ಪ್ರಗತಿವಾಹಿನಿ ಸುದ್ದಿ; ರಾಯಚೂರು: ವಿಧಾನಸಭಾ ಚುನಾವಣಾ ಅಖಾಡ ಕ್ಷಣ ಕ್ಷಣಕ್ಕೂ ರಂಗೇರುತ್ತಿದ್ದು, ಆಡಳಿತ -ವಿಪಕ್ಷ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದ ಇತಿಹಾಸದಲ್ಲೇ ಕಂಡರಿಯದ ಅತಿ ಭ್ರಷ್ಟ ಸಿಎಂ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ರಾಯಚೂರಿನ ಮಾನ್ವಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಬಸವರಾಜ್ ಬೊಮ್ಮಾಯಿ ಅತಿ ಭ್ರಷ್ಟ ಸಿಎಂ, ಲಿಂಗಾಯಿತ ಸಮುದಾಯಕ್ಕೆ ಕಳಂಕ ಎಂದು ನಾನು ಹೇಳಿದ್ದೆ. ಆದರೆ ಬಿಜೆಪಿ ನಾಯಕರು ನನ್ನ ಹೇಳಿಕೆಯನ್ನು ತಿರುಚಿ ಲಿಂಗಾಯಿತ ಸಮುದಾಯದವರು ಭ್ರಷ್ಟರು ಎಂದು ನಾನು ಹೇಳಿದ್ದೇನೆ ಎಂದು ಅಪಪ್ರಚಾರ ಮಾಡಿದರು. ನನ್ನ ಹೇಳಿಕೆ ಟ್ವಿಸ್ಟ್ ಮಾಡಲು ಹೋಗಿ ಠುಸ್ ಆಯ್ತು ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ಇದ್ದ ಲಿಂಗಾಯಿತ ಮುಖ್ಯಮಂತ್ರಿಗಳು ಬಹಳ ಒಳ್ಳೆಯವರಿದ್ದರು. ಆದರೆ ಸಿಎಂ ಬಸವರಾಜ್ ಬೊಮ್ಮಾಯಿ ಮಾತ್ರ ಮಹಾನ್ ಕಳ್ಳ. ಇವರ ಅವಧಿಯಲ್ಲಿ ನಡೆದಷ್ಟು ಭ್ರಷ್ಟಾಚಾರಗಳು ಕರ್ನಾಟಕದ ಇತಿಹಾಸದಲ್ಲಿಯೇ ನಡೆದಿರಲಿಲ್ಲ. ಇಂತಹ ಭ್ರಷ್ಟ ಸರ್ಕಾರವನ್ನು ತೊಗಲಿಸಬೇಕಿದೆ ಎಂದು ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಪ್ರಧಾನಿ ಮೋದಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಬಳ್ಳಾರಿಯಲ್ಲಿ ಲಿಂಗಾಯಿತರಿಗೆ ಬಿಜೆಪಿ ಟಿಕೆಟ್ ಕೊಟ್ರಾ? ರಾಜ್ಯದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಾರಾ? ಅಂದಮೇಲೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಲ್ಲಿ ಆಗುತ್ತೆ? ಎಂದು ಪ್ರಶ್ನಿಸಿದರು.
ಲಿಂಗಾಯಿತರಿಗೆ ಅವಮಾನ ಮಾಡುತ್ತಿರುವುದು ಬಿಜೆಪಿ. ಬಿ.ಎಲ್.ಸಂತೋಷ್ ಅವರು ಯಡಿಯೂರಪ್ಪನವನ್ನು ಕೆಳಗಿಳಿಸಿದ್ರು. ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿ ಯಡಿಯೂರಪ್ಪನವರು ಗೊಳೋ ಅಂತ ಅಳುವಂತೆ ಮಾಡಿದ್ರು, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಯವರಿಗೆ ಟಿಕೆಟ್ ಕೊಡದೇ ಆಚೆ ಹಾಕಿದ್ರು. ಇಷ್ಟೆಲ್ಲ ಮಾಡಿ ಈಗ ಲಿಂಗಾಯಿತ ವಾರಸ್ದಾರರಂತೆ ಮಾತಾಡ್ತಾರೆ. ಇವರಿಂದ ನಾವು ಪಾಠ ಕಲಿಬೇಕಾ? ಎಲ್ಲಪ್ಪ ಬಸವರಾಜ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್? ಎಂದು ಹಿಗ್ಗಾ ಮುಗ್ಗಾ ಕಿಡಿಕಾರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ