*ಕಲುಷಿತ ನೀರಿನಿಂದ ತೊಂದರೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆ; ಕಾಲರ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ; ಸಿಎಂ ವಾರ್ನಿಂಗ್*
ಪ್ರಗತಿವಾಹಿನಿ ಸುದ್ದಿ: ಬರ ಹಾಗೂ ಮುಂಗಾರು ಕೃಷಿ ಚಟುವಟಿಕೆ ಕುರಿತು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಜೂನ್ 6 ರ ವರೆಗೆ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಕಾರಣದಿಂದ ತುರ್ತು ಕೆಲಸಗಳಿಗೆ ಗಮನ ಕೊಡಬೇಕು. ಎಲ್ಲ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಲು ಪ್ರಾರಂಭಿಸಬೇಕು ಎಂದು ಸೂಚಿಸಿದರು.
ಫೆಬ್ರುವರಿಯಲ್ಲಿ ಬಜೆಟ್ ಮಂಡಿಸಲಾಗಿದೆ. ಆರ್ಥಿಕ ವರ್ಷದ ಎರಡು ತಿಂಗಳು ಕಳೆದು ಹೋಗುತ್ತಿದೆ. ಒಂದು ವರ್ಷದಲ್ಲಿ ಮಾಡುವ ಕೆಲಸವನ್ನು 10 ತಿಂಗಳಲ್ಲಿ ಮಾಡಿ ಮುಗಿಸುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಾರ್ಯದರ್ಶಿಗಳ ಸಭೆ ನಡೆಸಲಾಯಿತು. ಜೂನ್ ಕೊನೆಯ ವರೆಗೆ ಎಲ್ಲ ಹೊಸ ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಸೂಚಿಸಲಾಗಿದೆ. ಟೆಂಡರ್ ಕರೆಯಲು ಯಾವುದೇ ನೀತಿ ಸಂಹಿತೆ ಅಡ್ಡ ಬರುವುದಿಲ್ಲ. ಟೆಂಡರ್ ಕರೆದು, ಅಂತಿಮಗೊಳಿಸಿ, ಕಾರ್ಯಾದೇಶ ನೀಡಲು ಪ್ರಯತ್ನಿಸಬೇಕು. ಇದರಲ್ಲಿ ವಿಳಂಬವಾದರೆ ರಾಜ್ಯದ ಅಭಿವೃದ್ಧಿಯಲ್ಲಿ ವಿಳಂಬವಾಗುತ್ತದೆ. 500 ಕ್ಕೂ ಹೆಚ್ಚು ಘೋಷಣೆಗಳನ್ನು ಮಾಡಲಾಗಿದೆ. ಈ ಬಗ್ಗೆ ಎಲ್ಲ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು. ಅಭಿವೃದ್ಧಿ ಕಡೆ ಹೆಚ್ಚು ಗಮನ ಹರಿಸಲು ಎಂದು ಹೇಳಿದರು.
ಪೂರ್ವ ಮುಂಗಾರು ಮಳೆ ಪ್ರಾರಂಭವಾಗಿದೆ. ವಾಡಿಕೆಗಿಂತ ಹೆಚ್ಚು ಮಳೆ ಮೇ ತಿಂಗಳಲ್ಲಿ ಆಗಿದೆ. ಬಿತ್ತನೆ ಕೆಲಸವೂ ಪ್ರಾರಂಭವಾಗಿದೆ. ಮೇ ತಿಂಗಳಲ್ಲಿ ಗುರಿ 2.95 ಲಕ್ಷ ಹೆಕ್ಟೇರ್ ಪ್ರದೇಶ. ಸಾಧನೆಯಾಗಿರುವುದು 68,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇನ್ನೂ 13 ದಿನ ಬಾಕಿದೆ. ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿದೆ ಎಂದರು.
ಇದೇ ವೇಳೆ ಮೈಸೂರಿನ ಟಿ. ನರಸೀಪುರ ತಾಲ್ಲೂಕು ತಗಡೂರು ಹಾಗೂ ಕೆ.ಸಾಲುಹುಂಡಿ ಗ್ರಾಮಗಳಲ್ಲಿ ಕಾಲರಾ ಪತ್ತೆ ಹಾಗೂ ಕಲುಷಿತ ನೀರಿನಿಂದ ಓರ್ವ ಸಾವು 100ಕ್ಕೂ ಹೆಚ್ಚು ಜನ ಅಸ್ವಸ್ಥ ಪ್ರಕರಣ ಸಂಬಂಧ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ, ಕಲುಷಿತ ನೀರು ಕುಡಿದು ಕಾಲರಾ ಉಂಟಾಗಿದೆ. ಸಂಬಂಧಪಟ್ಟ ಎಂಜಿನಿಯರುಗಳು ಕುಡಿಯಲು ಯೋಗ್ಯ ನೀರು ಒದಗಿಸಲು ವಿಫಲವಾಗಿದ್ದಾರೆ. ಕುಡಿಯುವ ನೀರಿನ ಮೂಲ ಕುಡಿಯಲು ಯೋಗ್ಯವಾಗಿದೆಯೇ ಇಲ್ಲವೇ ಎಂದು ಪರಿಶೀಲಿಸದಿರುವುದು ದೊಡ್ಡ ಅಪರಾಧ. ಕೆ. ಸಾಲುಹುಂಡಿಯಲ್ಲಿ 40 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿ, ಒಬ್ಬ ಯುವಕ ಮೃತಪಟ್ಟಿದ್ದಾನೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ಗುಡುಗಿದರು.
ಕಾಲರಾ ಅಥವಾ ಇನ್ನಿತರ ಸಾಂಕ್ರಾಮಿಕಗಳು ಕಾಣಿಸಿಕೊಂಡರೆ ಹಿರಿಯ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿಸಲಾಗುವುದು. ಜಿಲ್ಲಾ ಮಟ್ಟದ ಅಧಿಕಾರಿಗಳೇ ಇದಕ್ಕೆ ಹೊಣೆ. ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಲಾಗುವುದು. ಇನ್ನು ಮುಂದೆ ಕಲುಷಿತ ನೀರಿನಿಂದ ತೊಂದರೆ ಆದರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ. ಕಾಲರ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ