Latest

ಹಿಜಾಬ್‌ಗೂ ಹಿಂದೂ ಸ್ವಾಮೀಜಿಗಳಿಗೂ ಏನು ಸಂಬಂಧ?; ಓಲೈಕೆಗೂ ಒಂದು ಮಿತಿಯಿದೆ ಎಂದು ಗುಡುಗಿದ ಬಿಜೆಪಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ವಾಮೀಜಿಗಳು ತಲೆಗೆ ಖಾವಿ ಬಟ್ಟೆ ಹಾಕಲ್ವಾ? ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿದರೆ ತಪ್ಪೇನು? ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಇದೀಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಸಿದ್ದರಾಮಯ್ಯ ಹೇಳಿಕೆಗೆ ಕಿಡಿ ಕಾರಿರುವ ರಾಜ್ಯ ಬಿಜೆಪಿ, ಹಿಜಾಬ್‌ಗೂ ಹಿಂದೂ ಸ್ವಾಮೀಜಿಗಳಿಗೂ ಏನು ಸಂಬಂಧ ಸಿದ್ದರಾಮಯ್ಯನವರೇ? ಮತಬ್ಯಾಂಕ್ ರಾಜಕಾರಣಕ್ಕೆ ಮುಸ್ಲಿಂ‌ ಸಮುದಾಯವನ್ನು ಓಲೈಕೆ ಮಾಡುವ ಭರದಲ್ಲಿ ಸಿದ್ದರಾಮಯ್ಯ ಅವರು ಪ್ರತಿ ಹಂತದಲ್ಲೂ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡುತ್ತಿದ್ದಾರೆ ಇದು ಖಂಡನೀಯ ಎಂದು ಸರಣಿ ಟ್ವೀಟ್ ಮೂಲಕ ಕಿಡಿ ಕಾರಿದೆ.

ಓಲೈಕೆಗೂ ಒಂದು ಮಿತಿ ಎನ್ನುವುದಿರುತ್ತದೆ. ಸಿದ್ದರಾಮಯ್ಯನವರೇ ನೀವು ಅದೆಲ್ಲವನ್ನೂ ದಾಟಿ ಸಾಗುತ್ತಿದ್ದೀರಿ. ದುಪ್ಪಟ್ಟ, ಮುಂಡಾಸು, ಪೇಟ ಇವುಗಳ ನಡುವಿನ ವ್ಯತ್ಯಾಸವನ್ನು ಮೊದಲು ಅರಿತುಕೊಳ್ಳಿ. ಹಿಜಾಬ್‌ ನಿಷೇಧಿಸಿಲ್ಲ, ತರಗತಿಯೊಳಗೆ ಹಿಜಾಬ್‌ಗೆ ಅವಕಾಶ ನಿರಾಕರಿಸಲಾಗಿದೆ, ಅಷ್ಟೇ ಎಂದು ಸರಣಿ ಟ್ವೀಟ್ ಮೂಲಕ ರಾಜ್ಯ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.

ಹಿಜಾಬ್‌ಗೆ ಎಲ್ಲಿ ವಿರೋಧ ವ್ಯಕ್ತವಾಗಿದೆ ಎನ್ನುವುದರ ಬಗ್ಗೆಯೇ ಸಿದ್ದರಾಮಯ್ಯನವರಿಗೆ ಗೊಂದಲವಿದೆ. ಹಾದಿಬೀದಿಯಲ್ಲಿ, ಕಾಲೇಜಿನ ಆವರಣದಲ್ಲಿ ಹಿಜಾಬ್‌ ನಿಷೇಧಿಸಿಲ್ಲ. ವಸ್ತ್ರಸಂಹಿತೆಯ ಪ್ರಕಾರ ತರಗತಿಯಲ್ಲಿ ಅವಕಾಶ ನೀಡಿಲ್ಲ. ಹಿಜಾಬ್‌ ಒಳಗೆ ಅಡಗಿರುವ ʼಅಲ್ಪʼ ಮತಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಹಿಂದೂಗಳು ಎಂದರೆ ಏಕೆ ಅಸಹನೆ? ಚುನಾವಣೆ ಹತ್ತಿರ ಬಂದಾಗಲೆಲ್ಲ ʼಸಾಫ್ಟ್‌ ಹಿಂದುತ್ವʼ ಎಂಬ ಗುರಾಣಿ ಹಿಡಿಯುವ ಕಾಂಗ್ರೆಸ್‌ ಉಳಿದ ಸಮಯದಲ್ಲಿ ಹಿಂದೂ ವಿರೋಧಿ ನೀತಿಗಳನ್ನೇ ಅನುಸರಿಸುತ್ತದೆ ಎಂದು ವಾಗ್ದಾಳಿ ನಡೆಸಿದೆ.

ಸುಳ್ಳುಗಳ ಹೊರತಾಗಿ ನಿಮ್ಮ ರಾಜಕೀಯ ನಡೆಯುವುದಿಲ್ಲ, ಅಲ್ವೇ ಸಿದ್ದರಾಮಯ್ಯ? ಹಿಜಾಬ್‌ ವಿಚಾರದಲ್ಲಿ ಹಿಜಾಬ್‌ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದರು, ನ್ಯಾಯಾಲಯ ಇವರ ಹೇಳಿಕೆಗೆ ವಿರುದ್ಧವಾದ ತೀರ್ಪು ನೀಡಿತು.

ರಾಷ್ಟ್ರಧ್ವಜವೇ ಇರದ ಸ್ಥಂಭದಲ್ಲಿ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾಕಿದ್ದಾರೆ ಎಂಬ ಸುಳ್ಳು ಹೇಳಿದರು. ರಾಜಕೀಯದಲ್ಲಿ ಸುಳ್ಳು ಹೇಳುವುದಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ ಅವರ ರಾಜಕೀಯ ನಿಂತಿರುವುದೇ ಸುಳ್ಳುಗಳ ಮೇಲೆ. ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾ ತೆಗೆಯಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು. ಆದರೆ ಚಿತ್ರ ನಿರ್ಮಾಪಕರು, ಶಿವರಾಜ್‌ ಕುಮಾರ್‌ ಇದು ಸುಳ್ಳು ಆರೋಪ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button