Kannada NewsKarnataka NewsLatestPolitics

*ಈ ಘಟನೆ ಹಿಂದೆ ಯಾರೇ ಇದ್ದರೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು; ಡಿಸಿಎಂ ಎಚ್ಚರಿಕೆ*

ಕಾವೇರಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಬಿಟ್ಟು, ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ತರಲಿ: ಡಿ.ಕೆ. ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾವೇರಿ ವಿಚಾರವಾಗಿ ವಿರೋಧ ಪಕ್ಷ ಬಿಜೆಪಿ ಕೇವಲ ರಾಜಕೀಯ ಮಾಡುತ್ತಿದೆ. ಅವರಿಗೆ ರಾಜ್ಯದ ಹಿತದ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದಿಂದ ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ಅನುಮತಿ ಕೊಡಿಸಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸವಾಲೆಸೆದರು.

ಕೆಪಿಸಿಸಿ ಕಚೇರಿ ಹಾಗೂ ವಿಧಾನಸೌಧದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಶಿವಕುಮಾರ್ ಅವರು ಈ ವಿಚಾರ ತಿಳಿಸಿದರು.

“ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಕರ್ನಾಟಕ ತನ್ನ ಜಾಗದಲ್ಲಿ ಆಣೆಕಟ್ಟುಕೊಳ್ಳಲು ಅಡ್ಡಿಪಡಿಬೇಡಿ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಬಿಜೆಪಿ ನಾಯಕರು ರಾಜಕೀಯ ಬಿಟ್ಟು ರಾಜ್ಯದ ಹಿತಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ. ಅವರಿಗೆ ರಾಜ್ಯದ ಹಿತ ಕಾಯುವ ಬದ್ಧತೆ ಇದ್ದರೆ ಕಾವೇರಿ, ಮಹಾದಾಯಿ ಹಾಗೂ ಕೃಷ್ಣಾ ನದಿ ವಿಚಾರವಾಗಿ ದೆಹಲಿಗೆ ಹೋಗಿ ಕೇಂದ್ರದ ಬಳಿ ಚರ್ಚೆ ಮಾಡಲಿ” ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಗಲಭೆ ಮಾಡಲು ಸರ್ಕಾರವೇ ಮುಕ್ತ ಅವಕಾಶ ನೀಡಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಕಾನೂನು ಕೈಗೆತ್ತಿಕೊಳ್ಳುವ ಯಾರೊಬ್ಬರನ್ನು ನಾವು ಸಹಿಸಿಕೊಳ್ಳುವುದಿಲ್ಲ. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಆದ್ಯತೆ. ಈ ಘಟನೆ ಹಿಂದೆ ಯಾರೇ ಇದ್ದರೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಯಾರೊಬ್ಬರು ಪ್ರಚೋದನೆ ನೀಡುವ, ಕಲ್ಲು ತೂರಾಟ ಮಾಡಲು ಮುಂದಾಗಬಾರದು. ಇದಕ್ಕೆ ನಮ್ಮ ಸರ್ಕಾರ ಅವಕಾಶ ನೀಡವುದಿಲ್ಲ. ನಮ್ಮ ರಾಜ್ಯ ಶಾಂತಿಯ ತೋಟವಾಗಿರಬೇಕು. ಕಾನೂನು ಎಲ್ಲರಿಗೂ ಒಂದೇ” ಎಂದು ತಿಳಿಸಿದರು.

ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳ ಸಂಖ್ಯೆಯ ಪತ್ರ ಹರಿದಾಡುತ್ತಿರುವ ಬಗ್ಗೆ ಕೇಳಿದಾಗ, “ಯಾರೋ ದೂರು ಕೊಟ್ಟಿರುವ ಹಿನ್ನೆಲೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅವರ ಜೊತೆ ನಾವೆಲ್ಲ ಕೂತು ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button