Politics

*ಡೆತ್ ನೋಟ್ ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆಯಾ? ಬಿಜೆಪಿಯವರು ದಾಖಲೆಯಿಟ್ಟು ಮಾತನಾಡಲಿ ಎಂದ ಸಿಎಂ*

ಸಚಿವ ಪ್ರಿಯಾಂಕ ಖರ್ಗೆಯವರು ರಾಜಿನಾಮೆ ನೀಡುವ ಪ್ರಶ್ನೆ ಇಲ್ಲ

ಪ್ರಗತಿವಾಹಿನಿ ಸುದ್ದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆಯವರು ರಾಜಿನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಇದು ರಾಜಕೀಯ ದ್ವೇಷದಿಂದ ಮಾಡಿರುವ ಆರೋಪ ಎಂದು ಮುಖ್ಯಮಂತ್ತಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಡೆತ್ ನೋಟ್ ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರಿದೆಯಾ? ಅವರ ಹೆಸರಿಲ್ಲ, ಪ್ರಕರಣದಲ್ಲಿ ಅವರ ಪಾತ್ರವೂ ಇಲ್ಲ. ಹೀಗಿರುವಾಗ ಪ್ರಿಯಾಂಕ್ ಖರ್ಗೆ ಯಾಕೆ ರಾಜೀನಾಮೆ ಕೊಡಬೇಕು? ಬಿಜೆಪಿಯವರ ಆರೋಪಕ್ಕೆ ಅರ್ಥವಿದೆಯಾ? ಎಂದು ಕಿಡಿಕಾರಿದರು.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆಯವರು ರಾಜಿನಾಮೆ ನೀಡಬೇಕೆಂಬ ಪ್ರತಿಪಕ್ಷಗಳ ಒತ್ತಾಯ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ , ಆತ್ಮಹತ್ಯೆ ಮಾಡಿಕೊಂಡಿರುವ ಬೀದರ್ ನ ಗುತ್ತಿಗೆದಾರನ ಡೆತ್ ನೋಟ್ ನಲ್ಲಿ ಸಚಿವ ಪ್ರಿಯಾಂಕ ಖರ್ಗೆಯವರ ಹೆಸರಿರುವುದಿಲ್ಲ. ಈ ಪ್ರಕರಣದಲ್ಲಿ ಅವರ ಪಾತ್ರವಾಗಲಿ , ಸಾಕ್ಷ್ಯವಾಗಲಿ ಇಲ್ಲ. ಆದ್ದರಿಂದ ರಾಜಿನಾಮೆ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಆದಾಗ್ಯೂ ಯಾವುದೇ ವಿಚಾರಣೆಗೆ ತಾನು ಸಿದ್ಧವಿರುವುದಾಗಿ ಸಚಿವರು ತಿಳಿಸಿದ್ದಾರೆ.ಆದರೆ ಇಂತಹದೇ ಪ್ರಕರಣದಲ್ಲಿ ಹಿಂದೆ ಬಿಜೆಪಿಯ ಕೆ.ಎಸ್.ಈಶ್ವರಪ್ಪಅವರ ಹೆಸರನ್ನು ಡೆತ್ ನೋಟ್ ನಲ್ಲಿ ಬರೆಯಲಾಗಿತ್ತು. ಪ್ರಕರಣದ ಸಂಬಂಧ ದಾಖಲಾಗಿರುವ ದೂರಿನ ತನಿಖೆಯನ್ನು ಸಿಐಡಿ ಗೆ ವಹಿಸಲಾಗಿದ್ದು, ವರದಿ ಬಂದ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು. ಇದು ರಾಜಕೀಯ ದ್ವೇಷದಿಂದ ಮಾಡಿರುವ ಆರೋಪ ಎಂದು ತಿಳಿಸಿದರು.

ಬಿಜೆಪಿ ಯಾವುದೇ ಪ್ರಕರಣವನ್ನು ಸಿಬಿಐ ಗೆ ವಹಿಸಿಲ್ಲ

ಬಿಜೆಪಿಯವರು ತನಿಖೆಯನ್ನು ಸಿಬಿಐ ಗೆ ವಹಿಸಬೇಕೆಂದು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದ ಪೊಲೀಸರ ಬಗ್ಗೆ ಬಿಜೆಪಿಯವರಿಗೆ ನಂಬಿಕೆಯಿಲ್ಲವೇ? ಬಿಜೆಪಿಯವರು ಅಧಿಕಾರದಲ್ಲಿದ್ದಾಗ , ಒಂದು ಪ್ರಕರಣವನ್ನೂ ಸಿಬಿಐಗೆ ವಹಿಸಿರಲಿಲ್ಲ. ಆದ್ದರಿಂದ ಸಿಬಿಐಗೆ ತನಿಖೆ ವಹಿಸಬೇಕೆಂಬ ಬೇಡಿಕೆ ಮುಂದಿರಿಸಲು ಬಿಜೆಪಿಯವರಿಗೆ ನೈತಿಕತೆ ಇಲ್ಲ ಎಂದು ತಿಳಿಸಿದರು.

ಸಿ.ಟಿ.ರವಿ ಪ್ರಕರಣ ಸಿಐಡಿ ತನಿಖೆ

ಎಂಎಲ್ ಸಿ ಸಿ.ಟಿರವಿಯವರು ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿ.ಟಿ.ರವಿಯವರ ಪ್ರಕರಣವನ್ನೂ ಸಿಐಡಿಗೆ ವಹಿಸಲಾಗಿದೆ. ಅವಾಚ್ಯ ಪದಬಳಕೆ ಆಗಿರುವ ಬಗ್ಗೆ ಎಫ್ ಎಸ್ ಎಲ್ ವರದಿ ಬರಲಿದೆ. ಮಹಿಳಾ ಸಚಿವರಿಗೆ ಅವಹೇಳನ ಮಾಡಿರುವ ಆರೋಪವಿದ್ದು, ಸಿ.ಟಿ.ರವಿಯವರ ಮೇಲೆ ದೂರು ದಾಖಲಾಗಿದೆ ಎಂದರು.

ಹೊಸ ವರ್ಷದ ಸಂದರ್ಭದಲ್ಲಿ ವಿರೋಧ ಪಕ್ಷದವರಿಗೆ ಭಗವಂತ ಸದ್ಭುದ್ಧಿಯನ್ನು ನೀಡಲೆಂದು ಪ್ರಾರ್ಥಿಸುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು , ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button