾಯಿ ಫುಲೆ ಕಾದಂಬರಿಯನ್ನಾಧರಿಸಿದ ಈ ಚಲನಚಿತ್ರವನ್ನು ವಿಶಾಲರಾಜ್ ಅವರು ನಿದೇಶಿಸಿದ್ದು ನಾಗರಾಜ ಆದವಾನಿಯವರ ಛಾಯಾಗ್ರಹಣವಿದೆ. ಸತೀಶ ಕುಲಕರ್ಣಿ ಸಾಹಿತ್ಯ ಒದಗಿಸಿದ್ದಾರೆ. ಬೆಳಗಾವಿ ಜಿಲ್ಲೆಯವರೇ ಆದ ಯಾದವಾಡದ ಬಸವರಾಜ ಭೂತಾಳಿಯವರು ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಇವರೆಲ್ಲರ ಸಹಕಾರವನ್ನು ಶಿರೀಷ ಜೋಶಿ ಈ ಸಂದರ್ಭದಲ್ಲಿ ಸ್ಮರಿಸಿಕೊಂಡು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. 

ಬೆಳಗಾವಿಯ ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ, ಉಪಾಧ್ಯಕ್ಷ ಎಂ.ಕೆ.ಹೆಗಡೆ, ಶೈಲಜಾ ಭಿಂಗೆ, ಡಾ.ರಾಮಕೃಷ್ಣ ಮರಾಠೆ ಹಾಗೂ ಎಲ್ಲ ಸದಸ್ಯರು ಶಿರೀಷ ಜೋಶಿಯವರನ್ನು ಅಭಿನಂದಿಸಿದ್ದಾರೆ. ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ನಿರ್ಮಿಸಲಾದ ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ಅನೇಕ ನಟ-ನಟಿಯರು ಅಭಿನಯಿಸಿದ್ದು, ಬೆಳಗಾವಿ ಜಿಲ್ಲೆಯ ಪಾಚ್ಛಾಪುರ, ಎಲಿಮುನವಳ್ಳಿ, ಹುದಲಿ, ಗೋಕಾಕ ಫಾಲ್ಸ್ ಮುಂತಾದೆಡೆಗಳಲ್ಲಿ ಈ ಚಲನಚಿತ್ರದ ಚಿತ್ರೀಕರಣ ನಡೆದಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. 

Related Articles

Back to top button