ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ : ಶಿವಶಂಕರ ಜೊಲ್ಲೆ ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಶಾಲೆ, ನಣದಿ ಕ್ಯಾಂಪಸ್ ನಲ್ಲಿ ಸನ್ 2021 – 22ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗಾಗಿ ಬೀಳ್ಕೊಡುವ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆಶಾಜ್ಯೋತಿ ಬುದ್ದಿಮಾಂದ್ಯ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿ ಪ್ರಸಾದ ಜೊಲ್ಲೆ ಅವರು ಶಾಲಾ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮ್ಯಾಗ್ನಮ್ ಟಪ್ ಇಂಡಿಯಾ ಪ್ರೈ. ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಬಸವಪ್ರಸಾದ ಜೊಲ್ಲೆಯವರು ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತ, ಜೀವನದಲ್ಲಿ ಉದಾತ್ತ ಮನೋಭಾವನೆಗಳನ್ನು ಹಾಗೂ ದೃಢ ಸಂಕಲ್ಪಗಳನ್ನು ಹೊಂದಬೇಕು. ಸಕಾರಾತ್ಮಕ ಚಿಂತನೆಗಳನ್ನು ಮಾಡಿರಿ. ಭವಿಷ್ಯತ್ತಿನ ಬಗ್ಗೆ ಸುಂದರವಾದ ಕನಸನ್ನು ಹಾಗೂ ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಸತತ ಪರಿಶ್ರಮ ಪ್ರಯತ್ನಗಳೊಂದಿಗೆ ಸಾಧನೆ ಶಿಖರವನ್ನು ತಲುಪಿರಿ. ನಿಮ್ಮ ಯಶಸ್ಸು ನೀವು ಅವಲಂಬಿಸಿರುವ ಸಂಗದಿಂದ ಸ್ಪಷ್ಟತೆಯನ್ನು ಪಡೆಯುತ್ತದೆ. ಆದ್ದರಿಂದ ಸ್ನೇಹಿತರ ಸಹವಾಸ ಜೀವನಕ್ಕೆ ಅತಿ ಅವಶ್ಯಕ ಯಾವತ್ತೂ ಉತ್ತಮರ ಸಂಗದಲ್ಲಿ ಇರಬೇಕು. ತಮ್ಮೆಲ್ಲರಿಗೊಸ್ಕರ ನಮ್ಮ ಸಂಸ್ಥೆಯ ಬಾಗಿಲು ಯಾವಾಗಲೂ ತೆರೆದಿದೆ. ದೇಶ-ವಿದೇಶಗಳ ಯಾವುದೇ ಮೂಲೆಯಲ್ಲಿದ್ದರೂ ಕೂಡ ನಮ್ಮ ಸಂಸ್ಥೆಯು ತಮಗೆ ಸಲಹೆ, ಮಾರ್ಗದರ್ಶನ ಹಾಗೂ ಸಹಾಯವನ್ನು ಮಾಡುತ್ತದೆ.ಯಾವಾಗಲೂ ನಿಮ್ಮೊಂದಿಗೆ ನಾವು ನಿಕಟವರ್ತಿಗಳಾಗಿರುತ್ತೇವೆ ಎಂದರು.
ಪ್ರಾಚಾರ್ಯೆಯಾದ ಗೀತಾ ನಾಯ್ಡು ಅವರು ಮಾತನಾಡುತ್ತಾ ಶಾಲೆಯ ಕೀರ್ತಿಯನ್ನು ಬಾನೆತ್ತರಕ್ಕೆ ತೆಗೆದುಕೊಂಡು ಹೋಗಿರಿ. ಯಾವಾಗಲೂ ಜಾಗೃತರಾಗಿರಿ. ನಿಸ್ವಾರ್ಥಿಗಳಾಗಿ ಸುಂದರವಾದ ಬದುಕನ್ನು ಎಲ್ಲರೊಂದಿಗೆ ಕಟ್ಟಿ ಕೊಳ್ಳಿರಿ. ಜೀವನದಲ್ಲಿ ಬರುವ ಸುಖ – ಸಂತೋಷಗಳನ್ನು ಎಲ್ಲರೊಂದಿಗೆ ಹಂಚಿಕೊಂಡು ಸದಾಕಾಲ ಸಾಧನೆಯ ಮಾರ್ಗದಲ್ಲಿ ಮುಂದುವರಿಯಿರಿ. ಉದಾತ್ತ ಚಿಂತನೆಗಳ ಹಾಗೂ ಆದರ್ಶ ಮೌಲ್ಯಗಳ ನೆಲೆಗಟ್ಟಿನ ಮೇಲೆ ಜೀವನ ಸೌಧವನ್ನು ಕಟ್ಟಿರಿ. ನಮ್ಮ ನಿಮ್ಮ ಉತ್ತಮ ಬಾಂಧವ್ಯ ಚಿರಕಾಲ ಮುಂದುವರೆಯಲಿ ಎಂದರು.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರ ಮೂಲಕ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಶಸ್ತಿ ಹಾಗೂ ಫಲಕಗಳನ್ನು ನೀಡಿ ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳ ಪ್ರತಿನಿಧಿಯಾದ ಸುಮಿತ ಪಡಲಾಳೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದನು. ಕಾರ್ಯಕ್ರಮದಲ್ಲಿ ಜೊಲ್ಲೆ ಶಿಕ್ಷಣ ಸಂಸ್ಥೆಯ ಸಮನ್ವಯಾಧಿಕಾರಿಗಳಾದ ಎಮ್.ಎಮ್. ಪಾಟೀಲ, ಶಿವಶಂಕರ ಜೊಲ್ಲೆ ಪಬ್ಲಿಕ್ ಸ್ಕೂಲ್ ನಿಪ್ಪಾಣಿಯ ಪ್ರಾಚಾರ್ಯೆಯಾದ ಊರ್ಮಿಳಾ ಚೌಗುಲೆ, ಶಾಲೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮನೋಜ ಖೋತ ಹಾಗೂ ಅಶ್ವಿನಿ ಉಮರಾ ಣೆ ಕಾರ್ಯಕ್ರಮವನ್ನು ನಿರೂಪಿಸಿದರು. ವಿಜಯ ಯಲಗೌಡಣ್ಣವರ ಸ್ವಾಗತಿಸಿದರು. ಸುಧಾ ಮಾಲಗಾರ ವಂದಿಸಿದರು.
ಬಿರುಗಾಳಿ ಮಳೆಗೆ ಮನೆ ಮೇಲ್ಛಾವಣಿ ಹಾನಿ; ಪರಿಹಾರದ ಭರವಸೆ ನೀಡಿದ ಶ್ರೀನಿವಾಸ ಶ್ರೀಮಂತ ಪಾಟೀಲ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ